ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿಯೂ ಇಂದಿರಾ ಕ್ಯಾಂಟೀನ್

ಈ ಸುದ್ದಿಯನ್ನು ಶೇರ್ ಮಾಡಿ

Transport--02

ಬೆಂಗಳೂರು. ಅ.24 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗಳನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿಯೂ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಪ್ರಕಟಿಸಿದ್ದಾರೆ. ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ರಾಜ್ಯದ ಪಟ್ಟಣ,ನಗರ,ತಾಲ್ಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಅದಕ್ಕೆ ಪೂರಕವಾಗಿ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಜಾಗ ನೀಡಲು ನಿರ್ಧರಿಸಿದ್ದೇವೆ. ನಮ್ಮ ಕ್ಯಾಂಟೀನ್ ಗಳಿಗೆ ತೊಂದರೆಯಾಗದಂತೆ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅವಕಾಶ ನೀಡುತ್ತೇವೆ, ಆದರೆ ಎಲ್ಲಾ ನಿಲ್ದಾಣಗಳ ಬದಲು ಬೇಡಿಕೆ ಬಂದ ಕಡೆ ಆಧ್ಯತೆ ಮೇರೆಗೆ ಕ್ಯಾಂಟೀನ್ ಆರಂಭಿಸಲಿದ್ದೇವೆ ಎಂದರು.

ಪ್ರಯಾಣಿಕರ ಮಾಹಿತಿಗಾಗಿ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಮಾಹಿತಿ ಫಲಕ ಅಳವಡಿಸುತ್ತೇವೆ. ಬಸ್ ವೇಳಾಪಟ್ಟಿ ಆಗಮನ,ನಿರ್ಗಮನದ ಮಾಹಿತಿಯನ್ನು ಪ್ರಕಟಿಸಲು ನಿರ್ಧಾರಿಸಿದ್ದು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ನಿರ್ಧಾರಿಸಲಾಗಿದೆ ಎಂದರು. ಸಧ್ಯ ಎಸಿ ಬಸ್ ಗಳಲ್ಲಿ ಕುಡಿಯುವ ನೀರು ಕೊಡಲಾಗುತ್ತಿದ. ಆದರೆ ಬಸ್ ನಿಲ್ದಾಣದಲ್ಲಿಯೂ ಕುಡಿಯುನ ನೀರಿನ ಪೂರೈಕೆಗೆ ಬೇಡಿಕೆ ಬಂದಿದೆ.ಹಾಗಾಗಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಿದ್ದು, ಶೌಚಾಲಯಗಳ ಶುಚಿತ್ವಕ್ಕೆ ಆಧ್ಯತೆ ನೀಡುತ್ತೇವೆ.ಈ ಸಂಬಂಧ ಜನರಿಂದ ಬಂದ ದೂರಿನ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಪೀಣ್ಯದಲ್ಲಿರುವ ಬಸವೇಶ್ವರ ಬಸ್ ಟರ್ಮಿನಲ್ ಸ್ಥಗಿತಗೊಂಡಿದ್ದು ಕೆಎಸ್‌ಆರ್‌ಟಿಸಿ ಜೊತೆಗೆ
ಎರಡು ಹಂತದಲ್ಲಿ ಬಿಎಂಟಿಸಿ ಲಿಂಕ್ ಹಾಗು ಮೆಟ್ರೋ ಫೀಡರ್ ಸರ್ವೀಸ್ ಕಲ್ಪಿಸಲು ನಿರ್ಧಾರ ಕೈಗೊಂಡಿದ್ದೇವೆ.53 ಕೋಟಿ ವೆಚ್ಚದಲ್ಲಿ ಆರು ಹೊಸ ಬಸ ನಿಲ್ದಾಣ ನಿರ್ಮಾಣ, ಹರಿಹರ,ಕೋಲಾರ, ದೊಡ್ಡಬಳ್ಳಾಪುರ ಸೇರಿ 21 ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಿದ್ದು, ಮಂಗಳೂರಿನಲ್ಲಿ ಟ್ರಾನ್ಸ್ ಪೋರ್ಟ್ ಹಬ್ ಮಾಡಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಮುಂಗಡ ಆಸನ ಕಾಯ್ದಿರಿಸುವವರಿಗೆ ಅವತಾರ್ ಮೂಲಕ ಮೊಬೈಲ್ ಫೋನ್ ನಲ್ಲೇ ಟಿಕೆಟ್ ಪ್ರತಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪೇಪರ್ ಲೆಸ್ ಟಿಕೆಟ್ ವ್ಯವಸ್ಥೆಗೆ ಇದು ಪೂರಕವಾಗಲಿದೆ. ಜೊತೆಗೆ ಮೈಸೂರು ರೀತಿಯಲ್ಲಿ ಎಲ್ಲಾ ಬಸ್ ಗಳಿಗೂ ಜಿಪಿಎಸ್ ಅಳವಡಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. 100 ಸಿಸಿ ಒಳಗಿನ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಿಗೆ ಅವಕಾಶವಿಲ್ಲ, ಅದನ್ನು ಕೋರ್ಟ್ ಈಗ ಪ್ರಶ್ನಿಸಿ ಆದೇಶ ಹೊರಡಿಸಿದೆ. ಹಾಗಾಗಿ ನಾವು ಅದನ್ನು ಜಾರಿಗೆ ತರುತ್ತಿದ್ದೇವೆ,ಇದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದರು. ತಿರುಪತಿ ಪ್ಯಾಕೇಜ್ ಟೂರ್ ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಇನ್ನಷ್ಟು ಬಸ್ ಗಳನ್ನು ತಿರುಪತಿ ಪ್ಯಾಕೇಜ್ ಟೂರ್ ಗೆ ಪರಿಚಯಿಸುತ್ತಿದ್ದೇವೆ ಎಂದರು.

ಸುಲಭ್ ಶೌಚಾಲಯ:

ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿನ ಅಸಮರ್ಪಕ ನಿರ್ವಹಣೆ ಹಾಗು ಹಣ ಪಡೆಯುತ್ತಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಶೌಚಾಲಯಗಳನ್ನು ಸುಲಭ್ ಇಂಟರ್ ನ್ಯಾಷನಲ್ ಅವರಿಗೆ ವಹಿಸುವ ನಿರ್ಧಾರವನ್ನು ಕೆಎಸ್‌ಆರ್‌ಟಿಸಿ ತೆಗೆದುಕೊಂಡಿದೆ.

ಬೆಂಗಳೂರು ಕೇಂದ್ರ ವಿಭಾಗ, ರಾಮನಗರ ಹಾಗು ಮಂಡ್ಯ ಜಿಲ್ಲೆಗಳ ಬಸ್ ನಿಲ್ದಾಣಗಳನ್ನು ಸುಲಭ್ ಶೌಚಾಲಯಕ್ಕೆ ವಹಿಸಲಿದ್ದು ನಂತರ ಹಂತ ಹಂತವಾಗಿ ರಾಜ್ಯದ ಎಲ್ಲಾ 151 ಬಸ್ ನಿಲ್ದಾಣಗಳ ಶೌಚಾಲಯ ನಿರ್ವಹಣೆಯನ್ನು ಸುಲಭ್ ಶೌಚಾಲಯಕ್ಕೆ ವಹಿಸಲಾಗುತ್ತದೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಮಾಹಿತಿ ನೀಡಿದ್ದಾರೆ.
ನಾಳೆ ಈ ಸಂಬಂಧ ಆಡಳಿತ ಮಂಡಳಿ ಸಭೆಯಲ್ಲಿ ವಿಷಯ ಪ್ರಸ್ತಾವಾಗಲಿದ್ದು ,ಚರ್ಚೆಯ ಬಳಿಕ ಅಧಿಕೃತವಾಗಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Facebook Comments

Sri Raghav

Admin