ಕಿರಿಕ್ ಕಿಮ್ ಭೇಟಿಗೆ ಟ್ರಂಪ್ ಸಮ್ಮತಿ , ಮೇ ತಿಂಗಳಲ್ಲಿ ಮುಖಾಮುಖಿ..!

ಈ ಸುದ್ದಿಯನ್ನು ಶೇರ್ ಮಾಡಿ

Trump--00012

ವಾಷಿಂಗ್ಟನ್, ಮಾ.9-ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕ್ಷಿಪಣಿ ಮಾನವ ಕಿಮ್ ಜಾಂಗ್ -ಉನ್ ಅವರನ್ನು ಮೇ ತಿಂಗಳಲ್ಲಿ ಭೇಟಿ ಮಾಡಲು ಸಮ್ಮತಿಸಿದ್ದಾರೆ. ಪದೇ ಪದೇ ವಿನಾಶಕಾರಿ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸುತ್ತಾ ವಿಶ್ವಕ್ಕೆ ಕಂಟಕವಾಗಿರುವ ಉತ್ತರ ಕೊರಿಯಾ ಹಾಗೂ ಈ ದೇಶದ ವಿರುದ್ಧ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿ ಉಗ್ರ ಕ್ರಮಕ್ಕೆ ಮುಂದಾಗಿರುವಾಗಲೇ ಈ ರಾಷ್ಟ್ರಗಳ ನಾಯಕರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ಉತ್ತರ ಕೊರಿಯಾ ನಾಯಕ ಕಿಮ್‍ರನ್ನು ಭೇಟಿ ಮಾಡಲು ಅಧ್ಯಕ್ಷ ಟ್ರಂಪ್ ಸಮ್ಮತಿಸಿದ್ದಾರೆ. ಬಹುಶ: ಮೇ ತಿಂಗಳಿನಲ್ಲಿ ಇವರಿಬ್ಬರ ಭೇಟಿ ನಡೆಯಲಿದೆ. ಆದರೆ ಸ್ಥಳ, ದಿನಾಂಕ ಮತ್ತು ಸಮಯದ ಬಗ್ಗೆ ನಿರ್ಧಾರವಾಗಿಲ್ಲ ಎಂದು ಶ್ವೇತಭವನ ತಿಳಿಸಿದೆ. ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಚುಂಗ್ ಇಯ್ಯು-ಯೊಂಗ್ ಅವರು ಶ್ವೇತಭವನದಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ಉತ್ತರ ಕೊರಿಯಾ ನಾಯಕರೊಂದಿಗೆ ಸಂಧಾನ ಮಾತುಕತೆ ನಡೆಸಲು ರಾಜಧಾನಿ ಪಯೊಂಗ್‍ಯಾಂಗ್‍ಗೆ ತನ್ನ ದೇಶದ ನಿಯೋಗದ ನೇತೃತ್ವ ವಹಿಸಿದ್ದ ಚುಂಗ್ ಇಂದು ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವೈಟ್‍ಹೌಸ್‍ನಲ್ಲಿ ಈ ವಿಷಯ ತಿಳಿಸಿದರು.
ಉತ್ತರ ಕೊರಿಯಾದ ನಾಯಕರೂ ಸಹ ಆದಷ್ಟು ಶೀಘ್ರದಲ್ಲೇ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಲು ಉತ್ಸುಕವಾಗಿದ್ದಾರೆ ಎಂದು ಅವರು ಹೇಳಿದರು. ದಿಗ್ಬಂಧನ ಮುಂದುವರಿಕೆ : ಇದೇ ವೇಳೆ, ಉತ್ತರ ಕೊರಿಯಾವನ್ನು ಅಣ್ವಸ್ತ್ರ ನಿಶ್ಶಸ್ತ್ರೀಕರಣಗೊಳಿಸುವ ತನಕ ಆ ದೇಶದ ವಿರುದ್ಧ ದಿಗ್ಬಂಧನ ವಿಧಿಸುವಿಕೆ ಮುಂದುವರಿಯಲಿದೆ ಎಂದು ಶ್ವೇತಭವನದ ಉನ್ನತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin