ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಆತ್ಮಾಹುತಿ ದಾಳಿಗೆ, ಮೂವರು ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Uri-Attack

ಶ್ರೀನಗರ, ಸೆ.18-ಇಂದು ಬೆಳ್ಳಂಬೆಳಿಗ್ಗೆಯೇ ಕಾಶ್ಮೀರ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಸೇನಾಪಡೆಯ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ. ಇದೇ ವೇಳೆ ಸೇನಾಪಡೆ ದಿಟ್ಟತನದ ಪ್ರತಿ ದಾಳಿ ನಡೆಸಿ ನಾಲ್ವರು ಉಗ್ರರನ್ನು ಹೊಡೆದುರುಳಿವೆ. ಈ ಕಾರ್ಯಾಚರಣೆಯಲ್ಲಿ 18ಕ್ಕೂ ಹೆಚ್ಚು ಸೈನಿಕರು ತೀವ್ರ ಗಾಯಗೊಂಡಿದ್ದು, ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ.  ಘಟನೆ ಹಿನ್ನೆಲೆಯಲ್ಲಿ ತಮ್ಮ ರಷ್ಯಾ ಮತ್ತು ಅಮೆರಿಕ ಪ್ರವಾಸ ಮುಂದೂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ 5.30ರಲ್ಲಿ ಆತ್ಮಾಹುತಿ ದಳದ ಉಗ್ರರು ಬಾರಾಮುಲ್ಲಾ ಜಿಲ್ಲೆಯು ಉರಿ ಪಟ್ಟಣದ ಸೇನಾ ನೆಲೆ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದರು. ತಕ್ಷಣ ಕಚೇರಿಯನ್ನು ಸುತ್ತುವರೆದ ಸೇನಾಪಡೆ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ಧಾರೆ. ಇನ್ನು ಕೂಡ ಯೋಧರು ಮತ್ತು ಉಗ್ರರ ನಡುವೆ ದಾಳಿ ಮುಂದುವರಿದಿದೆ.   ರಾಜಧಾನಿ ಶ್ರೀನಗರದಿಂದ 102 ಕಿ.ಮೀ. ದೂರದ ಉರಿ ಪಟ್ಟಣದ 12ನೇ ಆರ್ಮಿ ಬ್ರಿಗೇಡ್‍ನ ಕೇಂದ್ರ ಕಚೇರಿಗೆ ಕೆಲವೇ ಮೀಟರ್‍ಗಳಷ್ಟು ದೂರದಲ್ಲಿರುವ ಸೇನಾ ನೆಲೆ ಮೇಲೆ ಇಂದು ನಸುಕಿನಲ್ಲಿ ಶಸ್ತ್ರಸಜ್ಜಿತ ನಾಲ್ವರು ಆತ್ಮಾಹುತಿ ದಳದ ಉಗ್ರಗಾಮಿಗಳು ದಾಳಿ ನಡೆಸಿದರು. ಈ ದಾಳಿಯಲ್ಲಿ ಕನಿಷ್ಟ ಮೂವರು ಯೋಧರು ಹುತಾತ್ಮರಾದರು. ಸೇನೆ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಹತದಾರರು. ಈ ಕಾರ್ಯಾಚರಣೆಯಲ್ಲಿ 18ಕ್ಕೂ ಹೆಚ್ಚು ಸೈನಿಕರಿಗೆ ಗಾಯಗಳಾಗಿವೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.

ಬಾರಾಮುಲ್ಲಾದ 19ನೇ ವಿಭಾಗೀಯ ಕೇಂದ್ರ ಕಚೇರಿಯಿಂದ ಹೆಲಿಕಾಪ್ಟರ್‍ಗಳನ್ನು ಸೇವೆಗೆ ಬಳಸಲಾಯಿತು. ತೀವ್ರ ಸುಟ್ಟಗಾಯಗಳು ಮತ್ತು ಗುಂಡೇಟಿಗೆ ಒಳಗಾಗಿರುವ 18 ಯೋಧರನ್ನು ಶ್ರೀನಗರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಚಿಂತಾಜನಕವಾಗಿದೆ.  ಇದೇ ಪ್ರದೇಶದ ಮೋಹ್ರಾದಲ್ಲಿ ಎರಡು ವರ್ಷಗಳ ಹಿಂದೆ ಉಗ್ರಗಾಮಿಗಳು ಇದೇ ರೀತಿಯ ದಾಳಿ ನಡೆಸಿದ್ದರು. ಡಿಸೆಂಬರ್ 5, 2014ರಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 10 ಯೋಧರು ಹುತಾತ್ಮರಾಗಿದ್ದರು.  ಉರಿ ಪಟ್ಟಣದ ಸಲಮಾಬಾದ್ ನಲ್ಲಾ ಮೂಲಕ ನುಸುಳಿರುವ ಉಗ್ರಗಾಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಇಡೀ ಪ್ರದೇಶವನ್ನು ಬಂದ್ ಮಾಡಲಾಗಿದ್ದು, ಇನ್ನುಳಿದ ಉಗ್ರರ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

ತುರ್ತುಸಭೆ :
ಕಾಶ್ಮೀರದಲ್ಲಿ ಭಯೋತ್ಪಾದಕರ ವಿಧ್ವಂಸಕ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಷ್ಯಾ ಮತ್ತು ಅಮೆರಿಕ ಪ್ರವಾಸವನ್ನು ಮುಂದೂಡಿ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿ ಕಾಶ್ಮೀರ ಪರಿಸ್ಥಿತಿಯನ್ನು ಅವಲೋಕಿಸಿದರು. ಭಯೋತ್ಪಾದಕರ ದಾಳಿಯಿಂದ ಉರಿ ವಲಯದಲ್ಲಿ ಉದ್ಭವವಾಗಿರುವ ಪರಿಸ್ಥಿತಿ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin