‘ಕಾಶ್ಮೀರ ಭಾರತ ಸೇನೆಗೆ ಸ್ಮಶಾನವಾಗಲಿದೆ’ : ಹಿಜ್‍ಬುಲ್ ಮುಖ್ಯಸ್ಥ ಸಲಾವುದ್ದೀನ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Syed-Salavuddeen-c

ಮುಜಫರ್‍ಬಾದ್ (ಪಿಒಕೆ), ಸೆ.4-ಭಾರತದ ವಿರುದ್ಧ ಸದಾ ದ್ವೇಷ ಕಾರುತ್ತಿರುವ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಹಿಜ್‍ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್, ಕಾಶ್ಮೀರ ಕಣಿವೆ ಭಾರತೀಯ ಸೇನಾಪಡೆಗಳಿಗೆ ಸ್ಮಶಾನ ಆಗಲಿದೆ ಎಂಬ ಎಚ್ಚರಿಕೆ ನೀಡಿದ್ದಾನೆ. ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಯತ್ನವಾಗಿ ಸರ್ವಪಕ್ಷಗಳ ನಿಯೋಗವು ಇಂದು ಕಣಿವೆ ರಾಜ್ಯಕ್ಕೆ ತೆರಳಿಸುವ ಸಂದರ್ಭದಲ್ಲೇ ಪಾಕ್ ಆಕ್ರಮಿತ ಕಾಶ್ಮೀರದ ಮುಜಫರ್‍ಬಾದ್‍ನಿಂದ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾನೆ.

ಕಾಶ್ಮೀರ ಬಿಕ್ಕಟ್ಟಿಗೆ ಯಾವುದೇ ಶಾಂತಿಯುತ ರಾಜಕೀಯ ಪರಿಹಾರಕ್ಕೆ ಯತ್ನಿಸಿದ್ದೇ ಆದರೆ ಅಲ್ಲಿ ಮಾನವ ಬಾಂಬರ್‍ಗಳ ಮಹಾಪೂರವನ್ನೇ ಹರಿಸುವುದಾಗಿ ಗುಡುಗಿದ್ದಾನೆ. ಬೈಲಾ ನೂರ್ ಶಹಾ ಪ್ರದೇಶದಲ್ಲಿರುವ ತನ್ನ ಕಚೇರಿಯಲ್ಲಿ ಸುದ್ದಿಸಂಸ್ಥೆಯೊಂದು ಈತನ ವಿಶೇಷ ಸಂದರ್ಶನ ನಡೆಸಿತು. ಇಸ್ಲಾಮಾಬಾದ್‍ನಿಂದ 125 ಕಿ.ಮೀ.ದೂರದಲ್ಲಿ ಹಾಗೂ ಗಡಿ ನಿಯಂತ್ರಣ ರೇಖೆಯಿಂದ ಪೂರ್ವಕ್ಕೆ 22 ಕಿ.ಮೀ. ದೂರದಲ್ಲಿರುವ ಜೇಲಂ ಮತ್ತು ನೀಲುಂ ನದಿಗಳ ದಂಡೆಯ ಬಳಿ ಇತನ ಕಾರ್ಯಾಲಯವಿದೆ.

ಹೆಚ್ಚು ಹೆಚ್ಚು ಆತ್ಮಾಹತ್ಯಾ ಬಾಂಬರ್‍ಗಳಿಗೆ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಿ, ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳಿಗೆ ಸಮಾಧಿ ತೋಡುವುದಾಗಿ ಹೇಳಿರುವ ಸಲಾವುದ್ದೀನ್, ಶಾಂತಿ ಮಾತುಕತೆಗಳು ಫಲಪ್ರದವಾಗುವುದಿಲ್ಲ, ಉಗ್ರವಾದದ ಹೊರತು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಹಿಂಸಾಚಾರವನ್ನು ಗುರಿಯಾಗಿರಿಸಿಕೊಂಡು ನಡೆಸುವ ಶಸ್ತ್ರಾಸ್ತ್ರ ಹೋರಾಟವಲ್ಲದೇ ಇದಕ್ಕೆ ಅನ್ಯ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ. ಹಿಜ್‍ಬುಲ್ ಸಂಘಟನೆಯನ್ನು ನಿಷೇಧಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದ್ದರೂ, ಈತ ಸುಮಾರು 20 ಬಾರಿ ಟಿವಿಗಳಲ್ಲಿ ಕಾಣಿಸಿಕೊಂಡು ಭಾರತದ ವಿರುದ್ಧ ಹಗೆತನದಿಂದ ಪೂತ್ಕರಿಸುತ್ತಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin