ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಗರಾಜು ರಾಜೀನಾಮೆ, ಎಂ.ಪಿ.ರವೀಂದ್ರ ಹೊಸ ಅಧ್ಯಕ್ಷ..?

ಈ ಸುದ್ದಿಯನ್ನು ಶೇರ್ ಮಾಡಿ

KMF-Nandini

ಬೆಂಗಳೂರು, ಮಾ.24- ಭಾರೀ ಕಗ್ಗಂಟಾಗಿ ಪರಿಣಮಿಸಿದ್ದ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ (ಕೆಎಂಎಫ್)ನ ಅಧ್ಯಕ್ಷ ಸ್ಥಾನ ಇತ್ಯರ್ಥವಾಗಿದ್ದು, ಹಾಲಿ ಅಧ್ಯಕ್ಷ ನಾಗರಾಜು ರಾಜೀನಾಮೆ ನೀಡಿದ್ದಾರೆ. ಮುಂದಿನ ಅಧ್ಯಕ್ಷರನ್ನಾಗಿ ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ.ರವೀಂದ್ರ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಹಾಲಿ ಅಧ್ಯಕ್ಷ ನಾಗರಾಜ್ ಅವರಿಗೆ ಆರಂಭದಲ್ಲಿ ಎರಡು ಕಾಲು ವರ್ಷ ಮಾತ್ರ ನಿಗದಿ ಮಾಡಲಾಗಿತ್ತು. ಅದನ್ನು ಮೀರಿ ಅವರು ಎರಡೂವರೆ ವರ್ಷ ಮೇಲ್ಪಟ್ಟು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇನ್ನೂ ಮುಂದುವರೆಯಬೇಕೆಂದು ಹಠ ಹಿಡಿದಿದ್ದ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.

ಇಂದು ನಾಗರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಳೆ ನಡೆಯುವ ಕೆಎಂಎಫ್‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜೀನಾಮೆ ಅಂಗೀಕಾರವಾಗಲಿದೆ. ನಂತರ ಚುನಾವಣಾ ಆಯೋಗ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ದಿನಾಂಕ ನಿಗದಿಪಡಿಸಲಿದ್ದು, ಅಲ್ಲಿ ಹರಪನಹಳ್ಳಿ ಕ್ಷೇತ್ರದ ಎಂ.ಪಿ.ರವೀಂದ್ರ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಒಪ್ಪಂದದಂತೆ ನಾಗರಾಜು ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವೊಲಿಸುವ ಪ್ರಯತ್ನ ಮಾಡಿದರು, ಆದರೂ ಜಗ್ಗಿರಲಿಲ್ಲ.
ಆಡಳಿತ ಮಂಡಳಿಯಲ್ಲಿ ಎಲ್ಲಾ ನಿರ್ದೇಶಕರು ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿರುವುದರಿಂದ ನಾಗರಾಜು ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಮೂಲಗಳ ಪ್ರಕಾರ ನಾಗರಾಜು ಜೆಡಿಎಸ್ ಕಡೆಗೆ ವಾಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಅಲ್ಲದೆ, ಅವರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದೇ ದಳಪತಿಗಳು ಪರೋಕ್ಷವಾಗಿ ಕೈ ಜೋಡಿಸಿದ್ದೆ ಡಿಕೆಶಿ ಕಣ್ಣು ಕೆಂಪಾಗುವಂತೆ ಮಾಡಿತ್ತು. ಜೊತೆಗೆ ಎಂ.ಪಿ.ರವೀಂದ್ರ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಸಂಪುಟದ ಸ್ಥಾನಮಾನ ಹೊಂದಿರುವ ಈ ಸ್ಥಾನವನ್ನು ನೀಡುವುದಾಗಿ ಪಕ್ಷ ವಾಗ್ದಾನ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎಂ.ಪಿ.ರವೀಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಸಕಾರಾತ್ಮಕವಾಗಿದ್ದರು. ಈ ಎಲ್ಲಾ ಅಂಶಗಳು ನಾಗರಾಜು ಪದಚ್ಯುತಿಗೆ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin