ಕೆಂಪೇಗೌಡರಿಗೆ ಬಿಬಿಎಂಪಿ ಅಪಮಾನ, ಭುಗಿಲೆದ್ದ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಮಾ.3- ನಗರ ನಿರ್ಮಾತೃ, ವೀರ ಸೇನಾನಿ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಬಿಬಿಎಂಪಿ ಮತ್ತೊಮ್ಮೆ ಅಪಮಾನ ಮಾಡಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಕಳೆದ 28ರಂದು ಮಂಡಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2018-19ನೆ ಸಾಲಿನ ಆಯವ್ಯಯ ಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರು ಎಡಗೈಯಲ್ಲಿ ಕತ್ತಿ, ಬಲಗೈಯಲ್ಲಿ ಗುರಾಣಿ ಹಿಡಿದಿರುವ ಚಿತ್ರ ಪ್ರಕಟಿಸಲಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಯ ಎದುರಿನ ವೃತ್ತದಲ್ಲಿ ಇತಿಹಾಸ ಪ್ರಸಿದ್ಧ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ಇದೆ. ಪಾಲಿಕೆಯ ಯಾವುದೇ ಕಾರ್ಯಕ್ರಮ ನಡೆದರೂ ಪ್ರತಿಯೊಬ್ಬರೂ ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಗುರಾಣಿ ಹಿಡಿದು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿರುವಂತಹ ಅಜಾನುಬಾಹು ಕೆಂಪೇಗೌಡರ ಪ್ರತಿಮೆ ಮತ್ತು ಭಾವಚಿತ್ರ ಎಲ್ಲೆಲ್ಲೂ ರಾರಾಜಿಸುತ್ತಿದೆ.

ಬಜೆಟ್ ಪುಸ್ತಕದಲ್ಲಿ ಎಡಗೈಯಲ್ಲಿ ಕತ್ತಿ, ಬಲಗೈಯಲ್ಲಿ ಗುರಾಣಿ ಹಿಡಿದಿರುವ ಭಾವಚಿತ್ರ ಪ್ರಕಟವಾಗಿರುವುದು ಯಾರ ಗಮನಕ್ಕೂ ಬಾರದಿರುವುದು ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತಿದೆ.28ರಂದು ಮಂಡನೆಯಾದ ಬಜೆಟ್‍ನಲ್ಲಿ ಬಿಬಿಎಂಪಿ ಸದಸ್ಯರಿಗೆ ಟ್ಯಾಬ್ ನೀಡುವ ಘೋಷಣೆ ಮಾಡಿದ ಎರಡೇ ದಿನಕ್ಕೆ ಎಲ್ಲ ಬಿಬಿಎಂಪಿ ಸದಸ್ಯರುಗಳಿಗೆ 44 ಸಾವಿರ ಮುಖಬೆಲೆಯ ಐ-ಪಾಡ್ ನೀಡಲಾಗಿದೆ.

ತಮಗೆ ಬೇಕಾದ ಸವಲತ್ತನ್ನು ಕೇವಲ ಎರಡೇ ದಿನಕ್ಕೆ ಪಡೆಯಲು ಆಸಕ್ತಿ ತೋರುವ ಬಿಬಿಎಂಪಿ ಸದಸ್ಯರು ಬಜೆಟ್ ಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿರುವುದು ಕಣ್ಣಿಗೆ ಬೀಳದಿರುವುದು ಬೆಂಗಳೂರಿಗರ ದುರ್ದೈವವೇ ಸರಿ.  ಮಾಗಡಿಯಲ್ಲಿ ಪತ್ತೆಯಾಗಿರುವ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಆಸಕ್ತಿ ವಹಿಸದಿರುವುದು, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕೆಂಪೇಗೌಡರ ಅಧ್ಯಯನ ಪೀಠ ಸ್ಥಾಪಿಸಲು ಮೀನಾಮೇಷ ಎಣಿಸುವ ಮೂಲಕ ಬೆಂಗಳೂರು ಕಟ್ಟಿದ ಕೆಂಪೇಗೌಡರನ್ನು ಕಡೆಗಣಿಸಿರುವುದು ಕೆಲವರ ಆಕ್ರೋಶಕ್ಕೆ ಗುರಿಯಾಗಿದ್ದ ಬೆನ್ನಲ್ಲೆ ಮತ್ತೆ ನಾಡಪ್ರಭುಗಳಿಗೆ ಅಪಮಾನ ಮಾಡಿರುವುದು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ.

Facebook Comments

Sri Raghav

Admin