‘ಕಾಶ್ಮೀರದ ಕನಸು ಬಿಟ್ಟುಬಿಡಿ’ : ವಿಶ್ವಸಂಸ್ಥೆಯಲ್ಲಿ ಸುಷ್ಮಾ ಮಾಡಿದ ಭಾಷಣದ ಸಾರಾಂಶ

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj

ವಿಶ್ವಸಂಸ್ಥೆ : ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದು ಯಾವಾಗಲೂ ಭಾರತದೊಂದಿಗೆ ಇರುತ್ತದೆ. ಅದನ್ನು ಪಡೆಯುವ ಕನಸನ್ನು ಬಿಟ್ಟುಬಿಡಿ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. 71ನೇ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಅವರು, ಮುಗ್ಧರ ಮೇಲೆ ಹಲ್ಲೆ ನಡೆಸುತ್ತಿರುವ ಭಯೋತ್ಪಾದನೆಯೇ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ನವಾಜ್ ಷರೀಫ್‍ಗೆ ಟಾಂಗ್ ನೀಡಿದರು.

ಪಾಕಿಸ್ತಾನ ಪ್ರಧಾನಿ ಷರತ್ತು ರಹಿತ ಮಾತುಕತೆಯ ಬಗ್ಗೆ ಮಾತನಾಡಿದ್ದಾರೆ. ನಾನು ಷರತ್ತು ರಹಿತ ಮಾತುಕತೆ ಎಂದರೆ ಏನು ಎಂದು ಪ್ರಶ್ನಿಸುತ್ತೇನೆ? ಸರ್ಕಾರದ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಆಹ್ವಾನ ಕಳುಹಿಸಿದಾಗ ನಾವು ಏನಾದರೂ ಷರತ್ತು ವಿಧಿಸಿದ್ದೇವಾ? ನಮ್ಮಿಬ್ಬರ ದ್ವಿಪಕ್ಷಿಯ ಮಾತುಕತೆಗೆ ನಾನು ಇಸ್ಲಾಮಾಬಾದ್‍ಗೆ ತೆರಳಿದಾಗ ನಮ್ಮ ನಡುವೆ ಏನಾದರೂ ಷರತ್ತು ಇತ್ತೆ? ಪ್ರಧಾನಿ ಮೋದಿ ಕಾಬೂಲ್‍ನಿಂದ ಲಾಹೋರ್‍ಗೆ ತೆರಳಿದಾಗ ಏನಾದರೂ ಷರತ್ತು ಇತ್ತಾ ಎಂದು ಸುಷ್ಮಾ ಸ್ವರಾಜ್ ಪ್ರಶ್ನಿಸಿದರು. ಉಗ್ರರು ನಮ್ಮವರು ನಿಮ್ಮವರು ಅಲ್ಲ. ನಾವೆಲ್ಲ ಒಂದಾಗಿ ಉಗ್ರರ ವಿರುದ್ಧ ಹೋರಾಡಬೇಕು. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ಖಾತೆಯನ್ನು ತಡೆ ಹಿಡಿಯಬೇಕು. ಈ ದೇಶಗಳಿಗೆ ಶಾಂತಿ ಸ್ಥಾಪನೆ ಮಾಡುವ ಸಮಿತಿಯಲ್ಲಿ ಯಾವುದೇ ಸ್ಥಾನವನ್ನು ನೀಡಬಾರದು ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಟಾಂಗ್ ನೀಡಿದರು.

ಪಠಾಣ್‍ಕೋಟ್ ಮತ್ತು ಉರಿ ಮೇಲಿನ ಭಯೋತ್ಪಾದಕರ ದಾಳಿಯಿಂದ ನಮಗೆ ಸಿಕ್ಕಿದ್ದು ಏನು ಗೊತ್ತೆ? ಪಠಾಣ್‍ಕೋಟ್ ದಾಳಿಯ ನಂತರ ಉಗ್ರ ಬಹುದ್ದೂರ್ ಅಲಿ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ವಿಚಾರಣೆ ವೇಳೆ ಆತನೇ ಒಪ್ಪಿಕೊಂಡಿದ್ದು ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುತ್ತಿರುವುದಕ್ಕೆ ಇದಕ್ಕಿಂತ ಉತ್ತಮವಾದ ಸಾಕ್ಷ್ಯ ಬೇಕಾ ಎಂದು ವಿಶ್ವದ ನಾಯಕರಲ್ಲಿ ಪ್ರಶ್ನಿಸಿದರು. ಪಾಕಿಸ್ತಾನ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದೆ. ಯಾರು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ ಎನ್ನುವುದನ್ನು ಸ್ವತಃ ಪಾಕಿಸ್ತಾನವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಗಾಜಿನ ಮನೆಯಲ್ಲಿ ಜೀವನ ನಡೆಸುತ್ತಿರುವವರು ಇತರರ ಮೇಲೆ ಕಲ್ಲನ್ನು ಎಸೆಯಬಾರದು. ಪಾಕಿಸ್ತಾನ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಬಲೂಚಿಸ್ತಾನದಲ್ಲಾಗುತ್ತಿರುವ ಘಟನೆ ಇಡೀ ವಿಶ್ವವೇ ಪಾಕಿಸ್ತಾನದತ್ತ ನೋಡಿಕೊಳ್ಳುವಂತಾಗಿದೆ ಎಂದರು.

ಭಯೋತ್ಪಾದಕರಿಗೆ ಯಾವುದೇ ಬ್ಯಾಂಕ್ ಇಲ್ಲ. ಯಾವುದೇ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯಿಲ್ಲ. ಆದರೆ ಭಯೋತ್ಪಾದಕರಿಗೆ ಬೆಂಬಲ ನೀಡಿ ಲಾಭ ಮಾಡುತ್ತಿರುವವರು ಯಾರು? ಇವರಿಗೆ ಹಣಕಾಸಿನ ಸಹಕಾರವನ್ನು ನೀಡುತ್ತಿರುವವರು ಯಾರು ಎನ್ನುವುದನ್ನು ನಾವು ಪ್ರಶ್ನಿಸಬೇಕು ಎಂದು ಹೇಳಿದರು. ಅಮಾಯಕರ ಮೇಲಿನ ಭಯೋತ್ಪಾದಕರ ದಾಳಿ ಕಣ್ಣೀರು ತರಿಸುತ್ತದೆ. ಈ ವರ್ಷ ಕಾಬೂಲ್, ಢಾಕಾ, ಇಸ್ತಾಂಬುಲ್, ಬ್ರುಸೆಲ್ಸ್, ಬ್ಯಾಕಾಂಕ್, ಪ್ಯಾರಿಸ್, ಪಠಾಣ್‍ಕೋಟ್, ಉರಿ ಮತ್ತು ಈಗ ಪ್ರತಿನಿತ್ಯ ದಾಳಿ ಆಗುತ್ತಿರುವ ಸಿರಿಯಾ, ಇರಾಕ್ ಮೇಲೆ ದಾಳಿ ನಡೆಸುತ್ತಿರುವವರನ್ನು ನಾವು ಧಮನ ಮಾಡಬೇಕು ಎಂದು ಕೇಳಿಕೊಂಡರು.

1996ರಲ್ಲಿ ಭಾರತ ರೂಪಿಸಿದ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮೇಲೆ ಸಮಗ್ರ ನಿರ್ಣಯ (ಸಿಸಿಐಟಿ) ಇನ್ನೂ ಜಾರಿಯಾಗಿಲ್ಲ. 2016ರಲ್ಲಿ ಈ ಒಪ್ಪಂದ ಜಾರಿಯಾಗಲು ನಾವೆಲ್ಲ ಒಂದಾಗಬೇಕು ಮತ್ತು ಈಗ ತುರ್ತು ಅಗತ್ಯ ಕೂಡ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಎಲ್ಲ ದೇಶಗಳ ಜೊತೆ ಸುಷ್ಮಾ ಸ್ವರಾಜ್ ಮನವಿ ಮಾಡಿಕೊಂಡರು. ಸುಷ್ಮಾ ಸ್ವರಾಜ್ ಭಾಷಣ ವಿಶ್ವದ ನಾಯಕರು ಮೆಚ್ಚುಗೆ ಸೂಚಿಸಿದ್ದು, ಅವರ ಭಾಷಣದ ನಂತರ ಅವರನ್ನು ಅಭಿನಂದಿಸಲು ವಿಶ್ವದ ಗಣ್ಯರು ಸರದಿಯಲ್ಲಿ ನಿಂತಿರುವ ಫೋಟೋವನ್ನು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.

ಏನಿದು ಸಿಸಿಐಟಿ?
ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮೇಲೆ ಸಮಗ್ರ ನಿರ್ಣಯ (ಸಿಸಿಐಟಿ)ವನ್ನು ಭಾರತ 1996ರಲ್ಲಿ ರೂಪಿಸಿತ್ತು. ಭಯೋತ್ಪಾದಕರನ್ನು ಉತ್ತೇಜಿಸಲು ಹಣ ನೀಡುವ ರಾಷ್ಟ್ರಗಳನ್ನು ಕಾನೂನಿನ ಚೌಕಟ್ಟಿನಡಿ ತರಲು ರೂಪಿಸಿದ್ದ ನಿರ್ಣಯ ಇದು. ಈ ನಿರ್ಣಯ ರೂಪುಗೊಂಡು ಎರಡು ದಶಕಗಳಾದರೂ ಕೆಲ ದೇಶಗಳ ನಡುವೆ ಒಮ್ಮತ ಮೂಡದ ಕಾರಣ ಇನ್ನೂ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.

Facebook Comments

Sri Raghav

Admin