ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ : ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

SSLC-Result--01

ಬೆಂಗಳೂರು,ಮೇ7-ವಿದ್ಯಾರ್ಥಿ ಜೀವನದ ಭವಿಷ್ಯವನ್ನು ತೀರ್ಮಾನಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು , ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ಫಲಿತಾಂಶದಲ್ಲಿ ಶೇ.4.06 ಏರಿಕೆಯಾಗಿದೆ. ಜಿಲ್ಲಾವಾರಿನಲ್ಲಿ ಉಡುಪಿ(ಶೇ.88.19) ಪ್ರಥಮ ಸ್ಥಾನ ಪಡೆದರೆ, ಉತ್ತರ ಕನ್ನಡ (ಶೇ.88.12) ದ್ವಿತೀಯ ಸ್ಥಾನ ಹಾಗೂ ಚಿಕ್ಕೋಡಿ (ಶೇ.87.01) ತೃತೀಯ ಸ್ಥಾನ ಪಡೆದರೆ, ಯಾದಗಿರಿ(ಶೇ.33.54) ಕೊನೆಯ ಸ್ಥಾನ ಪಡೆದಿದೆ.

ಈ ಬಾರಿ ಬೆಂಗಳೂರಿನ ಹೋಲಿ ಚೈಲ್ಡ್ ಶಾಲೆಯ ವಿದ್ಯಾರ್ಥಿ ಕೆ.ಎಸ್.ಸುಧಾಕರ್ ಹಾಗೂ ಮೈಸೂರಿನ ಸದ್ವಿದ್ಯಾ ಶಾಲೆಯ ಯಶಸ್ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು 624 ಅಂಕ ಪಡೆದರೆ, 623 ಅಂಕಗಳನ್ನು 11 ವಿದ್ಯಾರ್ಥಿಗಳು, 622- 22 ವಿದ್ಯಾರ್ಥಿಗಳು, 621-35 ವಿದ್ಯಾರ್ಥಿಗಳು ಹಾಗೂ 620 ಅಂಕಗಳನ್ನು 39 ವಿದ್ಯಾರ್ಥಿಗಳು ಪಡೆದಿದ್ದಾರೆ.

ಈ ಬಾರಿ ಪರೀಕ್ಷೆಗೆ ಒಟ್ಟು 838088 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 602802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಿಂದ 285594 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ, 214545 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳ 208227 ವಿದ್ಯಾರ್ಥಿಗಳ ಪೈಕಿ 158819 ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ 250650 ವಿದ್ಯಾರ್ಥಿಗಳ ಪೈಕಿ 208154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಪೈಕಿ 445402 ಪರೀಕ್ಷೆಗೆ ಹಾಜರಾಗಿದ್ದರೆ ಇದರಲ್ಲಿ 296475(ಶೇ. 66.56)ಬಾಲಕರು ತೇರ್ಗಡೆಯಾಗಿದ್ದಾರೆ. 392686 ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಪೈಕಿ 306327(ಶೇ. 78.01) ಉತ್ತೀರ್ಣರಾಗಿದ್ದಾರೆ.

SSLC-Result

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಶೇಕಡವಾರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಿಂದ 376191 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 260998(ಶೇ.69.38) ಪಾಸಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ ಒಟ್ಟು 461897 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ,ಇದರಲ್ಲಿ 341804 (ಶೇ.74) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೂನ್ಯ ಸಾಧನೆ:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆರು ಸರ್ಕಾರಿ ಶಾಲೆಗಳು ಶೂನ್ಯ ಸಾಧನೆ ಮಾಡಿದ್ದರೆ, 102 ಶಾಲೆಗಳು ಶೇ.100ಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿವೆ. ಅನುದಾನಿತ ಶಾಲೆ ಪೈಕಿ ಎರಡು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದರೆ, 414 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ. ಅನುದಾನ ರಹಿತ ಶಾಲೆಗಳ ಪೈಕಿ 35 ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದರೆ 826 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ. ಒಟ್ಟಾರೆ ಈ ಬಾರಿ 43 ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದರೆ 1342 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ.

 

Facebook Comments

Sri Raghav

Admin