ಕಾಶ್ಮೀರ ಹಿಂಸೆಗೆ ಪಾಕ್ ಕಾರಣ : ಮೆಹಬೂಬ ಮುಫ್ತಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

PM-Mufti

ನವದೆಹಲಿ, ಆ.27- ಕಾಶ್ಮೀರದಲ್ಲಿ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಗೆ ಪಾಕಿಸ್ತಾನವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಹಮದ್ ಸಯೀದ್ ನೇರ ಆರೋಪ ಮಾಡಿದ್ದಾರೆ.   ಪ್ರಧಾನಿ ಜೊತೆ ಚರ್ಚಿಸಲು ನಿನ್ನೆ ರಾತ್ರಿ ಶ್ರೀನಗರದಿಂದ ದೆಹಲಿಗೆ ವಿಮಾನದಲ್ಲಿ ಆಗಮಿಸಿದ ಅವರು ಇಂದು 7, ರೇಸ್ಕೋರ್ಸ್ ನಿವಾಸದಲ್ಲಿ ಮೋದಿ ಅವರನ್ನು ಭೇಟಿ ಮಾಡಿದರು. ಕಾಶ್ಮೀರ ಕಣಿವೆಯಲ್ಲಿನ ತಲೆದೋರಿರುವ ಪರಿಸ್ಥಿತಿ ಮತ್ತು ಭದ್ರತಾ ಸನ್ನಿವೇಶಗಳ ಕುರಿತು ಪ್ರಧಾನಿಯವರೊಂದಿಗೆ ಮೊಹಬೂಬ ಸಮಾಲೋಚನೆ ನಡೆಸಿದರು.

ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು. ಪಾಕ್ ಜೊತೆ ಉತ್ತಮ ಬಾಂಧವ್ಯಕ್ಕೆ ಮೋದಿ ಯತ್ನಿಸಿದ್ದಾರೆ ಆದರೆ, ನಮ್ಮ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಪಾಕ್ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಆರೋಪಿಸಿದರು.   ಕಾಶ್ಮೀರ ಹಿಂಸಾಚಾರದ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಸೂತ್ರದಂತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು. ಪ್ರತ್ಯೇಕತಾವಾದಿಗಳು ಮುಂದೆ ಬಂದು ಹಿಂಸೆಯಿಂದ ತತ್ತರಿಸಿರುವ ಕಾಶ್ಮೀರಿ ಜನತೆಗೆ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದರು.

ಕಾಶ್ಮೀರದಲ್ಲಿ ತಲೆದೋರಿರುವ ಸಮಸ್ಯೆಯನ್ನು ನಿವಾರಿಸಲು ಸಂಧಾನಕಾರರು ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲರ ನಡುವೆ ಮಾತುಕತೆ ನಡೆಯಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಬೇಕಾದರೆ ಪಾಕಿಸ್ತಾನವು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin