ಕೆ.ಆರ್.ಮಾರುಕಟ್ಟೆ ಮಾರ್ಕೆಟ್ ಸುತ್ತ ಪೇ ಅಂಡ್ ಪಾರ್ಕ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Pay-And-Park--001

ಬೆಂಗಳೂರು, ಏ.15- ನಗರದ ಕೆ.ಆರ್.ಮಾರುಕಟ್ಟೆ ಒಳ ಮತ್ತು ಹೊರಭಾಗದಲ್ಲಿ ಶೀಘ್ರದಲ್ಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮೇಯರ್ ಪದ್ಮಾವತಿ ಇಂದಿಲ್ಲಿ ತಿಳಿಸಿದರು.  ಪ್ರತಿ ಶನಿವಾರದಂತೆ ಇಂದೂ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸುಗಮ ಸಂಚಾರ ಮತ್ತು ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.ಪೇ ಅಂಡ್ ಪಾರ್ಕ್ ಜಾರಿ ಕುರಿತಂತೆ ಟೆಂಡರ್ ಕರೆಯುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಣ ಪಾವತಿಸಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮೇಯರ್ ಹೇಳಿದರು. ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಕೂಡಲೇ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಸೂಚನೆ ನೀಡಿದ್ದೆ. ಆದರೂ ಅಧಿಕಾರಿಗಳು ಅದನ್ನು ಜಾರಿಗೆ ತರದಿರುವ ಹಿನ್ನೆಲೆಯಲ್ಲಿ ಅವರಿಗೆ ಬಿಸಿ ಮುಟ್ಟಿಸಲಾಗಿದೆ.

ಕೂಡಲೇ ಮೈಸೂರು ರಸ್ತೆ ಅಥವಾ ಬಿನ್ನಿಮಿಲ್ ಸಮೀಪವಿರುವ ಖಾಲಿ ಪ್ರದೇಶಕ್ಕೆ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸ್ಥಳಾಂತರಿಸುವಂತೆ ಸೂಚಿಸಿದ್ದೇನೆ. ಇಲ್ಲದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದೇನೆ ಎಂದು ಅವರು ವಿವರಿಸಿದರು.  ಒಟ್ಟಾರೆ ನನ್ನ ಅವಧಿಯಲ್ಲಿ ಕೆ.ಆರ್.ಮಾರುಕಟ್ಟೆಯ ಅವ್ಯವಸ್ಥೆಗಳಿಗೆ ಕೊನೆಗಾಣಿಸಿ ಸಾರ್ವಜನಿಕರು ಈ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ವಾತಾವರಣ ತಪ್ಪಿಸುವುದರ ಜೊತೆಗೆ ಸರಾಗವಾಗಿ ಓಡಾಡುವಂತಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin