ಕೆ.ಜಿ.ಬೋಪಯ್ಯ- ಅಪ್ಪಚ್ಚು ರಂಜನ್‍ಗೆ ಕೋಕ್..? ಕೊಡಗಿನಲ್ಲಿ ಹೊಸಬರಿಗೆ ಬಿಜೆಪಿ ಟಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

Appchu
ಬೆಂಗಳೂರು, ಮಾ19-ಕೆಲವು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿರುವ ಬಿಜೆಪಿ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಹಾಲಿ ಇಬ್ಬರೂ ಶಾಸಕರಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಆಲೋಚಿಸಿದೆ. ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಆತಂಕವನ್ನು ಆರ್‍ಎಸ್‍ಎಸ್ ವರಿಷ್ಠರು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರ್‍ಎಸ್‍ಎಸ್ ನಾಯಕರು ಈ ಎರಡು ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಸೂಚಿಸಿದ್ದು , ಇವರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದೆಂಬ ಅಭಿಪ್ರಾಯ ಸಂಘ ಪರಿವಾರದಿಂದ ವ್ಯಕ್ತವಾಗಿದೆ.
ಆರ್‍ಎಸ್‍ಎಸ್ ಪ್ರಕಾರ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಬಿ.ವಿ.ಭಾರತೀಶ್, ರವಿ ಕುಶಲಪ್ಪ , ಎಸ್.ಜಿ.ಮೇದಪ್ಪ ಹಾಗೂ ಎಸ್.ಜಿ.ದೀಪಕ್ ಅವರ ಹೆಸರುಗಳನ್ನು ಸೂಚಿಸಲಾಗಿದೆ. ಇದೇ ರೀತಿ ವಿರಾಜಪೇಟೆ ಕ್ಷೇತ್ರಕ್ಕೆ ಎಂ.ಎಂ.ರವೀಂದ್ರ, ರಾಬಿನ್ ದೇವಯ್ಯ, ರೀನಾ ಪ್ರಕಾಶ್ ಹಾಗೂ ಚಕ್ಕೇರ ಮನು ಕಾರ್ಯಪ್ಪ ಅವರುಗಳ ಹೆಸರುಗಳನ್ನು ಕೇಂದ್ರ ನಾಯಕರಿಗೆ ಶಿಫಾರಸು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರಣವೇನು:
ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‍ಗೆ ಸ್ಥಳೀಯವಾಗಿ ಸಾಕಷ್ಟು ಆಡಳಿತ ವಿರೋಧಿ ಅಲೆ ಇರುವುದೇ ಟಿಕೆಟ್ ಕೈ ತಪ್ಪಲು ಕಾರಣ ಎನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿ ಜೀವಿಜಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಮಡಿಕೇರಿಯಲ್ಲಿ ಅವರು ಸಾಕಷ್ಟು ಪಕ್ಷವನ್ನು ಸಂಘಟಿಸಿರುವುದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಒಕ್ಕಲಿಗ ಮತಗಳು ಜೀವಿಜಿಯಗೆ ಹೋದರೆ ಅಪ್ಪಚ್ಚು ರಂಜನ್ ಸೋಲು ಕಟ್ಟಿಟ್ಟ ಬುತ್ತಿ ಎಂಬ ಅಭಿಪ್ರಾಯವನ್ನು ವರಿಷ್ಠರಿಗೆ ಆರ್‍ಎಸ್‍ಎಸ್ ನೀಡಿದೆ.

ಅಲ್ಲದೆ ಅಪ್ಪಚ್ಚುರಂಜನ್ ಸ್ಥಳೀಯ ಕೆಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದು ಹಾಗೂ ಸ್ಥಳೀಯ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಹಿನ್ನೆಡೆ ಕಾರಣವೆಂದು ಬಿಜೆಪಿ ಚಿಂತಕರ ಚಾವಡಿ ಲೆಕ್ಕ ಹಾಕಿದೆ. ಹೀಗಾಗಿ ಈ ಬಾರಿ ಆರ್‍ಎಸ್ ಹಿನ್ನೆಲೆಯಿಂದ ಬಂದಿರುವ ಬಿ.ವಿ.ಭಾರತೀಶ್, ರವಿ ಕುಶಲಪ್ಪ , ಎಸ್.ಜಿ.ದೀಪಕ್ ಅವರಲ್ಲಿ ಯಾರಾದರೊಬ್ಬರಿಗೆ ಟಿಕೆಟ್ ನೀಡುವಂತೆ ಸಲಹೆ ಮಾಡಿದೆ ಎಂದು ತಿಳಿದುಬಂದಿದೆ.

ಇದೇ ರೀತಿ ವಿರಾಜಪೇಟೆಯಲ್ಲೂ ಕೆ.ಜಿ.ಬೋಪಯ್ಯಗೆ ಸಾಕಷ್ಟು ವಿರೋಧ ಇರುವುರಿಂದ ಟಿಕೆಟ್ ನೀಡಬಾರದೆಂಬ ಅಭಿಪ್ರಾಯ ಕೇಳಿಬಂದಿದೆ. ಕಾಂಗ್ರೆಸ್‍ನಿಂದ ಈ ಬಾರಿ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಬ್ರಿಜೇಶ್ ಕಾಳಪ್ಪ ಕಣಕ್ಕಿಳಿದರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಬಿಜೆಪಿಗೆ ಹಿನ್ನೆಡೆ ಉಂಟಾಗಬಹುದೆಂಬ ಅತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸಂಘ ಪರಿವಾರ ವಿರಾಜಪೇಟೆಗೆ ಆರ್‍ಎಸ್‍ಎಸ್ ಹುರಿಯಾಳುಗಳಾದ ಎಂ.ಎಂ.ರವೀಂದ್ರ, ರಾಬಿಂದ್ ದೇವಯ್ಯ, ರೀನಾ ಪ್ರಕಾಶ್ ಹಾಗೂ ಚೆಕ್ಕೇರ ಮನು ಕಾರ್ಯಪ್ಪ ಹೆಸರುಗಳು ಕೇಳಿ ಬರುತ್ತಿವೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಬಿ.ವಿ.ಭಾರತೀಶ್ ಹಾಗೂ ಎಂ.ಎಂ.ರವೀಂದ್ರ ಆಪ್ತರಾಗಿರುವ ಕಾರಣ ಇವರಿಬ್ಬರು ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತು.

Facebook Comments

Sri Raghav

Admin