ಕೃಷ್ಣಾಗಮನದ ಬೆನ್ನಲ್ಲೇ ಮತ್ತಷ್ಟು ಒಕ್ಕಲಿಗ ಮುಖಂಡರು ಬಿಜೆಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

bjp

ಬೆಂಗಳೂರು,ಮಾ.24-ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ , ಹಿರಿಯ ಸಂಸದೀಯ ಪಟು ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಸೆಳೆದಿರುವ ಬೆನ್ನಲೇ ಇದೀಗ ಇನ್ನಷ್ಟು ಒಕ್ಕಲಿಗರನ್ನು ಕರೆತರುವ ಪ್ರಯತ್ನ ಮುಂದುವರೆದಿದೆ. ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್, ಚಿಂತಾಮಣಿಯ ಮಾಜಿ ಶಾಸಕ ಡಾ.ಸುಧಾಕರ್ ಅವರು ಬಿಜೆಪಿ ಸೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.   ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮುಖಂಡ ಆರ್.ಅಶೋಕ್ ಹಾಗೂ ರಾಜ್ಯದ ಪ್ರಭಾವಿ ಸಮುದಾಯದ ಧಾರ್ಮಿಕ ಮುಖಂಡರೊಬ್ಬರ ಜೊತೆ ಮಾತುಕತೆ ನಡೆಸಿರುವ ಉಭಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಒಲವು ತೋರಿದ್ದಾರೆ.

ಶಾಸಕ ಯೋಗೀಶ್ವರ್ ಮಂಡ್ಯ ಜಿಲ್ಲೆ ಮದ್ದೂರಿನಿಂದ ಕಣಕ್ಕಿಳಿಯುವ ಜೊತೆಗೆ ತಾವು ಪ್ರತಿನಿಧಿಸುವ ಚನ್ನಪಟ್ಟಣಕ್ಕೆ ತಮ್ಮ ಸಹೋದರ ಹಾಗೂ ಹಾಲಿ ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್‍ಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.   ಎರಡು ಕ್ಷೇತ್ರಗಳಲ್ಲಿ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಬರುವ ಬಗ್ಗೆ ನನ್ನ ತಕರಾರು ಇಲ್ಲ ಎಂದು ಯೋಗೇಶ್ವರ್ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.  ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಘಟನೆ ಕೊರತೆ ಎದುರಿಸುತ್ತರುವ ಬಿಜೆಪಿ ಬಹುತೇಕ ಯೋಗೇಶ್ವರ್ ಅವರ ಬೇಡಿಕೆಯನ್ನು ಈಡೇರಿಸುವ ಸಂಭವವಿದೆ.

ರಾಮನಗರ ಜಿಲ್ಲೆಯಲ್ಲಿ ಪ್ರಭಾವಿಯಾಗಿರುವ ಯೋಗೇಶ್ವರ್ ಅವರಿಗೆ ಪಕ್ಷದ ಸಾರಥ್ಯವನ್ನು ನೀಡಬೇಕೆಂದು ಧಾರ್ಮಿಕ ಮುಖಂಡರೊಬ್ಬರು ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿದ್ದಾರೆ.   ಇನ್ನು ಕಾಂಗ್ರೆಸ್‍ನಲ್ಲಿ ಕೆಲವು ಕಾರಣಗಳಿಂದ ದೂರ ಉಳಿದಿರುವ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಕೂಡ ಬಿಜೆಪಿ ಸೇರುವ ಬಗ್ಗೆ ಒಲವು ತೋರಿದ್ದಾರೆ.   ಕಾಂಗ್ರೆಸ್‍ನ ಸಂಸದರೊಬ್ಬರ ಜೊತೆ ಮುನಿಸಿಕೊಂಡಿರುವ ಅವರು, ಬಿಜೆಪಿಯಲ್ಲೆ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅವರ ಸೇರ್ಪಡೆಗೆ ಪಕ್ಷದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ತಿಂಗಳು ಎಂ.ಸಿ.ಸುಧಾಕರ್ ಬಿಜೆಪಿಗೆ ಸೇರ್ಪಡೆಯಾಗಲಿದ್ದು , ತಾಂತ್ರಿಕ ಕಾರಣಗಳಿಂದ ಯೋಗೇಶ್ವರ್ ಸೇರ್ಪಡೆ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.   ಮೈಸೂರು ಹಾಗೂ ಅದರ ಸುತ್ತಮುತ್ತಲ ಭಾಗದಲ್ಲಿ ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯದ ಯಾವುದೇ ಮುಖಂಡರು ಬಿಜೆಪಿಗೆ ಬಂದರೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.   ಪಕ್ಷ ಯಾವ ಯಾವ ಭಾಗದಲ್ಲಿ ಸಂಘಟನೆಯ ಕೊರತೆ ಎದುರಿಸುತ್ತಿದೆಯೋ ಅಂತಹ ಕಡೆ ಪ್ರಭಾವಿ ಸಮುದಾಯದ ಮುಖಂಡರು ಪಕ್ಷಕ್ಕೆ ಬಂದ್ದ ಮುಕ್ತ ಸ್ವಾಗತ ನೀಡಬೇಕೆಂದು ಸೂಚಿಸಿದ್ದಾರೆ.   ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ತೆರೆಮರೆಗೆ ಸರಿದಿರುವ ಈ ಸಮುದಾಯದ ಮುಖಂಡರನ್ನು ಸೆಳೆಯುವ ಪ್ರಯತ್ನ ಬಿಜೆಪಿ ನಡೆಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin