ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

anil-dave
ನವದೆಹಲಿ, ಮೇ 18-ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪರಿಸರ ಖಾತೆ ರಾಜ್ಯ ಸಚಿವರಾಗಿದ್ದ ಅನಿಲ್ ಮಾಧವ್ ದವೆ ಇಂದು ಮುಂಜಾನೆ ನಿಧನರಾಗಿದ್ದಾರೆ ಅವರಿಗೆ 60 ವರ್ಷ ವಯಸ್ಸಾಗಿತ್ತು.   ಮೋದಿ ಅವರೊಂದಿಗೆ ನಿನ್ನೆ ತಡ ರಾತ್ರಿಯವರೆಗೂ ಪ್ರಮುಖ ರಾಜಕೀಯ ವಿಷಯಗಳ ಕುರಿತು ಚರ್ಚಿಸಿದ್ದ ದವೆ ಇಂದು ನಸುಕಿನಲ್ಲಿ ಹಠಾತ್ ನಿಧನರಾಗಿದ್ದಾರೆ.ಮಧ್ಯಪ್ರದೇಶದ ಉಜೈನ್ ನಗರದಲ್ಲಿ ಜುಲೈ 6, 1956ರಲ್ಲಿ ಜನಿಸಿದ್ದ ಅವರು ಎಂ. ಕಾಂ ಸ್ನಾತಕೋತ್ತರ ಪದವೀಧರರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ (ಆರ್‍ಎಸ್‍ಎಸ್) ಜೊತೆ ದೀರ್ಘಕಾಲದಿಂದ ಒಡನಾಟ ಹೊಂದಿದ್ದ ಅವರು ಕಳೆದ ವರ್ಷ ಮೋದಿ ಮಂತ್ರಿ ಮಂಡಲಕ್ಕೆ ಪರಿಸರ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದರು. ಸಂಸತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರಾಗಿದ್ದ ದವೆ, ಜಾಗತಿಕ ತಾಪಮಾನ ಮತ್ತು ವಾತಾವರಣ ಬದಲಾವಣೆ ಕುರಿತು ಸಂಸದೀಯ ವೇದಿಕೆಯಲ್ಲೂ ಸಕ್ರಿಯರಾಗಿದ್ದರು.
ಪ್ರಧಾನಿ ಸಂತಾಪ : ಅನಿಲ್ ದವೆ ಹಠಾತ್ ನಿಧನಕ್ಕೆ ಪ್ರಧಾನಿ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ನಿಧನ ವೈಯಕ್ತಿಕ ನಷ್ಟವೆಂದು ಬಣ್ಣಿಸಿದ್ದಾರೆ. ನಿನ್ನೆ ತಡ ರಾತ್ರಿವರೆಗೂ ನನ್ನೊಂದಿಗೆ ಅನಿಲ್ ದವೆ ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಇಂದು ಮುಂಜಾನೆ ಅವರು ಹಠಾತ್ ವಿಧಿವಶರಾಗಿರುವುದು ನನಗೆ ದಿಗ್ಭ್ರಮೆ ಮೂಡಿಸಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.  ಅನಿಲ್ ದವೆ ಸಮರ್ಪಣಾ ಮನೋಭಾವದ ಸಾರ್ವಜನಿಕ ಸೇವಕರಾಗಿದ್ದರು. ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ-ಕಳಕಳಿ ಹೊಂದಿದ್ದ ಸಮರ್ಥ ಸಚಿವರಾಗಿದ್ದರು ಎಂದು ಮೋದಿ ಗುಣಗಾನ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin