ಕೆಪಿಎಸ್‍ಸಿ ಅಧ್ಯಕ್ಷರನ್ನಾಗಿ ಶಾಮ್‍ಭಟ್ ನೇಮಕ ಮಾಡಿ ರಾಜ್ಯಪಾಲರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

shyam-bhat

ಬೆಂಗಳೂರು, ಆ.7- ಇಡೀ ರಾಜ್ಯದ ಗಮನ ಸೆಳೆದಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದ ಅಧ್ಯಕ್ಷ ಸ್ಥಾನದ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.  ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆ ರಾಜ್ಯಪಾಲರಿಂದ ತಿರಸ್ಕೃತಗೊಂಡಿದ್ದ ಶಾಮ್‍ಭಟ್ ಅವರನ್ನೇ ಈಗ ಕೆಪಿಎಸ್‍ಸಿ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಪಾಲರೇ ಆದೇಶ ಹೊರಡಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.  ಸರ್ಕಾರ ಈ ಮೊದಲು ಶಾಮ್‍ಭಟ್ ಅವರ ಹೆಸರನ್ನು ಶಿಫಾರಸು ಮಾಡಿದಾಗ ಅವರ ವಿರುದ್ಧ ಅರ್ಕಾವತಿ ಬಡಾವಣೆ ಮತ್ತು ಕೆಪಿಎಸ್‍ಸಿಗೆ ಸಂಬಂಧಿಸಿದಂತೆ ಕೆಲವು ಭ್ರಷ್ಟಾಚಾರ ಆರೋಪಗಳಿವೆ ಎಂದು ರಾಜ್ಯಪಾಲರು ಇವರ ಹೆಸರನ್ನು ತಿರಸ್ಕರಿಸಿದ್ದರು. ಅನಂತರ ಶಾಮ್‍ಭಟ್ ಅವರನ್ನು ಸಹಕಾರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಶಾಮ್‍ಭಟ್ ಅವರ ಹೆಸರು ಪ್ರಸ್ತಾಪವಾದಾಗ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸರ್ಕಾರ ಭ್ರಷ್ಟರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸುತ್ತಿದೆ. ಇದನ್ನು ತಡೆಯಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಶಾಮ್‍ಭಟ್ ಹೆಸರನ್ನು ತಿರಸ್ಕರಿಸಿದ್ದರು. ಆದರೆ, ಈಗ ಅದೇ ಶಾಮ್‍ಭಟ್ ಅವರ ನೇಮಕಕ್ಕೆ ರಾಜ್ಯಪಾಲರು ಸಹಿ ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.   ವಿ.ಆರ್.ಸುದರ್ಶನ್ ಅವರ ಹೆಸರನ್ನು ಸರ್ಕಾರ ಪ್ರಸ್ತಾಪಿಸಿದಾಗಲೂ ಕೂಡ ಅವರನ್ನು ಸಕ್ರಿಯ ರಾಜಕಾರಣಿ ಎಂಬ ಕಾರಣಕ್ಕೆ ರಾಜ್ಯಪಾಲರು ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳದೆ ನಿರಾಕರಿಸಿದ್ದರು. ಶಾಮ್‍ಭಟ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದರೂ ಕೂಡ ಈಗ ಅವುಗಳೆಲ್ಲ ಬಗೆಹರಿದಿವೆ ಎಂದೇ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಠಕ್ಕೆ ಬಿದ್ದಂತೆ ಶಾಮ್‍ಭಟ್ ಅವರನ್ನು ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಗೋನಾಳ್ ಭೀಮಪ್ಪ ಅವರ ನಿರ್ಗಮನದ ನಂತರ ಕಳೆದ ನಾಲ್ಕೈದು ವರ್ಷಗಳಿಂದ ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನ ಖಾಲಿಯಾಗಿಯೇ ಉಳಿದಿತ್ತು. ಭ್ರಷ್ಟಾಚಾರ ನಿಯಂತ್ರಣವಾಗಬೇಕಾದರೆ ಇಂತಹ ಪ್ರಮುಖ ಹುದ್ದೆಗಳಿಗೆ ಮಾಡುವ ನೇಮಕಾತಿ ಪಾರದರ್ಶಕವಾಗಿರಬೇಕು. ಸರ್ಕಾರಿ ಉದ್ಯೋಗದಲ್ಲಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ನೇಮಕವಾಗಬಾರದು. ಭ್ರಷ್ಟಾಚಾರ ರಹಿತ ವ್ಯಕ್ತಿಗಳನ್ನು ನೇಮಕಾತಿ ಮಾಡಿದರೆ ಭ್ರಷ್ಟಾಚಾರ ನಿಯಂತ್ರಣ ಸುಲಭವಾಗುತ್ತದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು.   ಹಾಗಾಗಿ ಈ ಸ್ಥಾನಕ್ಕೆ ವಿವಾದಾತೀತ ವ್ಯಕ್ತಿಯೊಬ್ಬರು ಆಯ್ಕೆಯಾಗಿ ಬರುತ್ತಾರೆಂಬ ವಿಶ್ವಾಸ ಇದುವರೆಗೆ ಇತ್ತು. ಆದರೆ, ಸರ್ಕಾರದ ಇಂದಿನ ಈ ಕ್ರಮ ಹೊಸ ಚರ್ಚೆಗೆ ನಾಂದಿ ಹಾಡಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin