ಕೆ.ಆರ್.ಮಾರುಕಟ್ಟೆ ಸ್ವಚ್ಛತೆ ಕಾಪಾಡದ ಅಧಿಕಾರಿಗಳಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

KR-Marcket--01

ಬೆಂಗಳೂರು, ಸೆ.16- ನಗರದ ಕೆ.ಆರ್.ಮಾರುಕಟ್ಟೆ ಸ್ವಚ್ಛತೆಗೆ ಆದ್ಯತೆ ನೀಡದ ಇಬ್ಬರು ಅಧಿಕಾರಿಗಳಿಗೆ ಮೇಯರ್ ಜಿ.ಪದ್ಮಾವತಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರತೀ ಶನಿವಾರದಂತೆ ಇಂದು ಕೆ.ಆರ್.ಮಾರುಕಟ್ಟೆಗೆ ಮೇಯರ್ ಅವರು ಭೇಟಿ ನೀಡಿದಾಗ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಕೆಂಡಾಮಂಡಲರಾದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಆರೋಗ್ಯ ಪರಿವೀಕ್ಷಕ ಶಶಿಕುಮಾರ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಫಜಲ್ ಅವರಿಂದ ಮೇಯರ್ ಮಾಹಿತಿ ಕೇಳಿದರು.

ಈ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ತಬ್ಬಿಬ್ಬಾಗಿ ಉತ್ತರ ನೀಡಲು ತಡಬಡಾಯಿಸಿದ್ದರಿಂದ ಸ್ಥಳದಲ್ಲೇ ಇದ್ದ ಮೇಲಾಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಜಾರಿಮಾಡುವಂತೆ ಸೂಚಿಸಿದರು. ನಾನು ಮೇಯರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಪ್ಪದೇ ಪ್ರತಿ ಶನಿವಾರ ಮಾರುಕಟ್ಟೆಗೆ ಭೇಟಿ ನೀಡಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಆದರೂ ನೀವು ಎಚ್ಚೆತ್ತುಕೊಂಡಿಲ್ಲ. ಇದೇನಾ ನೀವು ಕೆಲಸ ಮಾಡುವ ರೀತಿ ಎಂದು ಅಧಿಕಾರಿಗಳ ಜನ್ಮ ಜಾಲಾಡಿದರು.

ಪ್ಲ್ಯಾಸ್ಟಿಕ್ ಬಳಕೆ ನಿರ್ಬಂಧ ಹಾಗೂ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸೀಜರ್‍ಗಳನ್ನು ನೇಮಕ ಮಾಡಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಕಸ ಕಂಡು ಬರುತ್ತಿದೆ. ಸೀಜರ್‍ಗಳು ಏನು ಮಾಡುತ್ತಿದ್ದಾರೆ ಎಂದು ಮೇಯರ್ ಪ್ರಶ್ನಿಸಿದರು. ಇದೇ ಕೊನೇ ಗಡುವು. ಮುಂದಿನ ವಾರ ನಾನು ಮಾರುಕಟ್ಟೆಗೆ ಬರುತ್ತೇನೆ. ಆಗಲೂ ಇಲ್ಲಿನ ಸ್ಥಿತಿ ಹೀಗೆ ಇದ್ದರೆ ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪದ್ಮಾವತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Facebook Comments

Sri Raghav

Admin