ಕೆರೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

malavalli-6

ಮಳವಳ್ಳಿ, ಆ.17- ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆಗಳ ಹೂಳೆತ್ತಿ ಅಭಿವೃದ್ದಿಪಡಿಸುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಡಾ.ಕೆ. ಅನ್ನದಾನಿ ಈ ಕುರಿತು ಎಸಿಬಿಗೆ ದಾಖಲೆ ಸಮೇತ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಯಲ್ಲಿ ತುಂಬಿದ್ದ ಹೂಳೆತ್ತುವುದಾಗಿ ಹೇಳಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಣ್ಣು ತೆಗೆದು ಬಹುತೇಕ ಉಳಿದ ಎಲ್ಲಾ ಕಡೆ ಹಾಗಿಯೇ ಬಿಟ್ಟಿದ್ದು ಹೂಳು ತೆಗೆದಿರುವ ಜಾಗದಲ್ಲಿ ಜಂಡು ಹಾಗೂ ಹುಲು ಹಾಗಿಯೇ ಇರುವುದು ಈ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಮಳವಳ್ಳಿ ಹಾಗೂ ಮಾರೇಹಳ್ಳಿ ಕೆರೆಗಳು ತಾಲ್ಲೂಕಿನ ಜೀವನಾಡಿಗಳಾಗಿದ್ದು ಮಳವಳ್ಳಿ ಕೆರೆ ಅಭಿವೃದ್ಧಿಗೆ 4.95 ಕೋಟಿ ಹಾಗೂ ಮಾರೇಹಳ್ಳಿ ಕೆರೆ ಅಭಿವೃದ್ಧಿಗೆ  3.37 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ. ಕೆರೆ ಅಭಿವೃದ್ದಿ ನೆಪದಲ್ಲಿ ಒಂದು ವರ್ಷದಿಂದಲೂ ಕೆರೆಯ ನೀರನ್ನು ಬಸಿದು ಒಣಗಿಸಲಾಗಿದೆ. ಆದರೆ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದ್ದು ಆಗೊಮ್ಮೆ ಈಗೊಮ್ಮೆ ಒಂದೆರಡು ಜೆಸಿಬಿಗಳನ್ನು ಟಿಪ್ಪರ್‍ಗಳನ್ನು ತಂದು ಹೂಳೆತ್ತುವ ಕಾರ್ಯ ಮಾಡುವ ಮೂಲಕ ಕಾಲಹರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಜೂನ್ ಹೊತ್ತಿಗೆ ಕಾಮಗಾರಿ ಮುಗಿಸಿ ಕೆರೆಗೆ ನೀರು ಬಿಡಬೇಕಾಗಿತ್ತು ಆದರೆ ಈ ವರೆವಿಗೂ ಕೆಲಸ ಮುಗಿಸದೆ ಆಮೆಗತಿಯಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕೆಲಸ ನಿರ್ವಹಿಸುತ್ತ ಕಾಲಹರಣ ಮಾಡುತ್ತಿದ್ದು , ಹಣವನ್ನು ಲೂಟಿ ಮಾಡುವ ಷಡ್ಯಂತ್ರವನ್ನು ಈ ಕ್ಷೇತ್ರದ ಜನಪ್ರತಿನಿಧಿಗಳು ನಡೆಸಿದ್ದಾರೆ ಎಂದು ದೂರಿದರು. ಶೀಘ್ರ ಕಾಮಗಾರಿ ಮುಗಿಸಿ ಕೆರೆಗೆ ಯಾವಾಗ ನೀರು ಬಿಡಲಾಗುತ್ತದೆ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಹಾಗೂ ರೈತರು ಬೆಳೆ ಬೆಳೆಯಲ್ಲಿ ಇದೇ ನೀರನ್ನು ಅವಲಂಭಿಸಿದ್ದಾರೆ ಎಂಬುದನ್ನು ಮರೆಯದಿರುವಂತೆ ಆಗ್ರಹಿಸಿದರು. ಜಿಪಂ ಸದಸ್ಯ ರವಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಯುವ ಜೆಡಿಎಸ್ ಅಧ್ಯಕ್ಷ ಟಿ ನಂದಕುಮಾರ್, ಪುರಸಭಾ ಸದಸ್ಯ ಮೆಹಬೂಬ್ ಪಾಷಾ, ರಾಜಣ್ಣ ಮುಖಂಡರಾದ ನಾರಾಯಣ, ಆನಂದ್ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin