ಕುತೂಹಲ ಕೆರಳಿಸಿದೆ ಅಂಬರೀಶ್-ಕುಮಾರಸ್ವಾಮಿ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Ambi--01

ಬೆಂಗಳೂರು, ಮೇ 6-ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಅಂಬರೀಶ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿನ್ನೆ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ ನಗರದ ಗಾಲ್ಫ್ ಕ್ಲಬ್ ಬಳಿ ಇರುವ ಅಂಬರೀಶ್ ಅವರ ನಿವಾಸದಲ್ಲಿ ಕುಮಾರಸ್ವಾಮಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ಅಂಬರೀಶ್ ಅವರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾತುಕತೆ ಸಂದರ್ಭದಲ್ಲಿ ತಮ್ಮ ಗಮನಕ್ಕೂ ತಾರದಂತೆ ಸಚಿವ ಸ್ಥಾನದಿಂದ ವಜಾಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಮಾನ ಮಾಡಿದ್ದಾರೆ ಎಂದು ಅಂಬರೀಶ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ಚುನಾವಣೆ ಸ್ಪರ್ಧಿಸಿಲ್ಲ ಎಂದು ತಮ್ಮ ಅಸಮಾಧಾನವನ್ನು ಅಂಬರೀಶ್, ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ಕುಮಾರಸ್ವಾಮಿ ಅವರು ಜೆಡಿಎಸ್ ಸೇರುವಂತೆ ಆಹ್ವಾನ ನೀಡಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಅಂಬರೀಶ್ ನೀಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಮಾತುಕತೆ ನಂತರವೂ ಜೆಡಿಎಸ್ ಸೇರುವ, ಇಲ್ಲವೇ ಜೆಡಿಎಸ್ ಪರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಅಂಬರೀಶ್ ಸ್ಪಷ್ಟವಾಗಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಆದರೆ ಅಂಬರೀಶ್ ಮತ್ತು ಕುಮಾರಸ್ವಾಮಿ ಅವರ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಪ್ರಸಕ್ತ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಿರುವುದು ಇತರೆ ರಾಜಕೀಯ ಪಕ್ಷಗಳ ನಾಯಕರ ಚಿಂತೆಯನ್ನು ಹೆಚ್ಚಿಸಿದೆ ಎನ್ನಲಾಗಿದೆ.

Facebook Comments

Sri Raghav

Admin