ಕೆರೆಗಳಿಗೆ ನೀರು ಹರಿಸಲು ಬದ್ಧ : ಶಾಸಕ ಸುರೇಶ್‍ಬಾಬು

ಈ ಸುದ್ದಿಯನ್ನು ಶೇರ್ ಮಾಡಿ

mla--cb-suresh--babu

ಚಿಕ್ಕನಾಯಕನಹಳ್ಳಿ, ಸೆ.10– ಹೇಮಾವತಿ ನೀರು ತಾಲೂಕಿಗೆ ಹರಿದರೆ ಹೊಟ್ಟೆ ಕಿಚ್ಚುಪಟ್ಟುಕೊಳ್ಳುವುದು ಬೇಡ. ನನಗೇನು ಹೆಸರು ಬೇಕಾಗಿಲ್ಲ, ಇಲ್ಲಿನ ಜನರಿಗೆ ಅನುಕೂಲವಾದರೆ ಸಾಕು, ಈ ಬಗ್ಗೆ ಭೂಮಿ ಬಿಟ್ಟುಕೊಡಬೇಕಾದ ರೈತರ ಸಭೆಯನ್ನು ಮಠಾಧೀಶರ ಸಮ್ಮುಖದಲ್ಲೇ ನಡೆಸಲು ಸಿದ್ಧ. ರೈತ ಮುಖಂಡರು ಸಭೆಯನ್ನು ಇನ್ನೆರಡು ದಿನಗಳಲ್ಲಿಯೇ ಏರ್ಪಡಿಸಿ ಎಂದು ಶಾಸಕ ಸಿ.ಬಿ.ಸುರೇಶ್‍ಬಾಬು ಹೇಳಿದರು. ಪಟ್ಟಣದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿಗೆ ಹೇಮಾವತಿ ನೀರಾವರಿ ಯೋಜನೆ ವಿಳಂಬಗೊಳ್ಳಲು ಕೆಲವು ರಾಜಕಾರಣಿಗಳು ಕಾರಣವಾಗಿದ್ದಾರೆ. ನೀರು ಹರಿದರೆ ನನ್ನ ಮನೆಗೇನು ತೆಗೆದುಕೊಂಡು ಹೋಗುವುದಿಲ್ಲ.

 

ಇಂತಹವರ ಕಾಲದಲ್ಲೇ ಕಾಮಗಾರಿ ಪೂರ್ಣಗೊಂಡಿತು ಎಂಬ ಹೆಸರು ಬರಬಾರದೆಂಬ ಹೊಟ್ಟೆಕಿಚ್ಚಿನಿಂದ ತಡೆಯುತ್ತಿದ್ದಾರೆ. ಭೂಮಿ ಬಿಟ್ಟುಕೊಟ್ಟ ರೈತರಿಗೆ ಹಣ ಕೊಡಿಸುವುದು ನಮ್ಮ ಜವಾಬ್ದಾರಿ. ಇದಕ್ಕೆ ಸಚಿವರು, ಸಂಸದರು ಎಲ್ಲರೂ ಬದ್ಧರಾಗಿದ್ದಾರೆ ಎಂದರು.ತಾಲೂಕಿಗೆ ಹರಿಯುವ ಹೇಮಾವತಿ ನೀರಿನ ಯೋಜನೆಯು 2003ರಲ್ಲಿ ಆರಂಭಗೊಂಡಿತು. ಅಂದಿನಿಂದಲೂ ಇಂದಿನವರೆಗೆ ನೀರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಜಮೀನು ಬಿಟ್ಟುಕೊಟ್ಟವರಿಗೆ ಗೋಪಾಲನಹಳ್ಳಿಯಲ್ಲಿ ಸಭೆ ನಡೆಸಿ 3 ಕೋಟಿ ಹಣ ನೀಡಲಾಗಿದೆ. ರೈತರ ಸಮ್ಮುಖದಲ್ಲೇ 9 ಕೋಟಿ ಹಣ ನೀಡಲಾಗಿದೆ ಎಂದರು.
ಜಮೀನು ಬಿಟ್ಟುಕೊಟ್ಟು ಕೆಲಸ ಮಾಡಲು ಅನುವು ಮಾಡಿಕೊಟ್ಟರೆ ಕಂಟ್ರಾಕ್ಟರ್‍ಗಳನ್ನು 24 ಗಂಟೆಯೂ ಸಂಪರ್ಕದಲ್ಲಿಟ್ಟುಕೊಂಡು ಎರಡು ತಿಂಗಳೊಳಗೆ ಸಾಸಲು ಭಾಗದ ಕೆರೆಗಳಿಗೆ ನೀರು ಹರಿಸಬಹುದು. ಇದಕ್ಕೆ ಎಲ್ಲಾ ಸಂಘ-ಸಂಸ್ಥೆಗಳು, ಮಠಾಧೀಶರು, ರಾಜಕಾರಣಿಗಳು ಒಟ್ಟಾಗಿ ಸೇರಿಕೊಂಡು ರೈತರ ಮನವೊಲಿಸೋಣ. ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರ ಕೊಡಿಸುವುದು ನಮ್ಮ ಜವಬ್ದಾರಿ ಎಂದು ಭರವಸೆ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin