ಕೆರೆಗಳ ಡಿ ನೋಟಿಫಿಕೇಷನ್ ಮಾಡುವ ಪ್ರಸ್ತಾಪ ಸಚಿವ ಸಂಪುಟದ ಮುಂದಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ತುಮಕೂರು, ಆ.19-ಕೆರೆಗಳ ಡಿ ನೋಟಿಫಿಕೇಷನ್ ಮಾಡುವ ಪ್ರಸ್ತಾಪ ಸಚಿವ ಸಂಪುಟದ ಮುಂದಿಲ್ಲ. ನಮಗೂ ಪರಿಸರದ ಅರಿವಿದೆ. ರಾಜ್ಯಪಾಲರಿಗೆ ಮಾಹಿತಿ ಕೊರತೆ ಇದೆ, ಹಾಗಾಗಿ ಈ ವ್ಯತ್ಯಾಸವಾಗಿರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ನಗರದಲ್ಲಿ ಇಂದು ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೆರೆಗಳ ಡಿ ನೋಟಿಫಿಕೇಷನ್ ಸಂಬಂಧಿಸಿದಂತೆ ರಾಜ್ಯಪಾಲ ವಜೂಭಾಯಿ ವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರಿಗೆ ಸೂಕ್ತ ಮಾಹಿತಿ ದೊರೆಯದಿರಬಹುದು. ಹಾಗಾಗಿ ಈ ರೀತಿ ಹೇಳಿದ್ದಾರೆ. ಅವರ ಪತ್ರಕ್ಕೆ ಒಂದು ವಾರದಲ್ಲಿ ಉತ್ತರ ನೀಡಲು ಕಾಲಾವಕಾಶ ನೀಡಿದ್ದಾರೆ. ಅಷ್ಟರಲ್ಲಿ ಮಾಹಿತಿ ಒದಗಿಸುವುದಾಗಿ ಹೇಳಿದರು.

ಸಚಿವರಾದ ರಮೇಶ್ ಜಾರಕಿ ಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆಗೆ ಬಿಜೆಪಿಯವರು ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ಅವರ ಆರೋಪ ಸಾಬೀತಾಗಿದೆಯೇ? ಐಟಿಯವರು ವರದಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ರಾಜ್ಯಕ್ಕೆ ಅಮಿತ್ ಷಾ ಬಂದು ಬಿಜೆಪಿಯವರ ಕಿವಿ ಹಿಂಡಿದ್ದಾರೆ. ಈಗ ಅವರಿಗೆ ಎಚ್ಚರಿಕೆಯಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದರು.

ನಾವು ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಎಸಿಬಿಯವರು ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಬಿಎಸ್‍ವೈ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ನಮ್ಮ ರಾಜೀನಾಮೆ ಕೇಳುತ್ತಿರುವ ಅವರಿಗೆ ಕಾಮನ್‍ಸೆನ್ಸ್ ಇಲ್ಲವೇ ಎಂದ ಅವರು, ಅಂಥವರ ಬಗ್ಗೆ ಮಾತನಾಡುವ ಅಥವಾ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದರು.

ಬಡವರಿಗಾಗಿ ತೆರೆದಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಕಳಪೆ ಆಹಾರ ವಿತರಣೆಯಾಗುತ್ತಿದೆ, ಕಡಿಮೆ ಜನಕ್ಕೆ ಉಪಯೋಗವಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸ್ವತಃ ನಾನೇ ಹೋಗಿ ಊಟ ಮಾಡಿದ್ದೇನೆ. ಎಲ್ಲಿಯೂ ಹಾಗಾಗಿಲ್ಲ. ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆರಂಭದಲ್ಲಿ ದೋಷವಾಗಿರುವುದು ಬಿಟ್ಟರೆ ಇನ್ಯಾವುದೇ ತೊಂದರೆ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದರು.  ನಂತರ ನಗರದ ವಿವಿಧೆಡೆ ಆಯೋಜಿಸಿದ್ದ 73 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

Facebook Comments

Sri Raghav

Admin