ಕೆರೆ-ರಾಜಕಾಲುವೆಗಳ ಸಮೀಪ ಮನೆ ಕಟ್ಟಿಕೊಂಡು ಆತಂಕದಲ್ಲಿದ್ದವರಿಗೆ ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.5- ಕೆರೆ ಮತ್ತು ಪ್ರಮುಖ ರಾಜಕಾಲುವೆಗಳ ಸಮೀಪ ಮನೆಕಟ್ಟಿಕೊಂಡು ಸಂಕಷ್ಟಕ್ಕೀಡಾಗಿದ್ದ ನಗರದ ನಾಗರಿಕರಿಗೆ ಸುಪ್ರೀಂಕೋರ್ಟ್ ಸಿಹಿ ಸುದ್ದಿ ನೀಡಿದೆ. ಕೆರೆ, ರಾಜಕಾಲುವೆ ಸಮೀಪ ಬಫರ್‍ಝೋನ್ ಒತ್ತುವರಿ ವಿಚಾರ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ರಾಜ್ಯ ಸರ್ಕಾರದ ವಾದವನ್ನು ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಸಕ್ರಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದು ಸರ್ಕಾರದ ವಾದವನ್ನು ಈ ಪೀಠ ಎತ್ತಿಹಿಡಿದಿದ್ದು, ಕೆರೆಗಳಿಗೆ 75 ಮೀಟರ್ ಬಫರ್‍ಝೋನ್ ನಿಗದಿ ಪಡಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶವನ್ನು ರದ್ದುಪಡಿಸಿದೆ. ಸರ್ಕಾರದ ಹಳೆ ನಿಯಮದಂತೆ ಕೆರೆಗಳಿಗೆ ಬಫರ್‍ಝೋನ್ ನಿಗದಿ ಮಾಡಿದೆ. ಪ್ರೈಮರಿ ರಾಜಕಾಲುವೆಗೆ 50 ಮೀಟರ್ ಯಥಾಸ್ಥಿತಿ ಮುಂದುವರಿಕೆಯಾಗಲಿದೆ.

ಎನ್‍ಜಿಟಿ ಆದೇಶವನ್ನು ಪ್ರಶ್ನೆ ಮಾಡಿ ರಾಜ್ಯ ಸರ್ಕಾರ ಮತ್ತು ಬಿಲ್ಡರ್‍ಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 75 ಮೀಟರ್ ಕೆರೆ ಬಫರ್‍ಝೋನ್ ನಿಗದಿ ಸಾಧ್ಯವಿಲ್ಲ. 75 ಮೀಟರ್ ಅಳತೆಯಲ್ಲಿ ಈಗಾಗಲೇ ಕಟ್ಟಡಗಳು ನಿರ್ಮಾಣವಾಗಿಬಿಟ್ಟಿವೆ. ಹಸಿರು ನ್ಯಾಯಪೀಠದ ಆದೇಶವನ್ನು ಪಾಲನೆ ಮಾಡುವುದು ಕಷ್ಟ ಹಾಗೊಂದು ವೇಳೆ ಪಾಲನೆ ಮಾಡಬೇಕಾದರೆ ಅರ್ಧ ಬೆಂಗಳೂರನ್ನೇ ಒಡೆದು ಹಾಕಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ವಾದ ಮಂಡಿಸಿತ್ತು.

ರಾಜ್ಯ ಸರ್ಕಾರದ ವಾದವನ್ನು ಎತ್ತಿಹಿಡಿದಿರುವ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ, ಯಥಾಸ್ಥಿತಿ ಕಾಯ್ದಿರಿಸುವಂತೆ ಸೂಚಿಸಿದೆ. ಎನ್‍ಜಿಟಿಯು ಕೆರೆ ಸುತ್ತಲಿನ ಪ್ರದೇಶವನ್ನು ಬಫರ್‍ಝೋನ್ ಎಂದು ಘೋಷಿಸುವಂತೆ ಹೇಳಿತ್ತು. ಅಲ್ಲದೆ, ಕೆರೆಯಿಂದ 75 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದಂತೆಯೂ ಸೂಚನೆ ನೀಡಿತ್ತು.

ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂಕೋರ್ಟ್ ಆದೇಶದಿಂದ ಕೆರೆ ಮತ್ತು ರಾಜಕಾಲುವೆ ಸುತ್ತಮುತ್ತ ಮನೆಕಟ್ಟಿಕೊಂಡಿರುವ ಜನರು ನಿಟ್ಟುಸಿರು ಬಿಡುವಂತಾಗಿದೆ.

Facebook Comments

Sri Raghav

Admin