ಕೃತಿಕಾ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ಕೊಚ್ಚಿ ಹೋದ ಕಾರ್ಮಿಕ
ಬೆಂಗಳೂರು, ಮೇ 21 – ಧುತ್ತೆಂದು ಸುರಿದ ಕೃತಿಕಾ ಮಳೆಗೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಕಾರ್ಮಿಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಇದುವರೆಗೂ ಶವ ಪತ್ತೆಯಾಗಿಲ್ಲ. ರಾತ್ರಿಯಿಡೀ ವರುಣನ ಆರ್ಭಟಕ್ಕೆ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕಚ್ಚಿದ ಪರಿಣಾಮ ಭಾಗಶಃ ಬೆಂಗಳೂರಿನಲ್ಲಿ ಕತ್ತಲೆಯ ಕಾರ್ಮೋಡ ಕವಿದಿತ್ತು. ನಂದಿನಿ ಬಡಾವಣೆಯಲ್ಲಿ ಮಳೆ ನೀರುಗಾಲುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಬಸವರಾಜ್ ಅವರ ಸಂಬಂಧಿ ಶಾಂತಕುಮಾರ್ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ.
ನಿನ್ನೆ ಮಳೆ ಆರಂಭಕ್ಕೂ ಮುನ್ನ ಕೆಲಸಗಾರರಿಗೆ ವಾರದ ಕೂಲಿ ನೀಡಿ ಕಾಮಗಾರಿ ಸ್ಥಳದಿಂದ ಹೊರಬರುವ ಸಂದರ್ಭದಲ್ಲಿ ಧುತ್ತೆಂದು ಮಳೆ ಸುರಿದ ಹಿನ್ನೆಲೆಯಲ್ಲಿ ಕಾಲುವೆ ತುಂಬಿ ಹರಿದ ರಭಸಕ್ಕೆ ಶಾಂತಕುಮಾರ್ ಕೊಚ್ಚಿ ಹೋಗಿದ್ದಾನೆ. ತಕ್ಷಣ ಆತನ ರಕ್ಷಣೆಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿನ್ನೆ ತಡರಾತ್ರಿವರೆಗಿನ ರಕ್ಷಣಾ ಕಾರ್ಯ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಎನ್ಡಿಆರ್ಎಫ್ ತುಕಡಿಗಳ ನೇತೃತ್ವದಲ್ಲಿ ಕಮಲಾನಗರ ಸಮೀಪದ 40ಕಣ್ಣು ಬ್ರಿಡ್ಜ್ ಸಮೀಪ ಬಿಬಿಎಂಪಿ ಸಿಬ್ಬಂದಿಗಳು ಹಾಗೂ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ.
ಹೀಗಾಗಿ ವೃಷಭಾವತಿ ನೀರು ಹರಿದು ಹೋಗುವ ಮಾಗಡಿರಸ್ತೆ ಸಮೀಪದ ಸುಮನಹಳ್ಳಿ ಸೇತುವೆ ಬಳಿ ಶಾಂತಕುಮಾರ್ ಶೋಧ ಕಾರ್ಯಾಚರಣೆ ಮುಂದುವರೆಸಲಾಯಿತು. ಸ್ಥಳಕ್ಕೆ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಶಾಸಕ ಕೆ.ಗೋಪಾಲಯ್ಯ, ಸ್ಥಳೀಯ ಬಿಬಿಎಂಪಿ ಸದಸ್ಯರು ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದರು.
ಸಂಚಾರ ಅಸ್ತವ್ಯಸ್ತ:
ರಾತ್ರಿಯಿಡೀ ಸುರಿದ ಮಳೆಗೆ ಮರಗಳು, ವಿದ್ಯುತ್ ಕಂಬಗಳು ರಸ್ತೆಗಳ ಮೇಲೆ ಉರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ಸವಾರರು ರಾತ್ರಿಯಿಡೀ ಮನೆ ಸೇರಲು ಪರದಾಡುವಂತಾಯಿತು. ವಿದ್ಯುತ್ ಕಂಬಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಇಡೀ ನಗರ ಕತ್ತಲೆಯ ಕೊಂಪೆಯಾಗಿತ್ತು. ರಸ್ತೆಗಳು ಕೆರೆಗಳಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ದ್ವಿಚಕ್ರ ವಾಹನ ಸವಾರರಂತೂ ಅಕ್ಷರಶಃ ಮಳೆಯಲ್ಲಿ ತೊಯ್ದುಹೋಗಿದ್ದರು. ಮನೆ ಸೇರಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಿರುಗಾಳಿ ಸಹಿತ ಮಳೆಗೆ ಬೃಹತ್ ಕಟ್ಟಡಗಳ ಮೇಲಿದ್ದ ಜಾಹೀರಾತು ಫಲಕಗಳು ಹಾರಿ ಹೋಗಿದ್ದವು. ಕೆಲವು ಬೃಹತ್ ಜಾಹೀರಾತು ಫಲಕಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದರೆ, ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇತ್ತು.
ಕೊಳಚೆ ನೀರಿನ ಅವಾಂತರ:
ರಾಜಕಾಲುವೆ ಸಮೀಪದ ಪ್ರದೇಶಗಳಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿದ ಪರಿಣಾಮ ನಾಗರಿಕರು ರಾತ್ರಿಯಿಡೀ ನಿದ್ದೆಯಿಲ್ಲದಂತೆ ಜಾಗರಣೆ ನಡೆಸಬೇಕಾಯಿತು. ಕೆಂಪೇಗೌಡ ಬಡಾವಣೆ, ಜೆ.ಸಿ.ನಗರ, ಲಗ್ಗೆರೆ, ಕತ್ರಿಗುಪ್ಪೆ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಬಡಾವಣೆ, ಬಿ.ಕೆ.ನಗರ ಮತ್ತಿತರ ತಗ್ಗು ಪ್ರದೇಶಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿ ಭಾರೀ ಅನಾಹುತಕ್ಕೆ ಎಡೆಮಾಡಿಕೊಟ್ಟಿತು.
ಟ್ರ್ಯಾಫಿಕ್ ಜಾಮ್:
ರಾತ್ರಿ ಬಿದ್ದ ಮರಗಳನ್ನು ಮುಂಜಾನೆಯಾದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಲ್ಲೇಶ್ವರಂ, ಮಾರ್ಗೋಸಾ ರಸ್ತೆ, ವೈಯಾಲಿಕಾವಲ್, ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್, ನಂದಿನಿಬಡಾವಣೆ, ಬಸವನಗುಡಿ ಮುಂತಾದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮರಗಳು ನೆಲಕ್ಕುರುಳಿ ಬಿದ್ದವು. ಲಾಲ್ಬಾಗ್ ವೆಸ್ಟ್ ಗೇಟ್ ಬಳಿ ಬೃಹತ್ ಪ್ರಮಾಣದ ಮರ ಉರುಳಿ ಬಿದ್ದ ಹಿನ್ನೆಲೆಯಲ್ಲಿ ಆ ಭಾಗದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಮಲ್ಲೇಶ್ವರಂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಮೆಟ್ರೋ ರೈಲು ಸಂಚಾರ ಬಂದ್:
ಮೆಟ್ರೋ ರೈಲು ನಿಲ್ದಾಣಗಳಿಗೆ ಏಕಾಏಕಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ವಿದ್ಯುತ್ ದೋಷ ಕಂಡುಬಂದು ಮೆಟ್ರೋ ರೈಲು ಸಂಚಾರವನ್ನು ದಿಢೀರ್ ಸ್ಥಗಿತಗೊಳಿಸಲಾಯಿತು. ಮೆಟ್ರೋ ರೈಲನ್ನೇ ನಂಬಿಕೊಂಡಿದ್ದ ಸಾವಿರಾರು ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈಲ್ವೆ ನಿಲ್ದಾಣಗಳಲ್ಲೇ ಕಾಲ ಕಳೆಯಬೇಕಾಯಿತು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ :
ದೇವಸಂದ್ರ 52.5 ಮಿಲಿ ಮೀಟರ್, ಕೆ.ಆರ್.ಪುರಂ 47, ಬಸವನಪುರ 52 , ಹೂಡಿ 42.5 , ಗರುಡಾಚಾರ್ಪಾಳ್ಯ 35.5 , ಕೊಟ್ಟಿಗೆಪಾಳ್ಯ 53 , ಹೇರೋಹಳ್ಳಿ 94 , ಜ್ಞಾನಭಾರತಿ 42.5, ಎಚ್ಬಿಆರ್ ಲೇಔಟ್ 50.5, ರಾಧಾಕೃಷ್ಣ ಟೆಂಪಲ್ ವಾರ್ಡ್ 72, ನಾಗಪುರ 52.5, ರಾಜಮಹಲ್ ಗುಟ್ಟಹಳ್ಳಿ 62.5, ನಾಗರಬಾವಿ 55, ಅಗ್ರಹಾರ ದಾಸರಹಳ್ಳಿ 49.5 ಹಾಗೂ ಮರಿಯಪ್ಪನಪಾಳ್ಯದಲ್ಲಿ 36 ಮಿಲಿ ಮೀಟರ್ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಾರ್ಜ್ -ಮೇಯರ್ ಕಾರ್ಯಾಚರಣೆ:
ಕೃತಿಕಾ ಮಳೆ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಆಯುಕ್ತ ಮಂಜುನಾಥಪ್ರಸಾದ್ ಅವರು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೌಡಾಯಿಸಿದರು. ಮಧ್ಯರಾತ್ರಿ ಒಂದು ಗಂಟೆಯವರೆಗೂ ನಿಯಂತ್ರಣ ಕೊಠಡಿಯಲ್ಲೇ ತಂಗಿದ್ದ ಇವರು, ಸಾರ್ವಜನಿಕರು ಕುಂದುಕೊರತೆ ಆಲಿಸಿ ತಕ್ಷಣ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ದೌಡಾಯಿಸುವಂತೆ ಸಲಹೆ, ಸೂಚನೆ ನೀಡುವ ಮೂಲಕ ಗಮನ ಸೆಳೆದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS