ಕಾಶ್ಮೀರದಲ್ಲಿ ತಾಲಿಬಾನ್ ಮಾದರಿಯಲ್ಲಿ ಉಗ್ರರ ಅಟ್ಟಹಾಸ, 21 ಶಾಲೆಗಳಿಗೆ ಬೆಂಕಿ, 2 ಬ್ಯಾಂಕ್‍ಗಳ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

Fire-Kashmir----b

ಶ್ರೀನಗರ, ಅ.28– ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಶಾಲೆಗಳು ಮತ್ತು ಬ್ಯಾಂಕ್‍ಗಳನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ದಾಳಿಗಳ ಮಾದರಿಯಲ್ಲೇ ಕಾಶ್ಮೀರ ಕಣಿವೆಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದರ ಅಟ್ಟಹಾಸ ಆತಂಕ ಸೃಷ್ಟಿಸಿದೆ. ಶಾಲೆಗಳನ್ನು ಧ್ವಂಸಗೊಳಿಸುವುದು ಮತ್ತು ಬ್ಯಾಂಕ್‍ಗಳನ್ನು ಲೂಟಿ ಮಾಡುವುದು ಲಷ್ಕರ್ ಉಗ್ರರ ಹೊಸ ತಂತ್ರವಾಗಿದೆ. ಒಟ್ಟು 21 ಶಾಲೆಗಳಿಗೆ ಬೆಂಕಿ ಹಚ್ಚಿರುವ ಉಗ್ರರು, ಎರಡು ಬ್ಯಾಂಕ್‍ಗಳನ್ನು ಲೂಟಿ ಮಾಡಿದ್ದಾರೆ.  ಕುಲ್ಗಾಂನಲ್ಲಿನ ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಶಾಖೆ ಮೇಲೆ ಬುಧವಾರ ದಾಳಿ ನಡೆಸಿದ ಶಸ್ತ್ರಸಜ್ಜಿತ ಲಷ್ಕರ್ ಉಗ್ರರು 2 ಲಕ್ಷ ರೂ. ನಗದು ಮತ್ತು ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನೊಂದೆಡೆ ಮಧ್ಯ ಕಾಶ್ಮೀರದಲ್ಲಿ ಆಗತಾನೇ ಹಣ ತುಂಬಿಸಿದ್ದ ಎಟಿಎಂ ಯಂತ್ರವನ್ನು ಅಪಹರಿಸಲಾಗಿದೆ.

ಬ್ಯಾಂಕ್‍ಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಉಗ್ರರು ದಕ್ಷಿಣ ಕಾಶ್ಮೀರದ ಅನೇಕ ಭಾಗಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸಿದ್ದಾರೆ. ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಬ್ಯಾಂಕ್‍ಗಳ ಬೆಂಬಲ ನೀಡಬೇಕು. ಅವರು ಪ್ರತಿಭಟನೆ ನಡೆಸುವಾಗ ಬ್ಯಾಂಕ್‍ಗಳನ್ನು ಬಂದ್ ಮಾಡಬೇಕು ಹಾಗೂ ಸಂಜೆ 5 ಗಂಟೆ ನಂತರ ಮಾತ್ರ ವಹಿವಾಟು ನಡೆಸಬೇಕೆಂಬ ಬೇಡಿಕೆಗಳನ್ನು ಭಿತ್ತಿಪತ್ರಗಳಲ್ಲಿ ತಿಳಿಸಿದ್ದಾರೆ. ಈ ಪೋಸ್ಟರ್‍ಗಳಿಗೆ ಲಷ್ಕರ್ ಜಿಲ್ಲಾ ಕಮಾಂಡರ್ ಸಹಿ ಮಾಡಿದ್ದಾನೆ. ಈ ಷರತ್ತುಗಳನ್ನು ಮೀರಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಾಶ್ಮೀರ ಕಣಿವೆಯ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ಗಳ ಮೇಲೆ ಉಗ್ರರು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿನ ಜೆ ಅಂಡ್ ಕೆ ಬ್ಯಾಂಕ್‍ನ ಬಹುತೇಕ ಶಾಖೆಗಳು ಮುಚ್ಚಲ್ಪಟ್ಟಿವೆ. ಶ್ರೀನಗರದ ಕೆಲವು ಮಾತ್ರ ಬೆಳಿಗ್ಗೆ 7 ರಿಂದ ಬೆಳಿಗ್ಗೆ 11ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಈಗ ಈ ವಹಿವಾಟಿಗೂ ಉಗ್ರಗಾಮಿಗಳಿಂದ ಬೆದರಿಕೆ ಉಂಟಾಗಿದೆ.

 ಶಾಲೆಗಳ ಮೇಲೆ ದಾಳಿ :

ಇನ್ನೊಂದೆಡೆ ಪಾಕ್ ಮತ್ತು ಅಫ್ಘನ್‍ನಲ್ಲಿ ಶಾಲೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸುತ್ತಿರುವ ರೀತಿಯಲ್ಲೇ ಕಾಶ್ಮೀರ ಶಿಕ್ಷಣ ಸಂಸ್ಥೆಗಳನ್ನು ಲಷ್ಕರ್ ಭಯೋತ್ಪಾದಕರು ಧ್ವಂಸಗೊಳಿಸುತ್ತಿದ್ದಾರೆ. ಉತ್ತರ ಕಾಶ್ಮೀರದ ಪಠಾಣ್‍ನ ತಾಪರ್‍ನಲ್ಲಿ ನಿನ್ನೆ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಇದರೊಂದಿಗೆ ಅಗ್ನಿಗಾಹುತಿಯಾದ ಶಾಲೆಗಳ ಸಂಖ್ಯೆ 21ಕ್ಕೆ ಏರಿದೆ. ಹಿಜ್‍ಬುಲ್ ಭಯೋತ್ಪಾದಕ ಬುರ್‍ಹಾನ್ ವಾನಿ ಜುಲೈ 8ರಂದು ಹತನಾದ ನಂತರ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಲಷ್ಕರ್ ಬೆಂಬಲಿತ ಪ್ರತಿಭಟನೆಕಾರರು ಈ ಕೃತ್ಯ ಎಸಗಿದ್ದಾರೆ.

ಕಣಿವೆಯಲ್ಲಿ ಶಾಲಾ-ಕಾಲೇಜುಗಳು ಆರಂಭಿಸಲು ಯತ್ನಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಲಷ್ಕರ್ ವಕ್ತಾರ ಅಬ್ದುಲ್ಲಾ ಘಜ್ನವಿ ಕಾಶ್ಮೀರದ ಶಿಕ್ಷಣ ಸಚಿವ ನಯೀಮ್ ಅಖ್ತರ್‍ಗೆ ಈ ಹಿಂದೆ ಬೆದರಿಕೆ ಒಡ್ಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin