ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಸೇನೆ ತೀವ್ರ ಕಾರ್ಯಾಚರಣೆ : ಕಲ್ಲು ತೂರಾಟ
ಶ್ರೀನಗರ, ಮೇ 4-ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮತ್ತೆ ಹಿಂಸಾಚಾರಗಳ ಮೂಲಕ ಅಟ್ಟಹಾಸ ಮೆರೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳ ಪತ್ತೆಗಾಗಿ ಇಂದು ಸೇನೆ ಭಾರೀ ಸೇನಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ದಕ್ಷಿಣ ಕಾಶ್ಮೀರದ ಗಡಿ ಭಾಗದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸೋಫಿಯಾನ್ ಜಿಲ್ಲೆಯ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರೆದಿದೆ. ಇದೇ ವೇಳೆ, ಪ್ರತ್ಯೇಕತಾವಾದಿಗಳ ಬೆಂಬಲಿಗರು ಮತ್ತು ಪ್ರತಿಭಟನಾಕಾರರು ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರ ಪತ್ತೆ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದ್ದಾರೆ.
ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆಯಿಂದಲೇ ಉಗ್ರರ ಶೋಧ ಕಾರ್ಯವನ್ನು ಚುರುಕುಗೊಳಿಸಿದರು. 25ಕ್ಕೂ ಹೆಚ್ಚು ಗ್ರಾಮಗಳನ್ನು ಸುತ್ತುವರಿದಿರುವ ಜಂಟಿ ಶೋಧ ಕಾರ್ಯಪಡೆ ಭಯೋತ್ಪಾದಕರಿಗಾಗಿ ಜಲಾಡುತ್ತಿದೆ. ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಂತರ ಮತ್ತು ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ನಂತರ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಉಪಟನ ತೀವ್ರಗೊಂಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS