ಕಾಶ್ಮೀರದಿಂದಲೇ ಕರ್ನಾಟಕ ಬಂದ್ ಗೆ ಸುದೀಪ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Sudeep

ಬೆಂಗಳೂರು ಸೆ.09 : ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಂದ್ ಗೆ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ನಿಮಿತ್ತ ಚಿತ್ರರಂಗದ ಗಣ್ಯರು ನಡೆಸುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ ಗೈರಾಗಿದ್ದಕ್ಕೆ ವಿಷಾದ ಸೂಚಿಸಿದ್ದಾರೆ. ತಮ್ಮ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ತೆರಳಿರುವ ಸುದೀಪ್ ಅಲ್ಲಿಂದಲೇ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದು, ಕಾವೇರಿ ಹೋರಾಟಕ್ಕೆ ತಾವು ಸದಾ ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ ಹೋರಾಟದಲ್ಲಿ ತಾವು ಸ್ವತಃ ಭಾಗಿಯಾಗದೇ ಇರುವ ಕುರಿತು ಸುದೀಪ್ ವಿಷಾದ ಸೂಚಿಸಿದ್ದಾರೆ. “ಸಮಸ್ತ ಕನ್ನಡ ಜನತೆಗೆ ಕರ್ನಾಟಕದ ಜನತೆಗೆ ಹೆಬ್ಬುಲಿ ಚಿತ್ರತಂಡದ ಪರವಾಗಿ ನಮಸ್ಕಾರ. ಈಗ ನಡೆಯುತ್ತಿರುವ ಕಾವೇರಿ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ.

ನಾವು ಶ್ರೀನಗರದಿಂದ ಬಹಳ ದೂರವಿರುವ ಕಾರಣದಿಂದ ಇಲ್ಲಿ ಯಾವುದೇ ರೀತಿಯ ಮೊಬೈಲ್ ನೆಟ್’ವರ್ಕ್ ಸಿಗುತ್ತಿಲ್ಲ. ಹೀಗಾಗಿ ನನಗೆ ಈ ವಿಚಾರ ತಿಳಿದಿರಲಿಲ್ಲ. ತಿಳಿಯುತ್ತಿದ್ದಂತೆಯೇ ನಾನು ಮತ್ತು ನನ್ನ ಚಿತ್ರತಂಡ ನೆಟವರ್ಕ್ ಇರುವಲ್ಲಿ ಬಂದು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಕಳಿಸುತ್ತಿದ್ದೇನೆ. ಈಗ ಬೆಂಗಳೂರಿಗೆ ಹೊರಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ನಮ್ಮ ಜನ, ನಮ್ಮ ನೆಲಕ್ಕೆ, ನಮ್ಮ ನೀರಿಗೆ ಸಂಪೂರ್ಣ ಚಿತ್ರರಂಗ ಹಾಗೂ ನನ್ನ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಎನ್ನಲು ಇಷ್ಟ ಪಡುತ್ತೇನೆ. ನಾವು ಅಲ್ಲಿರದಿದ್ದರೂ ನನ್ನ ಸಹಕಾರ ಹಾಗೂ ಬೆಂಬಲ ನಿಮ್ಮೊಂದಿಗೆ ಇದ್ದೇ ಇದೆ. ಕಾವೇರಿ ನಮ್ಮದು ಯಾವತ್ತಿದ್ದರೂ ನಮ್ಮದೇ, ಆ ನಮ್ಮದು ಎನ್ನುವುದಕ್ಕೆ ನಾವು ಹೋರಾಡೋಣ. ಎಲ್ಲೋ ಒಂದು ಕಡೆ ನ್ಯಾಯ ನಮಗೆ ಒದಗುತ್ತದೆ ಅದಕ್ಕೆ ಅಂತ ಒಂದು ದಾರಿ ಇದ್ದೇ ಇರುತ್ತದೆ. ಅದನ್ನು ನಾವು ಹುಡುಕೋಣ. ಮತ್ತೊಮ್ಮ ನಾನು ಅಲ್ಲಿ ಇರದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.

ಅಂತೆಯೇ ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಸುದೀಪ್ ಚಿತ್ರರಂಗದ ಪ್ರತಿಭಟನೆಯಲ್ಲಿ ತಾವು ಇಲ್ಲದಿದ್ದರೂ, ಮಾನಸಿಕವಾಗಿ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಕನ್ನಡ ಪರ ಹೋರಾಟಗಾರರು ಹಾಗೂ ರೈತಪರ ಹೋರಾಟಗಾರರು ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸುದೀಪ್ ಮನವಿ ಮಾಡಿದ್ದಾರೆ.

Facebook Comments

Sri Raghav

Admin