ಕೆಆರ್‌ಎಸ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಮಂಡ್ಯ, ಆ.27- ನಮಗೇ ಕುಡಿಯಲು ನೀರಿಲ್ಲ. ಕೃಷ್ಣರಾಜ ಸಾಗರ ಜಲಾಶಯ ನೀರಿಲ್ಲದೆ ಬಣಗುಡುತ್ತಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡು ಮಾನವೀಯತೆಯಿಂದ ವರ್ತಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇಂದು ಕೃಷ್ಣರಾಜಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣರಾಜಸಾಗರದಿಂದಲೇ ಮೈಸೂರು, ಬೆಂಗಳೂರು ಮತ್ತಿತರ ನಗರಗಳ ಜನರು ಕುಡಿಯುವ ನೀರು ಪಡೆಯಬೇಕಾಗಿದೆ. ಕಳೆದ ವರ್ಷವೂ ಸರಿಯಾಗಿ ಮಳೆಯಾಗಿಲ್ಲ, ಈಗಲೂ ಉತ್ತಮ ಮಳೆ ಬಂದಿಲ್ಲ. ಹಾಗಾಗಿ ಕೆಆರ್‌ಎಸ್ ಭರ್ತಿಯಾಗಿಲ್ಲ. ಇಂತಹ ಕಷ್ಟದ ಸಮಯದಲ್ಲಿ ತಮಿಳುನಾಡು ಸರ್ಕಾರ ಸಾಂಬಾ ಬೆಳೆಗೆ ನೀರು ಬಿಡುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವುದು ತುಂಬ ಕಷ್ಟ. ಹಾಗಾಗಿ ಅಲ್ಲಿನ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಒತ್ತಡ ಕಡಿಮೆ ಮಾಡಬೇಕು ಎಂದರು. ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಇಲಾಖೆ ಅಕಾರಿಗಳೊಂದಿಗೆ ಬಿಎಸ್‌ವೈ ಜಲಾಶಯದ ಮಾಹಿತಿ ಪಡೆದುಕೊಂಡರು.  ಕೆಆರ್‌ಎಸ್ ಜಲಾಶಯದ ಈಗಿರುವ ನೀರಿನ ಪ್ರಮಾಣ, ಕೃಷಿ, ಕುಡಿಯಲು ಅಗತ್ಯವಿರುವ ನೀರಿನ ಬಗ್ಗೆ ಮಾಹಿತಿ ಕಲೆ ಹಾಕಿದರು.  ತಮಿಳುನಾಡಿಗೆ ಈಗ ಬಿಡುತ್ತಿರುವ ನೀರು, ಒಪ್ಪಂದದಂತೆ ಬಿಡಬೇಕಾಗಿರುವ ನೀರು, ಕೃಷಿಗೆ ಎಷ್ಟು ನೀರು ಅಗತ್ಯವಿದೆ, ಕುಡಿಯುವ ನೀರಿನ ಲಭ್ಯತೆ ಎಷ್ಟು ಎಂಬ ಬಗ್ಗೆ ಅಕಾರಿಗಳಿಂದ ಮಾಹಿತಿ ಪಡೆದರು.

► Follow us on –  Facebook / Twitter  / Google+

Facebook Comments

Sri Raghav

Admin