ಕೆ.ಎಲ್.ರಾಹುಲ್ ಶತಕದ ಸಂಭ್ರಮ : ರಾಜಸ್ಥಾನಕ್ಕೆ 524 ರನ್‍ಗಳ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

3
ವಿಜಿಯನಗರಂ, ನ. 15- ಒಂದು ವರ್ಷದ ನಂತರ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡ ಕೆ.ಎಲ್.ರಾಹುಲ್ ರ ಶತಕದ ನೆರವಿನಿಂದ ರಾಜಸ್ಥಾನಕ್ಕೆ 524 ರನ್‍ಗಳ ಗೆಲುವಿನ ಗುರಿಯನ್ನು ನೀಡಿದೆ.ಮೊದಲ ಇನ್ನಿಂಗ್ಸ್‍ನಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ರಾಹುಲ್ ದ್ವಿತೀಯ ಇನ್ನಿಂಗ್ಸ್‍ನಲ್ಲೂ ಬ್ಯಾಟಿಂಗ್ ವೈಭವವನ್ನು ಮೆರೆದು ಮೊದಲ ವಿಕೆಟ್‍ಗೆ ಆರ್.ಸಮರ್ಥ್‍ರೊಂದಿಗೆ 98 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ರಾಹುಲ್- ಸಮರ್ಥ್ ಆಕರ್ಷಕ ಆಟ:
ನಿನ್ನೆ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 78 ರನ್‍ಗಳನ್ನು ಗಳಿಸಿ ಎರಡನೆ ದಿನದ ಆಟವನ್ನು ಮುಂದುವರೆಸಿದ ಆರ್.ಸಮರ್ಥ್ ಹಾಗೂ ಲೋಕೇಶ್ ರಾಹುಲ್ ಆರಂಭದಿಂದಲೂ ರಾಜಸ್ಥಾನದ ಬೌಲಿಂಗ್ ಪಡೆಯನು ದಿಟ್ಟವಾಗಿ ಎದುರಿಸಿದರು.ಆದರೆ ಈ ನಡುವೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆರ್.ಸಮರ್ಥ್ 55 ರನ್‍ಗಳನ್ನು ಗಳಿಸಿದ್ದಾಗ ಪಂಕಜ್‍ಸಿಂಗ್ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ 98 ರನ್‍ಗಳ ಜೊತೆಯಾಟದ ಕೊಂಡಿಯನ್ನು ಕಳಚಿದರು.

 

ರಾಬಿನ್ ಮಿಂಚು: ಆರ್.ಸಮರ್ಥ್ ಔಟಾಗುತ್ತಿದ್ದಂತೆ ಟೂರ್ನಿಯಲ್ಲಿ ಬಹುತೇಕ ಕಳಪೆ ಪ್ರದರ್ಶನ ನೀಡಿದ್ದ ಸ್ಫೋಟಕ ಆಟಗಾರ ರಾಬಿನ್ ಉತ್ತಪ್ಪ 2ನೆ ವಿಕೆಟ್‍ಗೆ 86 ರನ್‍ಗಳ ಜೊತೆಯಾಟ ನೀಡಿದರು. ಅರ್ಧಶತಕ ಹೊಸ್ತಿಲಿನತ್ತ ದಾಪುಗಾಲಿಟ್ಟಿದ್ದ ಉತ್ತಮ(39 ರನ್, 53 ಎಸೆತ, 7 ಬೌಂಡರಿ, 1 ಸಿಕ್ಸರ್) ಡಿ.ಎಲ್.ಚಾಹಾರ್‍ಗೆ ವಿಕೆಟ್ ಒಪ್ಪಿಸಿದರು.ಉತ್ತಪ್ಪ ಔಟಾಗುತ್ತಿದ್ದಂತೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಜವಾಬ್ದಾರಿ ಹೊತ್ತ ರಾಹುಲ್ ಮಯಾಂಕ್ ಅಗರ್‍ವಾಲ್ ಜೊತೆಗೂಡಿ ಭೋಜನ ವಿರಾಮಕ್ಕೂ ಮುನ್ನ ಶತಕ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಆದರೆ ಶತಕ ಗಳಿಸಿದ ನಂತರ ತಾಳ್ಮೆಯ ಆಟಕ್ಕೆ ಮುಂದಾದ ಲೋಕೇಶ್ ರಾಹುಲ್ (106 ರನ್, 13 ಬೌಂಡರಿ, 4 ಸಿಕ್ಸರ್) ಡಿ.ಎಲ್.ಚಹಾರ್‍ರ ಬೌಲಿಂಗ್ ಗತಿಯನ್ನು ಅರಿಯದೆ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.
ಭೋಜನ ವಿರಾಮದ ವೇಳೆಗೆ ಕರ್ನಾಟಕ 3 ವಿಕೆಟ್‍ಗಳನ್ನು ಕಳೆದುಕೊಂಡು 246ರನ್‍ಗಳನ್ನು ಗಳಿಸಿತು.ಸ್ಫೋಟಕ ಆಟಕ್ಕೆ ಮುಂದಾದ ಮಯಾಂಕ್ ಅಗರ್‍ವಾಲ್ ಹಾಗೂ ಸ್ಟುವರ್ಟ್‍ಬಿನ್ನಿ 4 ವಿಕೆಟ್‍ಗೆ 50 ರನ್‍ಗಳ ಜೊತೆಯಾಟವನ್ನು ನೀಡಿದರು.ಈ ಜೋಡಿಯನ್ನು ಬೇರ್ಪಡಿಸಲು ರಾಜಸ್ತಾನ ನಾಯಕ ಪಂಕಜ್‍ಸಿಂಗ್ ಬಿಸ್‍ನೋಯ್ (ಜ್ಯೂ)ಯರ್ ಕೈಗೆ ಚೆಂಡನ್ನು ನೀಡಿದಾಗ ಸ್ಟುವರ್ಟ್ ಬಿನ್ನಿ ( 19 ರನ್, 2 ಬೌಂಡರಿ) ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಬಂದ ವಿಕೆಟ್ ಕೀಪರ್ ಗೌತಮ್ ಕೂಡ ಮರು ಎಸೆತದಲ್ಲೇ ಬಿಸ್ಟ್ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.ಮಯಾಂಕ್ ಅಗರ್‍ವಾಲ್ 63 ರನ್‍ಗಳಿಸಿ ಔಟಾಗುತ್ತಿದ್ದಂತೆ ನಾಯಕ ವಿನಯ್‍ಕುಮಾರ್ ಅವರು ಡಿಕ್ಲೇರ್ಡ್ ಘೋಷಿಸಿದರು. ಆಗ ಕರ್ನಾಟಕ ತಂಡವು 298 ರನ್ ಗಳಿಸಿದ್ದು ಒಟ್ಟಾರೆ ರಾಜಸ್ಥಾನಕ್ಕೆ 524 ರನ್‍ಗಳ ಗೆಲುವಿನ ಗುರಿಯನ್ನು ಮುಂದಿಟ್ಟಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin