ಕಾಶ್ಮೀರ ಹಿಂಸಾಚಾರದಲ್ಲಿ 3,300 ಭದ್ರತಾ ಸಿಬ್ಬಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Kashmir

ಶ್ರೀನಗರ, ಆ.8- ಭದ್ರತಾ ಪಡೆಯೊಂದಿಗೆ ನಡೆದ ಗುಂಪಿನ ಚಕಮಕಿಯಲ್ಲಿ ಹಿಜ್‍ಬುಲ್ ಮುಜಾಹಿದ್ದೀನ್ ಕಮಾಂಡರ್ ಬರ್‍ಹನ್ ವನಿ ಹತನಾದ   ನಂತರ ನಡೆದ ಗಲಭೆಯಲ್ಲಿ ಜು.8ರಿಂದ ಇಲ್ಲಿಯವರೆಗೆ ಕಾಶ್ಮೀರ ಕಣಿವೆಯಲ್ಲಿ 3300ಕ್ಕೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.  ಈ ಮಧ್ಯೆ ಘರ್ಷಣೆಯಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಇಂದು ಬೆಳಗ್ಗೆ ಕೊನೆಯುಸಿರೆಳಿದಿದ್ದು, ಸತ್ತವರ ಸಂಖ್ಯೆ 55ಕ್ಕೆ ಏರಿದೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಿನಿಂದ ಭುಗಿಲೆದ್ದ ಸಾವಿರಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳಲ್ಲಿ 3,329 ಪೊಲೀಸರು ಮತ್ತು ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆಗಳಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

ಒಟ್ಟಾರೆ ಗಾಯಗೊಂಡವರ ಸಂಖ್ಯೆ 6ಸಾವಿರಕ್ಕೂ ಹೆಚ್ಚು ಎಂದು ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  30ನೇ ದಿನವಾದ ಇಂದೂ ಕೂಡ ಕಾಶ್ಮೀರದ ವಿವಿಧೆಡೆ ಕಫ್ರ್ಯೂ ಮುಂದುವರೆದಿದ್ದು, ಕೆಲವು ಭಾಗಗಳಲ್ಲಿ ಹಿಂಸಾಚಾರ ಪ್ರಕರಣಗಳು ನಡೆದಿವೆ.  ಒಟ್ಟಾರೆ ಕಣಿವೆ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ನೆಲೆಗೊಂಡಿದೆ.  ಏತನ್ಮಧ್ಯೆ ಕಾಶ್ಮೀರದ ಮಚ್ಚಿಲ್ ಸೆಕ್ಟರ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಬಿಎಸ್‍ಎಫ್ ಯೋಧರು ಬಲಿಯಾಗಿ, ಓರ್ವ ಉಗ್ರ ಹತ್ಯೆಯಾಗಿದ್ದಾನೆ.

Facebook Comments

Sri Raghav

Admin