ಕುಣಿಗಲ್ ಪುರಸಭೆ ಅಧ್ಯಕ್ಷ ಚುನಾವಣೆ ಅ.1ಕ್ಕೆ ದಿನಾಂಕ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಸೆ.23-ಪಟ್ಟಣದ ಪುರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 1ರಂದು ಚುನಾವಣೆ ದಿನಾಂಕ ನಿಗದಿ ಮಾಡಿ ಆಯೊಗ ಆದೇಶ ಹೊರಡಿಸಿದೆ. ಮೊದಲನೇ ಎರಡೂವರೆ ವರ್ಷಗಳ ಅಧ್ಯಕ್ಷ ಸ್ಥಾನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಉಳಿದ ಅವಧಿಗೆ ಚುನಾವಣಾ ದಿನಾಂಕ ನಿಗದಿ ಮಾಡಲಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಪುರಸಭೆಯ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಲಾಗಿದೆ. ಒಟ್ಟು ಪುರಸಭೆಯ 23 ಸದಸ್ಯರ ಪೈಕಿ 7 ಕಾಂಗ್ರೆಸ್, 7 ಜೆಡಿಎಸ್, ಪಕ್ಷೇತರ 8 ಹಾಗೂ ಬಿಜೆಪಿ ಒಂದು ಸ್ಥಾನ ಪಡೆದುಕೊಂಡಿದ್ದು, ಕಳೆದ ಪುರಸಭೆಯ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು.

ನಂತರ ಪಕ್ಷೇತರರು ಮತ್ತು ಉಳಿದ ಮೂವರು ಜೆಡಿಎಸ್ ಸದಸ್ಯರು ಹಾಗೂ ಓರ್ವ ಮಹಿಳೆ ಕಾಂಗ್ರೆಸ್ ಸದಸ್ಯೆ ಜೆಡಿಎಸ್‍ಗೆ ಸೇರ್ಪಡೆಗೊಂಡು ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈಗ ಮತ್ತೆ ಎರಡು ಪಕ್ಷಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ತೀವ್ರ ಪೈಪೋಟಿ ಹೆಚ್ಚಾಗಿದ್ದು , ಶಾಸಕ ಡಿ.ನಾಗರಾಜಯ್ಯ ಮತ್ತು ಡಿ.ಕೆ.ಸುರೇಶ್ ನಡುವೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಜೆಡಿಎಸ್‍ನಲ್ಲಿ 21 ವಾರ್ಡ್‍ನ ಮಂಜುಳ ರಂಗಸ್ವಾಮಿ ಹಾಗೂ 20ನೇ ವಾರ್ಡ್‍ನ ನಳಿನ ಬೈರಪ್ಪ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್‍ನಲ್ಲಿ ಸರಸ್ವತಿ ಹಾಗೂ ತಾರಾದೇವಿ ನಡುವೆ ಪೈಪೋಟಿ ಯಿದ್ದು ಜೆಡಿಎಸ್‍ನಲ್ಲಿ ಶಾಸಕ ಡಿ.ನಾಗರಾಜಯ್ಯನವರ ಮಾತಿಗೆ ಎಲ್ಲ ಸದಸ್ಯರು ಒಗ್ಗಟ್ಟಾಗಿದ್ದು, ವರಿಷ್ಠರು ಸೂಚಿಸುವ ಅಭ್ಯರ್ಥಿಗೆ ಎಲ್ಲಾ ಸದಸ್ಯರ ಸಹಮತವಿದೆ.
ಕಾಂಗ್ರೆಸ್‍ನವರು ಅಧ್ಯಕ್ಷ ಸ್ಥಾನದ ಬಲಕ್ಕೆ ಶಕ್ತಿ ಇಲ್ಲದ ಪರಿಣಾಮ ಜೆಡಿಎಸ್‍ನಲ್ಲಿ ಗುಂಪುಗಾರಿಕೆ ಸೃಷ್ಟಿಸಿ ಜೆಡಿಎಸ್ ಸದಸ್ಯರನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರಲ್ಲೇ ಎರಡು ಬಣಗಳಿದ್ದು, ಇವರ ಮಾತಿಗೆ ಮನ್ನಣೆ ನೀಡಿ ಹೋಗುವ ಜೆಡಿಎಸ್ ಸದಸ್ಯರಿಗೆ ಪಂಗನಾಮ ಕಟ್ಟಿಟ್ಟ ಬುತ್ತಿ. ಕಳೆದ 30 ವರ್ಷಗಳಿಂದಲೂ ಜೆಡಿಎಸ್ ಪುರಸಭೆ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇದನ್ನು ಹಣಿಯಲು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ಏನೇ ತಂತ್ರ ರೂಪಿಸಿದರೂ ಹಿರಿಯ ಅನುಭವಿ ರಾಜಕಾರಣಿ ಶಾಸಕ ಡಿ.ನಾಗರಾಜಯ್ಯನವರ ಮುಂದೆ ಕಾಂಗ್ರೆಸ್‍ನವರ ಆಟ ನಡೆಯುವುದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin