ಕೂಲಿ ಕೆಲಸಕ್ಕಾಗಿ ಸಾಮೂಹಿಕ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

9

ಗಜೇಂದ್ರಗಡ,ಫೆ.7– ತಾಲೂಕು ಪಂಚಾಯತಿ ಹಾಗೂ ಕರ್ನಾಟಕ ಪ್ರಾಂತ್ಯ ಕೃಷಿಕೂಲಿಕಾರರ ಸಂಘದ ತಾಲೂಕಾ ಸಮಿತಿ ಜಂಟಿ ನೇತೃತ್ವದಲ್ಲಿ ಬರದ ಬೇಗೆಯಿಂದ ತತ್ತರಿಸುತ್ತಿರುವ ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಿಗನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಮರ್ಪಕ ಮಾಹಿತಿ ನೀಡಿ ಕೂಲಿಗಾಗಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸಲು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರಿಗಾಗಿ ಒಂದು ಕಾಯ್ದೆಯಾಗಿ ಬಂದಿರುವ ಮಹತ್ವದ ಯೋಜನೆ ಉದ್ಯೋಗ ಖಾತ್ರಿಯಾಗಿದೆ. ಗ್ರಾಮೀಣ ಭಾಗದ ಜನರ ಉತ್ತಮ ಜೀವನಕ್ಕಾಗಿ ಅತ್ಯುತ್ತಮ ಮೂಲಭೂತ ಸೌಲಭ್ಯಗಳನ್ನು ನಮ್ಮ ಸರಕಾರ ಕಲ್ಪಿಸಿಕೊಡುತ್ತಿದೆ. ಇದರಿಂದಾಗಿ ಹಳ್ಳಿಗಳ ರಸ್ತೆಗಳು, ಕೆರೆಗಳು, ಶೌಚಾಲಯ, ಬದು ನಿರ್ಮಾಣ, ಸಸಿಗಳ ಬೆಳೆಸುವಿಕೆ, ಆಟದ ಮೈದಾನ, ಉದ್ಯಾನವನ, ಸಮುದಾಯ ಭವನ, ಒಕ್ಕಲು ಕಣಗಳ ನಿರ್ಮಾಣ ಹೀಗೆ ಒಟ್ಟು 21 ಅಂಶಗಳ ಕಾರ್ಯಕ್ರಮಗಳನ್ನು ಸರಕಾರವು ಗ್ರಾಮ ಪಂಚಾಯತಿಗಳಿಗೆ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.

ಇಷ್ಟೆಲ್ಲಾ ಕಾರ್ಯಕ್ರಮಗಳು ಇದ್ದರೂ ಗ್ರಾಮ ಪಂಚಾಯತಿ ಜನರಿಗೆ ತಲುಪಿಸದೇ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಗುಳೆ ಹೋಗುವ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಬಡತನದ ಸಂಕಷ್ಟ ಬಗೆ ಹರಿಯದೆ ಜನರು ದಿಕ್ಕುದೆಸೆಯಿಲ್ಲದೆ ಸಿಕ್ಕಂತಹ ಕೂಲಿಗೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಎಲ್ಲವೂಗಳನ್ನು ಬಗೆಹರಿಸಿಕೊಳ್ಳಲು ನಮಗೆ ನಮ್ಮ ಹಕ್ಕಾಗಿ ಬಂದಿರುವ ಖಾತ್ರಿ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲು ನಾವು ಸಿದ್ದರಾಗಬೇಕು. ಇದರಿಂದ ನಮಗೆ ನಮ್ಮ ರೈತಾಪಿ ಜನರಿಗೆ ಪೂರ್ವಕವಾದ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡು ಕೂಲಿ ಕೆಲಸ ಪಡೆಯಲು ಮುಂದಾಗಬೇಕು. ಮೊದಲು ಗ್ರಾಮ ಪಂಚಾಯತಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿ ಅಧಿಕೃತ ನಮೂನೆ-8 ರಲ್ಲಿ ಉದ್ಯೋಗ ಖಾತ್ರಿ ಕೆಲಸ ಗುರುತಿಸಿಕೊಂಡು ಕೆಲಸಮಾಡಲು ಮುಂದಾಗಬೇಕು. ಒಂದು ಕುಟುಂಬಕ್ಕೆ 150 ದಿನಗಳ ಕೆಲಸ ದಿನಕ್ಕೆ 224 ರೂ ಕೂಲಿಯಂತೆ ವರ್ಷಕ್ಕೆ 33500 ರೂ ಆದಾಯವನ್ನು ಒಂದು ಕುಟುಂಬ ಪಡೆಯಬಹುದು.

ಆದ್ದರಿಂದ ನಾವು ಹಿಂದಿನ ಕೆಟ್ಟ ವ್ಯವಸ್ಥೆಯನ್ನು ಹೋಗಲಾಡಿಸಲು ಇಂದು ಸಂಘಟನೆಯ ಮೂಲಕ ಸಂಘಟಿತರಾಗಿ ಜಾಗೃತರಾಗಬೇಕಾಗಿದೆ ಎಂದು ಹೇಳಿದರು.ಕಾರ್ಮಿಕ ಮುಖಂಡ ಎಂ.ಎಸ್. ಹಡಪದ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದು 10 ವರ್ಷ ಕಳೆದರೂ ಕೃಷಿಕೂಲಿಕಾರರಿಗೆ ಉದ್ಯೋಗದ ಮಾಹಿತಿಯನ್ನು ನೀಡುವಲ್ಲಿ ಹಾಗೂ ಕೆಲಸ ನಿರ್ವಹಿಸುವಲ್ಲಿ ಗ್ರಾಮ ಪಂಚಾಯತಿಗಳು ಸಂಪೂರ್ಣ ವಿಫಲವಾಗಿವೆ. ಅಧಿಕಾರ ವಿಕೇಂದ್ರಿಕರಣವನ್ನು ವ್ಯವಸ್ಥಿತವಾಗಿ ರಾಜ್ಯದಲ್ಲಿ ಜರಿಗೆ ತಂದ ಖ್ಯಾತಿ ಕರ್ನಾಟಕ ಸರಕಾರಕ್ಕೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೂಡ್ಲೆಪ್ಪ ಗುಡಿಮನಿ, ಪೀರು ರಾಠೋಡ ಮಾತನಾಡಿದರು. ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಹಾಂತೇಶ ಬಂಡಿ, ಕಲ್ಲನಗೌಡ ಪಾಟೀಲ್, ರಾಜು ಬಡಿಗೇರ, ಗಣೇಶ ಬಡಿಗೇರ, ಸಿದ್ದು ಖಾಟಿ, ಶ್ರೀಶೈಲ ಎಚ್ ಪಾಟೀಲ್, ಪರಮೇಶ ಬೂದಿಹಾಳ, ರೇಣುಕಪ್ಪ ರಾಜೂರ, ಕಲ್ಲಪ್ಪ ಖಾಟಿ, ಮತ್ತು ನೂರಾರು ಜನಕೂಲಿಕಾರು ಸೇರಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin