ಕುಮಾರಸ್ವಾಮಿ ಕೈಯಲ್ಲಿದೆ ಮೇಯರ್ ಪಟ್ಟ ..!

ಈ ಸುದ್ದಿಯನ್ನು ಶೇರ್ ಮಾಡಿ

HDKಬೆಂಗಳೂರು, ಸೆ.24- ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಹಾಪೌರರ ಪಟ್ಟ ಅಲಂಕರಿಸುವವರು ಯಾರು ಎಂಬ ಜಿಜ್ಞಾಸೆ ಕಾಡತೊಡಗಿದೆ. ಈ ಬಾರಿ ಮೇಯರ್ ಆಯ್ಕೆ ತೀರ್ಮಾನ ಕುಮಾರಸ್ವಾಮಿ ನಿರ್ಧರಿಸಲಿದ್ದು, ಇಂದು ಸಂಜೆ ಅಥವಾ ನಾಳೆ ಜೆಡಿಎಸ್ ಯಾವ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮೇಯರ್ ಸ್ಥಾನ ಅಲಂಕರಿಸುವ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ. ಜೆಡಿಎಸ್ ಪಕ್ಷ ಕಾಂಗ್ರೆಸ್‍ಗೆ ಬೆಂಬಲ ನೀಡಿದರೆ ಪ್ರಕಾಶ್‍ನಗರ ವಾರ್ಡ್‍ನ ಅತ್ಯಂತ ಹಿರಿಯ ಸದಸ್ಯೆ ಜಿ.ಪದ್ಮಾವತಿ ಹೆಸರು ಮೇಯರ್ ಅಭ್ಯರ್ಥಿಯಾಗಿ ಘೋಷಣೆಯಾಗುವುದು ಬಹುತೇಕ ಖಚಿತ.

ಈ ಬಾರಿಯಾದರೂ ಮೇಯರ್ ಸ್ಥಾನ ದೊರೆಯಲಿ ಎಂದು ಕಂಡಕಂಡ ದೇವರಲ್ಲಿ ಹರಕೆ ಹೊತ್ತಿರುವ ಪದ್ಮಾವತಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಹಿರಿಯ ಮುಖಂಡರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಬಹುತೇಕ ಪದ್ಮಾವತಿಯವರೇ ಕಾಂಗ್ರೆಸ್‍ನ ಮೇಯರ್ ಅಭ್ಯರ್ಥಿ ಎಂದು ಘೋಷಣೆಯಾಗಿದ್ದರೂ ಕೊನೆ ಘಳಿಗೆಯಲ್ಲಿ ಅವರು ಡಿ.ಕೆ.ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರಾಗಿರುವುದೇ ತೊಡಕಾದರೂ ಆಶ್ಚರ್ಯಪಡುವಂತಿಲ್ಲ.  ರಾಜಕೀಯವಾಗಿ ದೇವೇಗೌಡರು ಹಾಗೂ ಡಿಕೆಶಿ ಹಾವು- ಮುಂಗುಸಿಯಂತಿದ್ದು, ಡಿ.ಕೆ.ಶಿವಕುಮಾರ್ ಕಟ್ಟಾ ಬೆಂಬಲಿಗರಾಗಿರುವ ಪದ್ಮಾವತಿ ಅವರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿ ಹೆಸರನ್ನು ಸೂಚಿಸಲು ಜೆಡಿಎಸ್ ಪಟ್ಟು ಹಿಡಿದರೆ ಅನಿವಾರ್ಯವಾಗಿ ಬೇರೊಬ್ಬ ಮಹಿಳೆಗೆ ಅದೃಷ್ಟ ಒಲಿದು ಬರಲಿದೆ.

ಮೂಲಗಳ ಪ್ರಕಾರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯೆಯಾಗಿರುವ ಸೌಮ್ಯ ಶಿವಕುಮಾರ್‍ರನ್ನು ಮೇಯರ್ ಅಭ್ಯರ್ಥಿಯನ್ನಾಗಿಸಬೇಕು ಎಂದು ಜೆಡಿಎಸ್ ಷರತ್ತು ಒಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.  269 ಮತದಾರರನ್ನು ಹೊಂದಿರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ 135 ಮತಗಳನ್ನು ಪಡೆಯುವ ಅಭ್ಯರ್ಥಿ ಮೇಯರ್‍ಯಾಗಿ ಆಯ್ಕೆಯಾಗುತ್ತಾರೆ. ಒಟ್ಟಾರೆ ಕಾಂಗ್ರೆಸ್ 112 ಮತಗಳನ್ನು ಹೊಂದಿದ್ದರೆ ಜೆಡಿಎಸ್‍ನ ಎಲ್ಲಾ 23 ಸದಸ್ಯರು ಕಾಂಗ್ರೆಸ್ ಪರ ಮತ ಚಲಾಯಿಸಿದರೆ ಮಾತ್ರ ಆ ಪಕ್ಷದ ಅಭ್ಯರ್ಥಿ ಮೇಯರ್ ಆಗುತ್ತಾರೆ.

ಕಾಂಗ್ರೆಸ್ ಮೇಯರ್ ಅಭ್ಯರ್ಥಿಗೆ ಜೆಡಿಎಸ್‍ನ ಬಂಡಾಯ ಶಾಸಕರು ಮತ ಹಾಕಬೇಕಾಗುತ್ತದೆ. ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಬಂಡಾಯಗಾರರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿರುವ ಕುಮಾರಸ್ವಾಮಿ, ಕೊನೆ ಘಳಿಗೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  127 ಮತಗಳನ್ನು ಹೊಂದಿರುವ ಬಿಜೆಪಿಗೆ ಕುಮಾರಸ್ವಾಮಿಯೊಂದಿಗೆ ಗುರುತಿಸಿಕೊಂಡಿರುವ ಕೇವಲ 8 ಮಂದಿ ಬೆಂಬಲ ಸೂಚಿಸಿದರೆ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಗಿ ಆಯ್ಕೆಯಾಗುವುದರ ಜೊತೆಗೆ ಎಲ್ಲಾ ಜೆಡಿಎಸ್ ಸದಸ್ಯರಿಗೂ ಅಧಿಕಾರ ಸಿಕ್ಕಂತಾಗುತ್ತದೆ. ಬಿಜೆಪಿಗೆ ಬೆಂಬಲ ನೀಡಿದರೆ ಉಪಮೇಯರ್, 5 ಸ್ಥಾಯಿ ಸಮಿತಿ ಹಾಗೂ ಒಬ್ಬ ಜೆಡಿಎಸ್ ಗುಂಪಿನ ನಾಯಕರಾಗಬಹುದು. ಆದರೆ ಕಾಂಗ್ರೆಸ್‍ಗೆ ಬೆಂಬಲ ನೀಡಿದರೆ ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾಯಿ ಸಮಿತಿ ಅಧ್ಯಕ್ಷಗಾದಿಗೆ ಪೈಪೋಟಿ ಏರ್ಪಡಬಹುದು.

ಹೀಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ನಿರ್ಧಾರಕ್ಕೆ ಬಂದಿರುವ ಕುಮಾರಸ್ವಾಮಿ ಕೊನೆ ಘಳಿಗೆಯಲ್ಲಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಹೊಂದಿದ್ದಾರೆ ಬಿಜೆಪಿ ನಾಯಕರುಗಳು. ಒಂದು ವೇಳೆ ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಿಸಿದರೆ ಮೇಯರ್ ರೇಸ್‍ನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ ಮಂದಿರ ವಾರ್ಡ್ ಸದಸ್ಯೆ ಲಕ್ಷ್ಮಿ ಉಮೇಶ್, ದೀಪಾಂಜಲಿ ನಗರ ವಾರ್ಡ್‍ನ ಅನುಪಮಾ ಧರ್ಮಪಾಲ್, ಸರ್.ಸಿ.ವಿ.ರಾಮನ್‍ನಗರ ವಾರ್ಡ್‍ನ ಅರುಣಾ ರವಿ ಹೆಸರುಗಳು ಕೇಳಿಬಂದಿವೆ.  ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ದಕ್ಷಿಣ ಭಾಗಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದರಿಂದ ಈ ಬಾರಿ ಕೇಂದ್ರ ಭಾಗಕ್ಕೆ ಒತ್ತು ನೀಡಿ ಎಂಬ ಒತ್ತಡ ಹೆಚ್ಚಾದರೆ ಅರುಣಾ ರವಿ ಅವರಿಗೆ ಅದೃಷ್ಟ ಒಲಿದು ಬರುವ ಸಾಧ್ಯತೆಗಳಿವೆ.

ಒಂದು ವೇಳೆ ಮೇಯರ್ ಸ್ಥಾನ ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ಜೆಡಿಎಸ್ ಷರತ್ತಿಗೆ ಕೊನೆ ಘಳಿಗೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಪಕ್ಷ ಜೈ ಎಂದರೆ ಲಗ್ಗೆರೆ ವಾರ್ಡ್‍ನ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿಯವರ ಹೆಸರು ಮೇಯರ್ ರೇಸ್‍ನಲ್ಲಿ ಕಾಣಿಸಿಕೊಳ್ಳಲಿದೆ. ಒಟ್ಟಾರೆ ಈ ಬಾರಿ ಯಾವುದೇ ಪಕ್ಷದ ಅಭ್ಯರ್ಥಿ ಮೇಯರ್ ಆಗಬೇಕಾದರೂ ಅದನ್ನು ನಿರ್ಧರಿಸುವುದು ಕುಮಾರಸ್ವಾಮಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್‍ನ ಬಂಡಾಯ ಶಾಸಕರಿಗೆ ಬೆಂಡಾದಂತಾಗುತ್ತದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೆ ಕೋಮುವಾದಿ ಜೊತೆಗೆ ಕೈ ಜೋಡಿಸಿದವರು ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಾಗಿ ಜೆಡಿಎಸ್ ಪಕ್ಷದಿಂದ ಮಂಜುಳಾ ನಾರಾಯಣಸ್ವಾಮಿ ಅವರನ್ನು ನೇರವಾಗಿ ಮೇಯರ್ ಚುನಾವಣೆಗೆ ಕಣಕ್ಕಿಳಿಸಿ,ಸದಸ್ಯರಿಗೆ ವಿಪ್ ನೀಡಿದರೆ ವಿಪ್ ಉಲ್ಲಂಘಿಸಲು ಸದಸ್ಯರಿಗೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿ ಪರೋಕ್ಷವಾಗಿ ಬಿಜೆಪಿಗೆ ಸಹಕರಿಸಿದಂತಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಬಿರುಸಿನ ಮಾತುಕತೆ ನಡೆಯುತ್ತಿದೆ.

ಇಂದು ಸಂಜೆ ಕುಮಾರಸ್ವಾಮಿ ತಮ್ಮ ಬೆಂಬಲಿಗರ ಸಭೆ ನಡೆಸಿ ಯಾವ ಪಕ್ಷಕ್ಕೆ ನಮ್ಮ ಬೆಂಬಲ ನೀಡಬೇಕು, ಯಾವ ತಂತ್ರಗಾರಿಕೆ ರೂಪಿಸಬೇಕು, ತಮ್ಮ ಪಕ್ಷ ಅಧಿಕಾರ ಹಿಡಿಯಲು ಯಾವ ನಡೆ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಬೆಂಬಲ ಘೋಷಿಸಿದ ನಂತರ ತಮ್ಮ ಬೆಂಬಲಿಗರೊಂದಿಗೆ ನಾಳೆ ಬೆಳಿಗ್ಗೆ ಕುಮಾರಸ್ವಾಮಿ ಕೇರಳದ ರೆಸಾರ್ಟ್‍ವೊಂದಕ್ಕೆ ತೆರಳಲಿದ್ದಾರೆ. ಅವರ ಜೊತೆ ಬಂಡಾಯ ಶಾಸಕರ ಬೆಂಬಲಿಗರು ತೆರಳುವ ಸಾಧ್ಯತೆ ಇದೆ. 27ರಂದು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‍ಗೆ ವಾಪಸ್ಸಾಗಿ 28ರಂದು ಬೆಳಗ್ಗೆ ನೇರವಾಗಿ ಮೇಯರ್ ಚುನಾವಣಾ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಉನ್ನತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin