ಕೆಲವೇ ವರ್ಷಗಳಲ್ಲಿ ಉದ್ಯಾನನಗರಿ ಎಂಬ ಪಟ್ಟ ಕಳೆದುಕೊಳ್ಳಲಿದೆ ಬೆಂಗಳೂರು..!

ಈ ಸುದ್ದಿಯನ್ನು ಶೇರ್ ಮಾಡಿ

Bangaluru--01

ಬೆಂಗಳೂರು, ಡಿ.12-ನಗರದಲ್ಲಿ ವಾಸ್ತು ಮತ್ತು ವಾಣಿಜ್ಯ ಚಟುವಟಿಕೆ ಹೆಸರಿನಲ್ಲಿ ಮರಗಳ ಮಾರಣ ಹೋಮ ನಿರಂತರವಾಗಿ ನಡೆಯುತ್ತಿದೆ. ಒಂದು ಕಾಲದಲ್ಲಿ ಉದ್ಯಾನನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರದಲ್ಲಿ ಬಿಬಿಎಂಪಿಯವರು ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕಿದ್ದಾರೆ. ಹಾಗಾಗಿ ಬೆರಳೆಣಿಕೆಯಷ್ಟು ಮರಗಳು ಉಳಿದಿವೆ. ಹೀಗೆ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಉದ್ಯಾನನಗರಿ ಎಂಬ ಪಟ್ಟವನ್ನು ಬೆಂಗಳೂರು ಕಳೆದುಕೊಳ್ಳಲಿದೆ.

ಪ್ರತಿವರ್ಷ ವನಮಹೋತ್ಸವ ಮಾಡ್ತೀವಿ, 3 ಲಕ್ಷ ಸಸಿ ನೆಡುವುದಾಗಿ ಹೇಳಿ ಬಿಬಿಎಂಪಿ ಬುರುಡೆ ಬಿಟ್ಟಿದೆ. ಇದುವರೆಗೆ ಎಲ್ಲೂ ಸರಿಯಾಗಿ ಇದನ್ನು ಪಾಲಿಸಿಲ್ಲ. ಎಲ್ಲೋ ಒಂದೆರಡು ಕಡೆ ಗಿಡಗಳನ್ನು ನೆಡಲಾಗಿದೆ. ಇರುವ ಗಿಡ, ಮರ ಉಳಿಸುವ ಜವಾಬ್ದಾರಿ ಕೂಡಾ ಪಾಲಿಕೆಗೆ ಇಲ್ಲ. ಚೆನ್ನಾಗಿರುವ ಮರಗಳನ್ನು ಆಸಿಡ್ ಹಾಕಿ ತೆರವುಗೊಳಿಸುತ್ತಿರುವುದು ನಾಗರಿಕರನ್ನು ಕೆರಳುವಂತೆ ಮಾಡಿದೆ.

Bangaluru--03

ಇತ್ತೀಚೆಗೆ ಸರ್ಜಾಪುರದಲ್ಲಿ ಜಾಹೀರಾತು ಫಲಕಗಳು ವಾಹನ ಸವಾರರಿಗೆ ಕಾಣಿಸುತ್ತಿಲ್ಲ ಎಂಬ ನೆಪದಲ್ಲಿ ನೂರಾರು ಮರಗಳ ಮಾರಣಹೋಮ ಮಾಡಲಾಗಿತ್ತು. ಇದೇ ಕತೆ ನಗರದ ಎಂಟು ವಲಯದಲ್ಲೂ ನಡೆದಿದೆ. ಈಗ ವಾಸ್ತು ಮತ್ತು ವಾಣಿಜ್ಯ ಚಟುವಟಿಕೆ ಹಿನ್ನೆಲೆಯಲ್ಲಿ ಕಟ್ಟಡ ಚೆನ್ನಾಗಿ ಕಾಣಲಿ ಎಂಬ ಉದ್ದೇಶದಿಂದ ಆರ್.ಆರ್.ನಗರದಲ್ಲಿ ಮರಗಳನ್ನು ಕಡಿಯಲಾಗಿದೆ. ನಿನ್ನೆ ರಾತ್ರಿ ಆರ್.ಆರ್.ನಗರ ವಾರ್ಡ್‍ನ ಬಿಇಎಂಎಲ್ ಲೇಔಟ್‍ನ 4ನೆ ಹಂತದ ಜವಾಹರಲಾಲ್ ನೆಹರು ಮುಖ್ಯರಸ್ತೆಯಲ್ಲಿ ಭಾರೀ ಗಾತ್ರದ ಎರಡು ಮರಗಳಿಗೆ ಆಸಿಡ್ ಹಾಕಿ ಕಡಿದು ಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ಮರಗಳ ಮಾರಣ ಹೋಮ ನಿಲ್ಲಿಸಬೇಕೆಂದು ಆಗ್ರಹಿಸಿ ನಾಗರಿಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಅರಣ್ಯ ಮತ್ತು ವನ್ಯಜೀವಿ ಹೋರಾಟಗಾರ ಜೋಸೆಫ್ ಹೂವರ್ ಮರಗಳ ಮಾರಣ ಹೋಮ ವಿರೋಧಿಸಿ ಹೋರಾಟ ಪ್ರಾರಂಭಿಸಿದ್ದಾರೆ. ಅಲ್ಲದೆ ಬಿಬಿಎಂಪಿ ವಿರುದ್ಧ ನ್ಯಾಯಾಲಯದಲ್ಲಿ 10ಕ್ಕೂ ಹೆಚ್ಚು ಮೊಕದ್ದಮೆ ಕೂಡ ದಾಖಲಿಸಿದ್ದಾರೆ. ಆದರೆ ಇದಕ್ಕೆ ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಕವಡೆ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ.
ಆರ್.ಆರ್.ನಗರ ವಾರ್ಡ್‍ನಲ್ಲಿ ಮರಗಳ ಮಾರಣಹೋಮ ಕುರಿತು ಆರ್‍ಎಫ್‍ಒ ಭಾನುಪ್ರಕಾಶ್ ಉಡಾಫೆ ಉತ್ತರ ನೀಡಿದ್ದಾರೆ. ನಿನ್ನೆ ರಾತ್ರಿ ಕಡಿದಿರುವ ಮರ ಒಣಗಿ ಹೋಗಿದ್ದು, ಅದರ ರೆಂಬೆಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು ಎಂದು ಸಾರ್ವಜನಿಕರು ಅರ್ಜಿ ಹಾಕಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

ಚೆನ್ನಾಗಿರುವ ಮರವನ್ನು ಆಸಿಡ್ ಹಾಕಿ ಕಡಿದಿದ್ದೀರಲ್ಲ ಎಂದು ಪ್ರಶ್ನಿಸಿದ್ದಕ್ಕೆ ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂಬ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ. ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕಿದೆ. ಹೊಸ ಸಸಿಗಳನ್ನು ನೆಡದಿದ್ದರೂ ಉಳಿದಿರುವ ಮರಗಳನ್ನಾದರೂ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಹಾಕಲಿ ಎಂಬುದು ನಗರದ ನಾಗರಿಕರ ಮತ್ತು ಪರಿಸರಪ್ರೇಮಿಗಳ ಒತ್ತಾಯವಾಗಿದೆ.

Facebook Comments

Sri Raghav

Admin