ಕೇಂದ್ರ ಗೃಹ ಸಚಿವರಿಗೆ ಸಾಕ್ಷಿ ಸಮೇತ ಅನುಪಮಾ ಶೆಣೈ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ANUPAMA

ಬೆಂಗಳೂರು ಆ.17 : ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿ.ವೈ.ಎಸ್.ಪಿ.ಯಾಗಿದ್ದ ಅನುಪಮಾ ಶೆಣೈ, ಈಗಾಗಲೇ ರಾಜೀನಾಮೆ ನೀಡಿದ್ದು, ಸೇವೆಯಿಂದ ಬಿಡುಗಡೆ ಹೊಂದಿದ್ದಾರೆ. ಇದೀಗ ಅವರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.  ಪೊಲೀಸ್ ಇಲಾಖೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪೊಲೀಸ್ ಮಹಾ ನಿರ್ದೇಶಕರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದು, ಆಡಳಿತ ನಡೆಸಲು ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಅನುಪಮಾ ಶೆಣೈ ತಮ್ಮ ವರ್ಗಾವಣೆ ಸಂದರ್ಭದಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿರುವ ದೂರವಾಣಿ ಸಂಭಾಷಣೆಗಳನ್ನು ಬಹಿರಂಗಪಡಿಸಿದ್ದಾರೆ.  ಇದರಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಮೇಲೆ ಹಾಕಿರುವ ಒತ್ತಡದ ಬಗ್ಗೆ ಹಾಗೂ ಇಲಾಖೆಯ ಪರಿಸ್ಥಿತಿ ಬಗ್ಗೆ ಅನುಪಮಾ ಶೆಣೈ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಏನಿದು ವಿವಾದ?:
ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಮದ್ಯ ಮಾರಾಟ ದಂಧೆ ನಿಯಂತ್ರಣಕ್ಕೆ ಮುಂದಾದ ಆಗಿನ ಡಿವೈಎಸ್ಪಿ ಅನುಪಮಾ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ ನಾಯ್ಕ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌, ಈಶಾನ್ಯ ವಲಯ ಐಜಿಪಿ ಮುರುಗನ್‌ ಹಾಗೂ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ ಅಡ್ಡಿಪಡಿಸಿದ್ದರು ಎನ್ನಲಾಗಿದೆ. ಅಬಕಾರಿ ಲಾಬಿಗೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವರು, ಕೂಡ್ಲಿಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಬಂಧಿತರ ಬಿಡುಗಡೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಅನುಪಮಾ ವಿರುದ್ಧ ಪರಮೇಶ್ವರ ನಾಯ್ಕ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ಡಿಜಿಪಿ ಓಂಪ್ರಕಾಶ್‌, ಐಜಿಪಿ ಮುರುಗನ್‌ ಹಾಗೂ ಬಳ್ಳಾರಿ ಎಸ್ಪಿ ಚೇತನ್‌ ಅವರು ಅನುಪಮಾ ಮೇಲೆ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪ ಈ ಧ್ವನಿಮುದ್ರಿಕೆಯಲ್ಲಿದೆ. ಅಲ್ಲದೆ, ಕೂಡ್ಲಿಗಿಯಿಂದ ಇಂಡಿಗೆ ವರ್ಗಾವಣೆ ವಿಚಾರದ ಕುರಿತು ಅನುಪಮಾ ಜತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ನಡೆಸಿರುವ ಸಂಭಾಷಣೆಯೂ ಬಹಿರಂಗವಾಗಿದೆ. ತನಗೆ ಇಲಾಖೆಯಲ್ಲಿ ಉಂಟಾದ ತೊಂದರೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಅನುಪಮಾ ದೂರು ನೀಡಿದ್ದಾರೆ. ಇದರಲ್ಲಿ ಡಿಜಿಪಿ ಓಂಪ್ರಕಾಶ್‌, ಮಾಜಿ ಸಚಿವ ಪರಮೇಶ್ವರ ನಾಯ್ಕ ಇತರರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಾಜಕೀಯ ಹಾಗೂ ಅಬಕಾರಿ ಲಾಬಿ ವರ್ತುಲದೊಳಗೆ ಸಿಲುಕಿ ತಾನು ಮುಕ್ತ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಹುದ್ದೆಗೆ ಜೂ. 5ರಂದು ಅನುಪಮಾ ಅವರು ರಾಜೀನಾಮೆ ಸಲ್ಲಿಸಿದ್ದರು. ಈ ರಾಜೀನಾಮೆಯನ್ನು ಜೂ.10ರಂದು ಸರಕಾರ ಅಂಗೀಕರಿಸಿತ್ತು. ಈ ನಡುವೆ ಫೇಸ್‌ಬುಕ್‌ನಲ್ಲಿ ಅನುಪಮಾ ಹೆಸರಿನ ಖಾತೆಯಲ್ಲಿ ಮಾಜಿ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ ಹಾಗೂ ಸರಕಾರದ ವಿರುದ್ಧ ಸ್ಟೇಟಸ್‌ ವಾರ್‌ ನಡೆಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin