ಕಾಶ್ಮೀರದಲ್ಲಿ ಸೇನಾ ನೆಲೆ ಮೇಲೆ ಇಂದು ಮತ್ತೆ ಭಾರೀ ಹಿಮಪಾತ, ಐವರು ಯೋಧರು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

Kashmir

ಶ್ರೀನಗರ, ಜ.28- ಕಾಶ್ಮೀರ ಕಣಿವೆಯಲ್ಲಿ ಹಿಮಪಾತ ಮುಂದುವರೆದಿದ್ದು, ಇಂದು ಸಂಭವಿಸಿದ ಭಾರೀ ಹಿಮಪಾತದಲ್ಲಿ ಹಲವಾರು ಯೋಧರು ಮಂಜುಗಡ್ಡೆ ಯಡಿ ಸಿಲುಕಿರುವ ಘಟನೆ ಕುಪ್ವಾರ ಜಿಲ್ಲೆ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಮಚ್ಚಿಲ್ ವಲಯದಲ್ಲಿ ನಡೆದಿದೆ.  ಕಳೆದ ನಾಲ್ಕು ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಆರನೆ ಹಿಮಪಾತ ಇದಾಗಿದ್ದು,ಸಾವು-ನೋವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವಿದೆ. ಮತ್ತೆ ಭಾರೀ ಹಿಮಪಾತವಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು,  ಸೇನಾನೆಲೆಗಳು ಮತ್ತು ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

ಬೃಹತ್ ಗಾತ್ರದ ಹಿಮಚಪ್ಪಡಿಗಳ ಅಡಿ ಸಿಲುಕಿರುವ ಯೋಧರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಹಿಮವರ್ಷಧಾರೆ ಸುರಿಯುತ್ತಿದ್ದು, ಅತ್ಯಂತ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಕಾಶ್ಮೀರ ಕಣಿವೆ ಮತ್ತು ಲಡಾಕ್ ಪ್ರದೇಶದಲ್ಲಿ ಇಂದು ಭಾರೀ ಹಿಮಪಾತ ಮತ್ತು ನೀರ್ಗಲ್ಲು ಕುಸಿತ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದ ಬೆನ್ನಲ್ಲೇ ಈ ದುರಂತ ಸಂಭವಿಸಿದೆ.

ಕಳೆದ ಗಣರಾಜ್ಯೋತ್ಸವ ದಿನದಿಂದ ಕಾಶ್ಮೀರ ಕಣಿವೆಯ ವಿವಿಧೆಡೆ ಭಾರೀ ಹಿಮ ಕುಸಿದಿರುವುದರಿಂದ ಈವರೆಗೆ 22 ಯೋಧರು ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಮತ್ತೆ ಹಿಮಪಾತವಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತು ಗಸ್ತು ಕರ್ತವ್ಯದಲ್ಲಿರುವ ಸೇನಾ ಸಿಬ್ಬಂದಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.  ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಹಿಮಪಾತ ಅಧಿಕ ಪ್ರಮಾಣದಲ್ಲಿದ್ದು, ರಾಜಧಾನಿ ಶ್ರೀನಗರ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳು ಹಿಮದಿಂದ ಆವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಹಿಮಪಾತದಲ್ಲಿ ಹಾಸನ ಯೋಧ ಸಂದೀಪ್ ಹುತಾತ್ಮರಾಗಿದ್ದು, ಬೆಳಗಾವಿಯ ಮೇಜರ್ ಶ್ರೀಹರಿ ಕುಗಜಿ, ಯೋಧ ಬಂಡಿವಡ್ಡರ್ ಅವರು ಹಿಮರಾಶಿಯಿಂದ ಎದ್ದುಬಂದು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಹಿಮಪಾತದ ಅವಶೇಷಗಳಡಿ ಸಿಲುಕಿರುವ ಮೃತ ದೇಹಗಳನ್ನು ಪತ್ತೆಮಾಡಲು ಕಾರ್ಯಾಚರಣೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin