ಕಾಶ್ಮೀರದ ಹಿಮಪಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಬೆಳಗಾವಿ ಯೋಧ

ಈ ಸುದ್ದಿಯನ್ನು ಶೇರ್ ಮಾಡಿ

Srihari-Kujagi

ಬೆಂಗಳೂರು,ಜ.27-ಜಮ್ಮುಕಾಶ್ಮೀರದ ಗಂದೇರ್‍ಬಲ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿದ್ದ ಕರ್ನಾಟಕದ ವೀರ ಯೋಧನೊಬ್ಬ ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಬೆಳಗಾವಿಯ ಮೇಜರ್ ರ್ಯಾಂಕ್‍ನ ಶ್ರೀಹರಿ ಕುಗಜಿ ಎಂಬುವರೇ ಪುರ್ನಜನ್ಮ ಪಡೆದ ವೀರಯೋಧ.   ಮಹಾರ್‍ಬೆಟಾಲಿಯನ್‍ನಲ್ಲಿ ಮೇಜರ್ ಶ್ರೇಣಿಯ ಯೋಧರಾಗಿರುವ ಶ್ರೀಹರಿ ಕುಗಜಿ ಗಂದೇರ್‍ಬಲ್ ಜಿಲ್ಲೆಯ ಕೇಂದ್ರ ಕಾಶ್ಮೀರದ ಸೋನಮಾರ್ಗ್‍ನಲ್ಲಿ ಹಿಮಪಾತಕ್ಕೆ ಸಿಲುಕಿದ್ದರು.  ಬುಧವಾರ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಭಾರೀ ಹಿಮಪಾತ ಉಂಟಾಗಿ ಸಿಲುಕಿಕೊಂಡಿದ್ದರು. ಸುಮಾರು ಎರಡು ಗಂಟೆಗಳ ಕಾಲ ಹಿಮರಾಶಿಯಲ್ಲಿ ಬಿದ್ದಿದ್ದ ಅವರನ್ನು ಸೈನಿಕರು ತಕ್ಷಣವೇ ಸ್ಥಳಕ್ಕಾಗಮಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯಕ್ಕೆ ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಗಜಿಯವರು ನಾನು ಸುರಕ್ಷಿತವಾಗಿದ್ದೇನೆ, ನನ್ನ ತಂದೆತಾಯಿಗಳು, ಕುಟುಂಬಸ್ಥರು ಸಂಬಂಧಿಕರು ಸೇರಿದಂತೆ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.  ಈಗಾಗಲೇ ಬೆಳಗಾವಿಯಲ್ಲಿರುವ ಅವರ ತಂದೆತಾಯಿಗೆ ದೂರವಾಣಿ ಮೂಲಕ ಮಾತನಾಡಿ ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.

ನಡೆದದ್ದೇನು:
ಕಳೆದ ಒಂದು ತಿಂಗಳಿನಿಂದ ಜಮ್ಮುಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರ ಪರಿಣಾಮ ಮಧ್ಯ ಕಾಶ್ಮೀರ, ಗಂದೇರ್‍ಬಲ್, ಸೋನ್‍ಮಾರ್ಗ್ ಹೆದ್ದಾರಿಯಲ್ಲಿ ಟನ್ ಗಟ್ಟಲೇ ಹಿಮ ಬೀಳುತ್ತಿದೆ.  ಬುಧವಾರವಷ್ಟೇ ನಾಲ್ವರು ಸೈನಿಕರು ಹಿಮಪಾತಕ್ಕೆ ಸಿಲುಕಿ, ನಿನ್ನೆ 10 ಮಂದಿ ಯೋಧರು ಕೊನೆಯುಸಿರೆಳೆದಿದ್ದರು. ಜಗತ್ತಿನಲ್ಲೇ ಅತ್ಯಂತ ಎತ್ತರದ ಯುದ್ಧ ಭೂಮಿ ಎಂದೇ ಗುರುತಿಸಿಕೊಂಡಿರುವ ಸಿಯಾಚಿನ್ ನೀರ್ಗಲಿನಲ್ಲಿ ಶ್ರೀಹರಿ ಕುಗಜಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಬುಧವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಭಾರೀ ಹಿಮಪಾತ ಉಂಟಾಗಿ ಶ್ರೀಹರಿ ಸಿಲುಕಿಕೊಂಡಿದ್ದರು. ದುರದೃಷ್ಟವೆಂದರೆ ಇವರ ಕೂಗಳತೆ ದೂರದಲ್ಲಿ ನಿಂತಿದ್ದ ಸೈನಿಕನೊಬ್ಬ ನೋಡು ನೋಡುತ್ತಿದ್ದಂತೆ ಹಿಮಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದ.

ಶ್ರೀಹರಿ ಕುಗಜಿಗೆ ತಲೆ, ಕುತ್ತಿಗೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಒಂದೆರಡು ವಾರಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಹುಬ್ಬಳ್ಳಿಯ ಲ್ಯಾನ್ಸ್ ನಾಯಕ್, ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ನೀರ್ಗಲಿನಲ್ಲಿ ಆರು ದಿನ ಸಿಲುಕಿಕೊಂಡು ಸಾವುಬದುಕಿನ ನಡುವೆ ಹೋರಾಟ ನಡೆಸಿದರೂ ವಿಧಿಯ ಅಟ್ಟಹಾಸದ ಮುಂದೆ ಅವರು ಬದುಕುಳಿಯಲಿಲ್ಲ.

Srihari-Kugaji-1

ಸಂಬಂಧಿಕರ ಸಂತಸ:  
ಯೋಧ ಶ್ರೀಹರಿ ಕುಗಜಿ ಅವರು ಪವಾಡ ಸದೃಶರೀತಿಯಲ್ಲಿ ಪಾರಾಗಿ ಬಂದಿದ್ದಕ್ಕೆ ನಗರದಲ್ಲಿ ಸಂತಸ ವಾತಾವರಣ ಮೂಡಿದ್ದು, ದೇವಾಲಯಗಳಲ್ಲಿ ನಾಗರಿಕರು, ದೇಶಾಭಿಮಾನಿಗಳು, ಕುಟುಂಬಸ್ಥರು ಪೂಜೆ ಪುನಸ್ಕಾರ ನಡೆಸುತ್ತಿರುವುದು ಎಲ್ಲೆಡೆ ಕಂಡು ಬಂದಿತು.

Srihari-Kugaji

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin