ಕಾಶ್ಮೀರ ಕೆಲವೆಡೆ ಭಾರೀ ಹಿಮಪಾತ : ನಾಗರಿಕರಿಗೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Snow-Fall

ಶ್ರೀನಗರ, ಜ.9- ಕಾಶ್ಮೀರದಲ್ಲಿ ಹಿಮ ವರ್ಷಧಾರೆಯೊಂದಿಗೆ ತೀವ್ರ ಶೀತಗಾಳಿ ಮುಂದುವರಿದಿದ್ದು, ಕಣಿವೆ ರಾಜ್ಯದ ಕೆಲವೆಡೆ ಭಾರೀ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.  ಚಂಡೀಗಢದಲ್ಲಿರುವ ಹಿಮ ಮತ್ತು ಹಿಮಪಾತ ಅಧ್ಯಯನ ಕೇಂದ್ರ (ಎಸ್‍ಎಎಸ್‍ಸಿ) ಈ ಎಚ್ಚರಿಕೆ ನೀಡಿದೆ. ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ, ಬಂಡಿಪೋರಾ, ಕಿಸ್ತ್ವಾರ್, ರಜೌರಿ, ದೊಡಾ, ಪೂಂಚ್ ಮತ್ತು ರಿಯಾಸಿ ಜಿಲ್ಲೆಗಳ ಕೆಲವೆಡೆ ಹಿಮಪಾತವಾಗುವ ಅಪಾಯವಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹಿಮ ವರ್ಷಧಾರೆಯಿಂದ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಆವರಿಸಿದ್ದ ಮಂಜಿನ ದಟ್ಟ ಹೊದಿಕೆಯನ್ನು ನಿರಂತರ ಕಾರ್ಯಾಚರಣೆ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಕಣಿವೆಯಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಹಿಮಪಾತದಿಂದಾಗಿ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದುಕೊಂಡಿತ್ತು.  ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಇಂದೂ ಕೂಡ ಬಂದ್ ಆಗಿದೆ. ವಾಹನಗಳು ಮತ್ತು ವಿಮಾನ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜಧಾನಿ ಶ್ರೀನಗರದಲ್ಲಿ 6.1 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಲೆಹ್‍ನಲ್ಲಿ ಮೈನಸ್ 9.5 ಡಿಗ್ರಿ, ಕಾರ್ಗಿಲ್‍ನಲ್ಲಿ ಮೈನಸ್ 9 ಡಿಗ್ರಿ ಉಷ್ಣಾಂಶವಿದೆ.

ಶ್ರೀನಗರ ಸೇರಿದಂತೆ ರಾಜ್ಯದ ಬಹುತೇಕ ನಗರ-ಪಟ್ಟಣಗಳ ರಸ್ತೆಗಳು, ಮನೆಗಳು, ಉದ್ಯಾನವನಗಳು ಹಿಮ ವರ್ಷಧಾರೆಯಿಂದ ಮಂಜಿನ ಗಡ್ಡೆಗಳಿಂದ ಅವೃತವಾಗಿವೆ.  ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಹಿಮಗಾಳಿ ಮತ್ತು ವರ್ಷಧಾರೆಯಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ಇಂದು ಕೂಡ ಸುಮಾರು 50 ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು. ಉತ್ತರಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ತಾನ ರಾಜ್ಯಗಳಲ್ಲೂ ತೀವ್ರ ಚಳಿಯಿಂದ ಜನರು ನಡುಗುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin