ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ 3 ಲಕ್ಷ ವಿಮೆ । ಹೈಟೆಕ್ ಸೌಲಭ್ಯ । ಮತದಾನ ಜಾಗೃತಿ

ಈ ಸುದ್ದಿಯನ್ನು ಶೇರ್ ಮಾಡಿ

KSRTC-TIcket--01

ಬೆಂಗಳೂರು, ಏ.22-ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲಿ ಮತ್ತು ಬಸ್‍ನಲ್ಲಿ ಅಳವಡಿಸಿರುವ ವಿದ್ಯುನ್ಮಾನ ಫಲಕದಲ್ಲಿ ಸ್ಥಳ ಸೂಚಿಯ ಜೊತೆಗೆ ಮತದಾರರಿಗೆ ಜಾಗೃತಿ ಮೂಡಿಸುವ ಸಂದೇಶವೂ ಪ್ರದರ್ಶಿತವಾಗುತ್ತಿದೆ. ಕೆಎಸ್‍ಆರ್‍ಟಿಸಿ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲಿ ಮೇ 12ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂಬ ಘೋಷ ವಾಕ್ಯವನ್ನು ಮುದ್ರಿಸಲಾಗಿದೆ.

ಮೈಸೂರಿನ ನಗರ ಸಾರಿಗೆ ಸಂಸ್ಥೆಯ ಬಸ್‍ಗಳ ಒಳಭಾಗದಲ್ಲಿ ಅಳವಡಿಸಿರುವ ವಿದ್ಯುನ್ಮಾನ ಫಲಕದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ವಾಕ್ಯಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಭಾರತೀಯ ಚುನಾವಣಾ ಆಯೋಗದ ಪ್ರಯತ್ನಕ್ಕೆ ಕೆಎಸ್‍ಆರ್‍ಟಿಸಿ ಪೂರಕವಾಗಿ ಸ್ಪಂದಿಸುತ್ತಿದೆ. ನಿನ್ನೆಯಿಂದಲೇ ಕೆಎಸ್‍ಆರ್‍ಟಿಸಿ ಬಸ್‍ಗಳ ಟಿಕೆಟ್‍ನಲ್ಲಿ ಜಾಗೃತಿ ಮೂಡಿಸುವ ವಾಕ್ಯವನ್ನು ಮುದ್ರಿಸಲಾಗುತ್ತಿದೆ. ಅಲ್ಲದೆ ಸಾರಿಗೆ ಸಂಸ್ಥೆ ಹೊರತರುವ ಸಾರಿಗೆ ಸಂಪದ ಪತ್ರಿಕೆಯಲ್ಲೂ ಮತದಾನದ ಬಗ್ಗೆ ಅರಿವು ಮೂಡಿಸುವಂತಹ ವಾಕ್ಯಗಳನ್ನು ಮುದ್ರಿಸಲಾಗುತ್ತದೆ.

ಈ ಪತ್ರಿಕೆಯು ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರಿಗೂ ಲಭ್ಯವಾಗುತ್ತದೆ. ಅದರಲ್ಲಿ ಮತದಾನ ಶ್ರೇಷ್ಠ , ಸಾಮಾಜಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ. ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು. ಪ್ರಜಾಪ್ರಭುತ್ವದ ಭವಿಷ್ಯಮತದಾನದಲ್ಲಿದೆ. ಮರೆಯದೇ ಮತದಾನ ಮಾಡಿ. ಎಲ್ಲವನ್ನೂ ಬದಿಗಿಡಿ, ಇಂದಿನ ಮತದಾನ ನಮ್ಮ ಮುಂದಿನ ಬದುಕನ್ನು ರೂಪಿಸುತ್ತದೆ. ನಿಮ್ಮ ದೃಢವಾದ ಮತದಿಂದ ದೇಶಕ್ಕೆ ಸದೃಢ ಸರ್ಕಾರ ಇತ್ಯಾದಿ ಘೋಷಣೆಗಳನ್ನು ಮುದ್ರಿಸಲಾಗಿದೆ.  ಚುನಾವಣಾ ಆಯೋಗ ಕೂಡ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತದಾನದ ಗೀತೆ, ಛಾಯಾಚಿತ್ರಪ್ರದರ್ಶನ, ವ್ಯಂಗ್ಯಚಿತ್ರ ಪ್ರದರ್ಶನ, ಕಲಾವಿದರು, ಗಣ್ಯರಿಂದ ಉತ್ತೇಜಿಸುವ ಹೇಳಿಕೆಗಳು, ಪಿಂಕ್ ಮತಗಟ್ಟೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಪ್ರಮಾಣ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.

ಮೂರು ಲಕ್ಷ ರೂ.ವಿಮೆ :
ಕೆಎಸ್‍ಆರ್‍ಟಿಸಿ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೂರು ಲಕ್ಷ ರೂ.ವರೆಗೂ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲಿ ಈ ಸಂದೇಶವನ್ನು ನೀಡಲಾಗುತ್ತಿದೆ. ಪ್ರಯಾಣಿಕರು ಮೂರು ಲಕ್ಷ ರೂ.ವರೆಗೆ ನಿಗಮದ ವಿಮಾ ಪರಿಹಾರಕ್ಕೆ ಒಳಪಟ್ಟಿರುತ್ತಾರೆ ಎಂಬ ಸಂದೇಶವನ್ನು ಟಿಕೆಟ್‍ನಲ್ಲಿ ನೀಡಲಾಗುತ್ತಿದೆ.

Facebook Comments

Sri Raghav

Admin