ಕಿವೀಸ್‍ಗೆ ದೊಡ್ಡ ಸವಾಲು ನೀಡಲು ಪ್ರಯತ್ನ : ಕುತೂಹಲದತ್ತ 500ನೇ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Poojara

ಕಾನ್ಫುರ, ಸೆ.25- ರಕ್ಷಣಾತ್ಮಕ ಬ್ಯಾಟಿಂಗ್ ಬಲದಿಂದ ಮಿಂಚಿದ ಭಾರತ ಪ್ರವಾಸಿ ತಂಡದ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ. ಹೀಗಾಗಿ ಐತಿಹಾಸಿಕ 500 ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆಗೆ ಗೆಲುವು ಒಲಿಯುವ ಸ್ಪಷ್ಟ ಲಕ್ಷಣ ತೋರುತ್ತಿದೆ. ಇಲ್ಲಿನ ಗ್ರೀನ್‍ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ಕಿವಿಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 159ರನ್‍ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ 359 ರನ್‍ಗಳ ಬೃಹತ್ ಮುನ್ನಡೆ ಸಾಧಿಸಿದೆ. ಎರಡನೇ ವಿಕೆಟ್‍ಗೆ 133 ರನ್‍ಗಳ ಅಮೋಘ ಜತೆಯಾಟವಾಡಿದ್ದ ವಿಜಯ್ ಮತ್ತು ಚೇತೇಶ್ವರ್ ಪೂಜಾರ ಕಿವಿಸ್ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಭಾರತದ ಮೊತ್ತ 185ರನ್ ಆಗಿದ್ದಾಗ ಈ ಜೋಡಿ ಬೇರ್ಪಟ್ಟಿತು. ಮುರಳಿ ವಿಜಯ್ 76 ರನ್ ಗಳಿಸಿ ಸ್ನ್ಯಾಟರ್ ಬೌಲಿಂಗ್‍ನಲ್ಲಿ ಔಟಾದರು. ಇದಾದ ಬಳಿಕ ಮೊದಲ ಇನ್ನಿಂಗ್ಸ್‍ನಲ್ಲಿ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದರೂ ಕೇವಲ 18 ರನ್ ಗಳಿಸಿ ಮತ್ತೆ ವಿಫಲರಾದರು. ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೂಜಾರ 78 ರನ್‍ಗಳಿಸಿ ಶತಕದಿಂದ ವಂಚಿತರಾದರು. 68 ರನ್ ಅಂತರದಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮೆನ್‍ಗಳು ಪೆವಿಲಿಯನ್ ಕಡೆ ಮುಖ ಮಾಡಿದರು. ಸ್ವಲ್ಪ ಆತಂಕಕ್ಕೊಳಗಾದ ಭಾರತ ತಂಡಕ್ಕೆ ರೋಹಿತ್ ಶರ್ಮ ಹಾಗೂ ರಹಾನೆ ಜೋಡಿಯು ಅರ್ಧಶತಕದ ಜತೆಯಾಟವಾಡಿ ಆಸರೆಯಾದರು.

ಮೊದಲ ಇನ್ನಿಂಗ್ಸ್‍ನಲ್ಲಿ ಕಿವಿಸ್ ಸ್ಪಿನ್ ಬೌಲರ್‍ಗಳು ಭಾರತ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಇದನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ದಿಟ್ಟ ಉತ್ತರ ನೀಡಿತು.  ಮಧ್ಯಾಹ್ನದ ವೇಳೆಗೆ ಭಾರತದ 5 ವಿಕೆಟ್ ನಷ್ಟಕ್ಕೆ 303 ರನ್‍ಗಳಿಸಿತ್ತು. ಅಜಿಂಕೆ ರಹಾನೆ 40 ರನ್‍ಗಳಿಸಿ ಔಟಾದರು. ರೋಹಿತ್ ಶರ್ಮ ಔಟಾಗದೆ 25 ಹಾಗೂ ರವೀಂದ್ರ ಜಡೇಜ ಔಟಾಗದೆ 3 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ನಾಳೆ ಅಂತಿಮ ದಿನವಾದ್ದರಿಂದ ಭಾರತ ಬೇಗ ಇನ್ನಿಂಗ್ಸ್ ಡಿಕ್ಲೈರ್ ಮಾಡಿಕೊಂಡು ಪ್ರವಾಸಿ ಬ್ಯಾಟ್ಸ್‍ಮನ್‍ಗಳನ್ನು ಕಟ್ಟಿಹಾಕಿದರೆ ಕೋಹ್ಲಿ ಪಡೆಗೆ 500ನೇ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗೆಲುವು ಸಾಧಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin