ಕುಡಿಯುವ ನೀರಿನ ಅಭಾವ : ಟ್ಯಾಂಕರ್ ಖರೀದಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

bailahonagala-3
ಬೈಲಹೊಂಗಲ,ಮಾ.28- ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರಿನ ಅಭಾವ ಹೋಗಲಾಡಿಸಲು ಒಂದೊಂದು ಟ್ಯಾಂಕರ್ ಖರೀದಿಸಬೇಕು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಮತಕ್ಷೇತ್ರದ ಬರಗಾಲ ಕಾಮಗಾರಿ ಕುರಿತು ಗ್ರಾಪಂ ಅಭಿವೃದ್ದಿ ಅಧಿಕಾರಿಗಳ ಸಭೈಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ ತಾಪಂ ಅಧಿಕಾರಿಗಳಿಗೆ ಆದೇಶ ಮಾಡಿದ್ದರು ಕೇವಲ 10 ಗ್ರಾಪಂ ಅವರು ಮಾತ್ರ ಟ್ಯಾಂಕರ್ ಖರೀದಿಸಿದ್ದು, ಇನ್ನುಳಿದವರು ಕೂಡಲೇ ಖರೀದಿಸಬೇಕು. ಇಲ್ಲದಿದ್ದರೆ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಾಕೀತು ಮಾಡಿದರು.

ಸವದತ್ತಿ, ಬೈಲಹೊಂಗಲ ತಾಲೂಕು ಒಳಗೊಂಡಿರುವ ಮತಕ್ಷೇತ್ರದ 32 ಪಂಚಾಯತಿಗಳಲ್ಲಿ ನಿರ್ಮಿಸಿರುವ 136 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 19 ಘಟಕಗಳು ಬಂದ್ ಆಗಿರುವ ಮಾಹಿತಿ ಪಡೆದ ಅವರು ಕೂಡಲೇ ಅವುಗಳ ರಿಪೇರಿ ಮಾಡಿಸಿ ಮೇಲಾಧಿಕಾರಿಗಳಿಗೆ ಮಾಹತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮತಕ್ಷೇತ್ರದಲ್ಲಿ ವೀಕ್ಷಣೆ ಮಾಡಲಾಗಿ ಬೈಲವಾಡ, ಇಂಚಲ, ಗೋತಮಾರ ಭಾಗಗಳ ಸುಮಾರು 10 ಹಳ್ಳಿಗಳಲ್ಲಿ ಬೊರ್‍ವೇಲ್‍ಗಳ ಅಂತರ್ಜಲ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಅಭಾವ ತಲೆದೊರಿದ್ದು, ಅಧಿಕಾರಿಗಳು ಕೂಡಲೇ ಸೂಕ್ತ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆಯಡಿ, ಕೂಲಿಗಾಗಿ ಹೊಸ ಕ್ರೀಯಾ ಯೋಜನೆಗಳನ್ನು ರೂಪಿಸಿಕೊಂಡು ಕೂಲಿ ನೀಡಬೇಕು.

ಮೇವು ಕೊರತೆ ಇರುವ ಗ್ರಾಮಗಳ ಕುರಿತು ಮಾಹಿತಿ ನೀಡಬೇಕು ಎಂದರು. ಕೆಲ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಮೇಲಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೊಬೈಲ್ ಕರೆಗಳಿಗೆ ಸ್ಪಂದನೆ ನೀಡುತ್ತಿಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಸ್ಪಂದನೆ ನೀಡಲಾಗದಿದ್ದರೆ ಮನೆಗೆ ಹೋಗಿ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೆವೆ. ಈ ರೀತಿ ಅಲಕ್ಷ ತೋರಿದರೆ ಕಠಿಣ ಕ್ರಮ ಗ್ಯಾರಂಟಿ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅಧಿಕಾರಿಗಳಿಗೆ ಖಡಕ ಎಚ್ಚರಿಕೆ ನೀಡಿದರಲ್ಲದೆ, ಭೀಕರ ಬರಗಾಲದಲ್ಲಿ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ನೀರಿನ ತೊಂದರೆಯಿಂದ ಬಂದ್ ಆಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ.

ಯಾವುದೇ ಪರಿಸ್ಥಿತಿಯಲ್ಲಿ ಶುದ್ಧ ಕುಡಿಯುವ ನೀರು ಜನತೆಗೆ ತಲಪುವಂತೆ ವ್ಯವಸ್ಥೆ ಮಾಡಿ. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಕೂಡಲೇ ನಮ್ಮ ಗಮನಕ್ಕೆ ತನ್ನಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಅಧಿಕಾರಿಗಳಿಗೆ ತಾಪಂ ಇಓ ವಿ.ಜಿ. ಹಿತ್ತಲಮನಿ ಸೂಚಿಸಿದರು. ಬೈಲವಾಡ ಹಾಗೂ ಇನ್ನೀತರ ಗ್ರಾಮಗಳಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುತ್ತಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಿರಣ ಸಾಧುನವರ ಅವರ ಜನಪರ ಕಾಳಜಿಗೆ ಸಭೈಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಸವದತ್ತಿ ತಾಪಂ ಸಹಾಯಕ ನಿರ್ದೇಶಕ ಪ್ರವೀಣ ಸಾಲಿ, ಸಹಾಯಕ ಕಾರ್ಯಕಾರಿ ಅಭಿಯಂತರ ಎಚ್.ಕೆ. ವಂಟಗುಡೆ, ಕೆ.ಎಸ್. ಅಚುಟಿ, ಎಂ.ಎಸ್. ರೇವಣ್ಣವರ ಹಾಗೂ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin