ಕುಮಾರಸ್ವಾಮಿ ಒಬ್ಬ ರಾಜಕಾರಣಿಯಷ್ಟೇ ಅಲ್ಲ ಕಲಾರಾಧಕ ಕೂಡ ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Film

– ಎನ್.ಎಸ್.ರಾಮಚಂದ್ರ

ಕರ್ನಾಟಕದ 25ನೆ ಮುಖ್ಯಮಂತ್ರಿ 57ರ ಹರೆಯದ ಹರಪನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರು ರಾಜಕಾರಣಿ ಮಾತ್ರವಲ್ಲ, ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಪ್ರದಾಯದ ಬಗ್ಗೆ ಅಸಾಧಾರಣ ಒಲವು ಹೊಂದಿರುವವರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎಸ್ಸಿ ಪದವಿ ಪಡೆದಿರುವ ಕುಮಾರಸ್ವಾಮಿಯವರಿಗೆ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ.ಕನ್ನಡದ ಉದ್ಧಾಮ ಸಾಹಿತಿಗಳ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳುತ್ತಿದ್ದ ಇವರು ರಾಮಾಯಣ, ಮಹಾಭಾರತದಂಥಹ ಮಹಾನ್ ಗದ್ಯ ಸಾಹಿತ್ಯವನ್ನೂ ಓದಿದ್ದಾರೆ. ಒಳ್ಳೆಯ ಮೌಲ್ಯಗಳಿಂದ ಕೂಡಿದ ಸಿನಿಮಾಗಳೆಂದರೆ ಇವರಿಗೆ ಅಚ್ಚುಮೆಚ್ಚು. ಡಾ.ರಾಜ್‍ಕುಮಾರ್ ಅವರ ಅಭಿನಯದ ಹಲವು ಚಿತ್ರಗಳನ್ನು ನೋಡಿ ಹೆಮ್ಮೆಪಟ್ಟಿದ್ದಾರೆ.

ಕುಮಾರಸ್ವಾಮಿಯವರು ರಾಜಕಾರಣಿ ಆಗುವ ಮೊದಲೇ ಚಿತ್ರೋದ್ಯಮಿ ಆಗಿದ್ದರು. ಚಿತ್ರನಿರ್ಮಾಣ, ವಿತರಣೆ, ಪ್ರದರ್ಶನ ಈ ಮೂರೂ ವಲಯಗಳಲ್ಲಿ ಇವರು ಸಕ್ರಿಯರಾಗಿದ್ದಾರೆ. ಹೊಳೇನರಸೀಪುರದಲ್ಲಿ ಚೆನ್ನಾಂಬಿಕಾ ಎಂಬ ಹೆಸರಿನ ಚಿತ್ರಮಂದಿರ ಹೊಂದಿರುವ ಇವರು ಹಲವು ದಶಕಗಳ ಹಿಂದೆಯೇ ಚಿತ್ರವಿತರಕರಾದರು. ಕನ್ನಡದ ಹಲವು ಜನಪ್ರಿಯ ಚಿತ್ರಗಳ ವಿತರಣೆ ಮಾಡಿದ ಹೆಮ್ಮೆ ಇವರದು. ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳ ಚಿತ್ರ ಮಂದಿರಗಳಿಗೆ ಸಿನಿಮಾ ಒದಗಿಸುತ್ತಿದ್ದ ಇವರು ಶಿವರಾಜ್‍ಕುಮಾರ್ ಅಭಿನಯದ `ಓಂ` ಎಂಬ ಚಿತ್ರವನ್ನು ಅತಿ ಹೆಚ್ಚು ಬಾರಿ ವಿತರಿಸಿದ್ದಾರೆ.
ಸಿನಿಮಾ ನೋಡಲು ಬರುವ ಪ್ರೇಕ್ಷಕ ಮೂರು ಗಂಟೆ ಕಾಲ ತನ್ನ ಜಂಜಾಟವನ್ನೆಲ್ಲ ಮರೆತು ಆರಾಮವಾಗಿ ಕುಳಿತುಕೊಳ್ಳಬೇಕು ಅನ್ನುವ ಕುಮಾರಸ್ವಾಮಿಯವರು ಆ ಮಾತಿನ ಪ್ರಕಾರ ತಮ್ಮ ಚೆನ್ನಾಂಬಿಕಾ ಚಿತ್ರಮಂದಿರವನ್ನು ಸುಸ್ಥಿತಿಯಲ್ಲಿ ಇಟ್ಟಿದ್ದಾರೆ.

ಚಿತ್ರನಿರ್ಮಾಣ ಮಾಡುವ ನಿರ್ಧಾರ ಮಾಡಿದ ಕುಮಾರಸ್ವಾಮಿಯವರು ನಮ್ಮ ರಾಜ್ಯದ ದೇಸೀಯತೆಗೆ ಒಗ್ಗುವಂಥಹ ಕಥೆಯನ್ನು ಹುಡುಕತೊಡಗಿದರು. ಆ ಹಂತದಲ್ಲಿ ತಮಿಳಿನ ಸೂರ್ಯವಂಶಂ ಎಂಬ ಚಿತ್ರವನ್ನು ನೋಡಿ ಇಷ್ಟಪಟ್ಟು ಅದನ್ನು ಕನ್ನಡಕ್ಕೆ ರೀಮೇಕ್ ಮಾಡಲು ನಿರ್ಧರಿಸಿದರು. ಈ ಚಿತ್ರವನ್ನು ಎಚ್.ಡಿ.ದೇವೇಗೌಡರೂ ಕೂಡ ನೋಡಿ ಪ್ರಶಂಸಿಸಿದರು. ಸೂರ್ಯವಂಶ ಚಿತ್ರವು ಕನ್ನಡ ಚಿತ್ರಪ್ರೇಕ್ಷಕರ ಆಶಯಗಳಿಗೆ ಅನುಗುಣವಾಗಿ ಮೂಡಿ ಬರಬೇಕು ಅನ್ನುವುದು ಕುಮಾರಸ್ವಾಮಿಯವರ ಮಹದಾಸೆ. ಪಾತ್ರಗಳಿಗೆ ಒಪ್ಪುವಂಥಹ ಪಾತ್ರಧಾರಿಗಳ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದ ಅವರು, ವಿಷ್ಣುವರ್ಧನ್(ದ್ವಿಪಾತ್ರ), ಲಕ್ಷ್ಮಿ, ಇಷಾ ಕೊಪ್ಪೀಕರ್, ರಮೇಶ್‍ಭಟ್, ವಿಜಯಲಕ್ಷ್ಮಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಹೇಮಾಚೌಧರಿ ಹೀಗೆ ಹೆಸರಾಂತ ಕಲಾವಿದರನ್ನು ಒಗ್ಗೂಡಿಸಿದರು. ಎಸ್.ನಾರಾಯಣ್ ನಿರ್ದೇಶಿಸಿದ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ, ಎಂ.ರಾಜೇಂದ್ರ ಅವರ ಛಾಯಾಗ್ರಹಣವಿದೆ.
ಚಿತ್ರೀಕರಣ ಮುಗಿಯುವ ಹಂತದಲ್ಲಿ, ಈ ಫಿಲಂಗೆ ಇನ್ನೊಂದು ಹಾಡನ್ನು ಸೇರಿಸೋಣ ಎಂದು ನಾರಾಯಣ್ ಅವರಿಗೆ ಸೂಚಿಸಿದರು. ಈಗ ಹಾಡಿನ ಅಗತ್ಯವಿಲ್ಲ, ಅನಗತ್ಯವಾಗಿ ವೆಚ್ಚ ಮಾಡುವುದು ಬೇಡ ಎಂದು ನಿರ್ದೇಶಕರ ಒತ್ತಾಯ. ನಾನು ಪ್ರೇಕ್ಷಕ ಹಾಗೂ ವಿತರಕನಾಗಿ ಹೇಳುತ್ತಿದ್ದೇನೆ ಒಂದು ಹಾಡು ಸೇರಿಸೋಣ ಎಂದು ಕುಮಾರಸ್ವಾಮಿಯವರ ಆಗ್ರಹ. ಇದಕ್ಕೆ ಮಣಿದ ನಿರ್ದೇಶಕರು ಪಂಚರಂಗಿ ಪಂಚರಂಗಿ ಭಾವನತಂಗಿ… ಎಂಬ ಹಾಡನ್ನು ಸಿದ್ಧಪಡಿಸಿದರು. ಎರಡು ವಿಶೇಷ ಸೆಟ್‍ಗಳನ್ನು ಹಾಕಿಸಿ ಅಲ್ಲಿ ಈ ಹಾಡನ್ನು ವಿಷ್ಣುವರ್ಧನ್, ಇಷಾಕೊಪ್ಪೀಕರ್ ಮತ್ತು ನೃತ್ಯಗಾರರ ಅಭಿನಯದಲ್ಲಿ ಚಿತ್ರಿಸಿದರು. ಕುಮಾರಸ್ವಾಮಿಯವರ ಅಭಿಪ್ರಾಯ ಸುಳ್ಳಾಗಲಿಲ್ಲ. ಈ ಹಾಡು ಜನಪ್ರಿಯವಾಯಿತು. ಚಿತ್ರ ಕೂಡ ದೊಡ್ಡ ಯಶಸ್ಸು ಪಡೆಯಿತು.

ಸೂರ್ಯವಂಶ ಆದನಂತರ ಕುಮಾರಸ್ವಾಮಿಯವರು ಎಸ್.ನಾರಾಯಣ್ ಅವರ ನಿರ್ದೇಶನದಲ್ಲೇ `ಚಂದ್ರ ಚಕೋರಿ’ ಎಂಬ ಚಿತ್ರವನ್ನು ಮಾಡಿದರು. ನವಪ್ರತಿಭೆ ಶ್ರೀ ಮುರಳಿ ಈ ಚಿತ್ರದ ನಾಯಕ. ಪ್ರಿಯಾ ಮತ್ತು ನಾಜ್ ನಾಯಕಿಯರು. ಇದು ಶ್ರೀನಗರ ಕಿಟ್ಟಿ ಅಭಿನಯದ ಮೊದಲ ಚಿತ್ರ. ಪೋಷಕ ಪಾತ್ರಗಳಲ್ಲಿ ದೊಡ್ಡಣ್ಣ, ಶೋಭರಾಜ್, ಸುಂದರರಾಜ್, ಸತ್ಯಪ್ರಿಯ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರಿದ್ದರು. ಈ ಚಿತ್ರವು ಪ್ರೇಮಸಂದಡಿ ಎಂಬ ಹೆಸರಿನಲ್ಲಿ ತೆಲುಗಿನಲ್ಲೂ ತಯಾರಾಯಿತು. ತೆಲುಗು ಚಿತ್ರಕ್ಕೆ ಈ ಭಾಷೆಯ ಪೋಷಕ ಕಲಾವಿದರ ಆಯ್ಕೆ ಮಾಡಿದ್ದರು. ಈ ಚಿತ್ರದ ಕಥೆಯ ಮೇಲೆ ನನಗೆ ಅಪಾರ ಭರವಸೆ ಇದೆ ಎಂದು ಹೇಳಿದ್ದ ಕುಮಾರಸ್ವಾಮಿಯವರು ಅದೇ ಪ್ರಕಾರ ಕಥೆಗೆ ಅನ್ಯಾಯವಾಗದ ರೀತಿಯಲ್ಲಿ ಶ್ರೀಮಂತವಾಗಿ ಚಿತ್ರನಿರ್ಮಾಣ ಮಾಡಿದ್ದರು. ಹೊಸ ನಾಯಕ -ನಾಯಕಿಯರ ಚಿತ್ರ ಎಂದು ಹಿಂದೇಟು ಹಾಕಲಿಲ್ಲ. ಈ ಚಿತ್ರದ ಚಕ್ಕಡಿ ಫೈಟ್‍ಗೆ ನೂರಾರು ಎತ್ತಿನ ಬಂಡಿಗಳು ಮತ್ತು ಹೆಲಿಕಾಪ್ಟರ್ ಬಳಸಿದ್ದು, ಈಗಲೂ ಅದು ದಾಖಲೆ.

`ಚಂದ್ರ ಚಕೋರಿ’ ಚಿತ್ರವು ಜನಮನ್ನಣೆ ಗಳಿಸಿ ಪ್ರಚಂಡ ಯಶಸ್ಸು ಪಡೆಯಿತು. ಹಲವು ಕೇಂದ್ರಗಳಲ್ಲಿ 25 ವಾರಗಳ ಪ್ರದರ್ಶನ ಕಂಡ ಈ ಚಿತ್ರವು ಬೆಳಗಾವಿಯ ಪ್ರಕಾಶ್ ಚಿತ್ರಮಂದಿರದಲ್ಲಿ 365 ದಿನಗಳ ದಾಖಲೆ ಪ್ರದರ್ಶನ ಕಂಡಿತು. ಈ ಚಿತ್ರವು ಇಡೀ ರಾಷ್ಟ್ರದ ಹೆಸರಾಂತ ಚಿತ್ರತಯಾರಕರ ಗಮನ ಸೆಳೆಯಿತಲ್ಲದೆ ಒಡಿಯಾ ಭಾಷೆಗ ರೀಮೇಕ್ ಆಯಿತು.

ಕುಮಾರಸ್ವಾಮಿಯವರು ಸೂರ್ಯವಂಶ ಚಿತ್ರವನ್ನು ನಿರ್ಮಿಸಿದ ವೈಖರಿಯನ್ನು ವಿಷ್ಣುವರ್ಧನ್ ಬಹಳವಾಗಿ ಮೆಚ್ಚಿಕೊಂಡಿದ್ದರಲ್ಲದೆ, ಅವರ ಇನ್ನೊಂದು ಚಿತ್ರದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದರು. ಅದೇ `ಪ್ರೇಮೋತ್ಸವ.’ ದಿನೇಶ್‍ಬಾಬು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ದೇವಯಾನಿ, ರೋಜಾ, ತಾರಾ, ರಾಮಕೃಷ್ಣ, ಕಾಶಿ, ಚಿತ್ರಾಶೆಣೈ, ತಾರಕೇಶ್ ಪಟೇಲ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರದ ಹಲವು ದೃಶ್ಯಗಳನ್ನ್ನು ಉದಕಮಂಡಲದ ಸುಂದರ ಹೊರಾಂಗಣದಲ್ಲಿ ಚಿತ್ರಿಸಲಾಗಿದೆ.

ಕುಮಾರಸ್ವಾಮಿಯವರು ನಿರ್ಮಿಸಿದ ಮುಂದಿನ ಚಿತ್ರದ ಹೆಸರು `ಗಲಾಟೆ ಅಳಿಯಂದ್ರು’. ಇದು ಉಳ್ಳತ್ತೈ ಅಳ್ಳಿತಾ ಎಂಬ ತಮಿಳುಚಿತ್ರದ ರೀಮೇಕ್. ಎಸ್.ನಾರಾಯಣ್ ನಿರ್ದೇಶಿಸಿರುವ ಈ ಚಿತ್ರದ ನಾಯಕರು ಶಿವರಾಜ್‍ಕುಮಾರ್ ಮತ್ತು ನಾರಾಯಣ್. ನಾಯಕಿ ಸಾಕ್ಷಿ ಶಿವಾನಂದ್. ಈ ಚಿತ್ರದ ನಿರ್ಮಾಣ ಮಾಡುವಾಗ ಕೂಡ ಕುಮಾರಸ್ವಾಮಿಯವರು ಪ್ರೇಕ್ಷಕನ ಅಭಿರುಚಿಯನ್ನು ಪ್ರಮುಖವಾಗಿ ಇಟ್ಟುಕೊಂಡರು. ದೇವಾ ಅವರ ಸಂಗೀತ, ಆರ್.ಗಿರಿ ಛಾಯಾಗ್ರಹಣವಿದ್ದ ಈ ಚಿತ್ರದ ಬಹಳಷ್ಟು ದೃಶ್ಯಗಳನ್ನು ಮಾರಿಷಸ್ ದೇಶದಲ್ಲಿ ಚಿತ್ರಿಸಿದ್ದಾರೆ. ತಾರಾ, ದೊಡ್ಡಣ್ಣ, ಮುಖ್ಯಮಂತ್ರಿಚಂದ್ರು, ಶೋಭರಾಜ್, ಮನವೀತ್ ರೈ ಸೇರಿದಂತೆ ಹಲವು ಕಲಾವಿದ ತಂತ್ರಜ್ಞರ ದಂಡು ಮಾರಿಷಸ್ ದೇಶದಲ್ಲಿ ಬೀಡುಬಿಟ್ಟಿತ್ತು. ಕುಮಾರಸ್ವಾಮಿಯವರ ಪ್ರಯತ್ನವನ್ನು ಪುನಃ ಪ್ರೇಕ್ಷಕರು ಮೆಚ್ಚಿ ಭೇಷ್ ಅಂದರು.

ಜಗ್ಗೇಶ್ ಅಭಿನಯದ ಜಿತೇಂದ್ರ ಎಂಬ ಚಿತ್ರವನ್ನು ನಿರ್ಮಿಸಿದ ನಂತರ ಕುಮಾರಸ್ವಾಮಿಯವರು ಕೆಲಕಾಲ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ ಕನ್ನಡ ಸಿನಿಮಾದ ಆಗುಹೋಗುಗಳ ಸಮಗ್ರ ಮಾಹಿತಿಯನ್ನು ತಪ್ಪದೆ ಪಡೆಯುತ್ತಿದ್ದರು. ಸಿನಿಮಾ ಚಟುವಟಿಕೆಗೆ ಮರಳಿದ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್‍ಕುಮಾರ್‍ನನ್ನು ಪ್ರಮುಖ ಪಾತ್ರದಲ್ಲಿಟ್ಟು `ಜಾಗ್ವಾರ್’ ಎಂಬ ಶ್ರೀಮಂತ ಬಹುಭಾಷಾ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ತಾಂತ್ರಿಕತೆ, ಅದ್ಧೂರಿತನವು ಪರಭಾಷಾ ಚಿತ್ರತಯಾರಕರನ್ನು ವಿಸ್ಮಯಗೊಳಿಸಿತು.  ವ್ಯಾಸರಾಯ ಬಲ್ಲಾಳ ಅವರ `ಹೆಜ್ಜೆ’ ಎಂಬ ಕಾದಂಬರಿಯನ್ನು ಓದಿ ಮೆಚ್ಚಿಕೊಂಡ ಕುಮಾರಸ್ವಾಮಿಯವರು ಆ ಚಿತ್ರದ ಸಿನಿಮಾ ನಿರ್ಮಾಣ ಹಕ್ಕು ಖರೀದಿಸಿದ್ದಾರೆ. ಕೆರೆಗೆ ಹಾರ ಎಂಬ ಚಿತ್ರವನ್ನು ಮಾಡಬೇಕು ಅನ್ನುವುದು ಕೂಡ ಅವರ ಮಹದಾಸೆ.  ಕನ್ನಡ ಚಿತ್ರರಂಗದ ಎಲ್ಲ ವಿಷಯಗಳನ್ನು ಅರಿತಿರುವ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ಕಲೆ-ಸಾಹಿತ್ಯಕ್ಷೇತ್ರಕ್ಕೆ ಸಂದಿರುವ ಗೌರವವೇ ಸರಿ.

Facebook Comments

Sri Raghav

Admin