ಕೇಂದ್ರ ಬಜೆಟ್ -2018 (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Budget--2018

BUDGET HIGHLIGHTS :
(ಬಜೆಟ್ ನ ಅಪ್ಡೇಟ್ಸ್ ಗಾಗಿ ಪೇಜ್ ರೀಫ್ರಶ್ ಮಾಡುತ್ತೀರಿ..)

[ಕೇಂದ್ರ ಬಜೆಟ್ -2018 (Live Updates)]

.

ನವದೆಹಲಿ,ಫೆ.1-ಕೃಷಿ, ಗ್ರಾಮೀಣಾಭಿವೃದ್ದಿ , ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ವಿಶೇಷ ಆದ್ಯತೆ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಥಾಸ್ಥಿತಿ, ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಸುಂಕ ಹೆಚ್ಚಳ ಮಾಡುವ ಮೂಲಕ ಎಲ್ಲರ ಸಂತೃಪ್ತಿಗೊಳಿಸುವ ಸಮತೋಲನದ ಬಜೆಟ್‍ನ್ನು ಕೇಂದ್ರ ಸರ್ಕಾರ ಮಂಡಿಸಿದೆ.  ಕಳೆದ ನಾಲ್ಕು ಬಜೆಟ್‍ಗಳಲ್ಲಿ ಯಾವುದೇ ಜನಪ್ರಿಯತೆಗೆ ಒತ್ತು ನೀಡಿರಲಿಲ್ಲ. ಆದರೆ ಈ ಬಾರಿಯ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್‍ನಲ್ಲಿ ಜನಪ್ರಿಯತೆಗೆ ಒತ್ತು ನೀಡುವ ಮೂಲಕ ದೇಶದ ಜನರಿಗೆ ಮೂಗಿಗೆ ತುಪ್ಪ ಸವರಿರುವುದು ಕಂಡುಬಂದಿದೆ.   ಲೋಕಸಭೆಯಲ್ಲಿಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ 2018-19ನೇ ಸಾಲಿನ ಬಹುನಿರೀಕ್ಷಿತ ಬಜೆಟ್‍ನಲ್ಲಿ ಸಮತೋಲನಕ್ಕೆ ವಿಶೇಷ ಗಮನಹರಿಸಲಾಗಿದೆ.

ನೋಟು ಅಮಾನೀಕರಣದ ನಂತರವೂ ದೇಶದ ಜಿಡಿಪಿ ಬೆಳವಣಿಗೆ ಶೇ.7.5ರಷ್ಟು ಗುರಿಯನ್ನು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವ ಜೇಟ್ಲಿ , ತಮ್ಮ ಬಜೆಟ್‍ನಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷ ಅನುದಾನವನ್ನು ಘೋಷಣೆ ಮಾಡಿದ್ದಾರೆ.  ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತೀಸ್‍ಘಡ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟದಲ್ಲಿರುವ ಅನ್ನದಾತನಿಗೆ ಅಭಯ ಹಸ್ತ ನೀಡಿದ್ದಾರೆ. ಈರುಳ್ಳಿ , ಟೊಮ್ಯಾಟೊ, ಆಲೂಗಡ್ಡೆ ಬೆಳೆದ ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು 500 ಕೋಟಿ ಅನುದಾನ, ಎಪಿಎಂಸಿಗಳ ಉನ್ನತೀಕರಣ ಹಾಗೂ ಗ್ರಾಮ ಬಜಾರ್ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ತೆರಿಗೆದಾರರು ನಿರಾಳ : 

ಇನ್ನು ತೆರಿಗೆದಾರರ ಮನಸು ಗೆಲ್ಲಲು ಮುಂದಾಗಿರುವ ಜೇಟ್ಲಿ , ಈ ಬಾರಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನೇ ಮುಂದುವರೆಸಿರುವುದು ವಿಶೇಷ. ಎರಡೂವರೆ ಲಕ್ಷದವರೆಗಿನ ವೈಯಕ್ತಿಕ ಆದಾಯದಲ್ಲಿ ಯಾವುದೇ ತೆರಿಗೆ ವಿಧಿಸಿಲ್ಲ. ಉಳಿದಂತೆ ಐದು ಲಕ್ಷ ಮೇಲ್ಪಟ್ಟರೆ ಶೇ.5 ಮತ್ತು 5ರಿಂದ 10 ಲಕ್ಷದವರೆಗೆ ಶೇ.20 ಹಾಗೂ 10 ಲಕ್ಷಕ್ಕೂ ಮೇಲ್ಪಟ್ಟರೆ ಶೇ.30ರಷ್ಟು ತೆರಿಗೆ ಮುಂದುವರೆದಿದೆ.  ಹಿರಿಯ ನಾಗರಿಕರ ನಿಶ್ಚಿತ ಠೇವಣಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ಮೂಲಕ ಸಂತೃಪ್ತಿಗೊಳಿಸುವ ಪ್ರಯತ್ನ ನಡೆಸಲಾಗಿದೆ.   ಮೊಬೈಲ್, ಕಂಪ್ಯೂಟರ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಸುಂಕ ತೆರಿಗೆಯನ್ನು ಶೇ.15ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರ ಹೋಟೆಲ್, ಸಿನಿಮಾ ಸೇವಾ ತೆರಿಗೆಯನ್ನು ಕೂಡ ಹೆಚ್ಚಳ ಮಾಡಿದೆ. ಕಾರ್ಪೊರೇಟ್  ತೆರಿಗೆ ಪ್ರಮಾಣವನ್ನು ಶೇ.30ರಿಂದ 25ಕ್ಕೆ ಇಳಿಕೆ ಮಾಡಲಾಗಿದೆ.  ನೋಟು ಅಮಾನೀಕರಣದ ಪರಿಣಾಮ ತೆರಿಗೆ ಪಾವತಿದಾರರ ಸಂಖ್ಯೆ 6.4 ಕೋಟಿಯಿಂದ 8.27 ಕೋಟಿಗೆ ಹೆಚ್ಚಳವಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

ವಿಶೇಷ ಒತ್ತು  : 
ಉಳಿದಂತೆ ಈ ಬಾರಿ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಶಿಕ್ಷಣ , ಕೃಷಿ, ಗ್ರಾಮೀಣಾಭಿವೃದ್ಧಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು, ಆರೋಗ್ಯ, ವೈದ್ಯಕೀಯ ಆಸ್ಪತ್ರೆಗಳ ನಿರ್ಮಾಣ, ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ, ರೈಲ್ವೆ ಉನ್ನತೀಕರಣ, ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ವಿಶೇಷ ಒತ್ತು ನೀಡಿದ್ದಾರೆ.  ರಸ್ತೆ ನಿರ್ಮಾಣದ ಯೋಜನೆಗಳಿಗೆ ಹಿಂದಿನ ಬಜೆಟ್‍ಗಿಂತ ಶೇ.10ರಿಂದ 15ರಷ್ಟು ಹೂಡಿಕೆಯಲ್ಲಿ ಹೆಚ್ಚಳ ಮಾಡಿದ್ದರೆ, ರೈಲ್ವೆ ಯೋಜನೆಗೂ ಶೇ.10ರಷ್ಟು ಅನುದಾನವನ್ನು ಏರಿಕೆ ಮಾಡಲಾಗಿದೆ.

ಶಿಕ್ಷಣಕ್ಕೆ ಈ ಬಾರಿ ಬಜೆಟ್‍ನಲ್ಲಿ ವಿಶೇಷ ಒತ್ತು ನೀಡಿರುವ ಸರ್ಕಾರ 2022 ವೇಳೆಗೆ ಶಿಕ್ಷಣ ಸುಧಾರಣೆಗೆ ಒಂದು ಲಕ್ಷ ಕೋಟಿ ವ್ಯಯಿಸಲಿದೆ. ಪರಿಶಿಷ್ಟ ಜಾತಿ/ವರ್ಗದ ಮಕ್ಕಳಿಗೆ ಏಕಲವ್ಯ ಶಾಲೆಗಳ ಪ್ರಾರಂಭ, ಪೂರ್ವ ಪ್ರಾಥಮಿಕ ಶಿಕ್ಷಣದಿಂದ 12ನೇ ತರಗತಿವರೆಗೆ ಶಿಕ್ಷಣ ಸುಧಾರಣೆ, ಪ್ಲಾನಿಂಗ್ ಹಾಗೂ ಆರ್ಕಿಟೆಕ್ ನೂತನ ಕಾಲೇಜುಗಳು, ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಪ್ರಧಾನಮಂತ್ರಿ ರಿಸರ್ಚ್ ಫೆಲೊಶಿಪ್ ಯೋಜನೆಯಡಿ ಒಂದು ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ.

ಸ್ಮಾರ್ಟ್ ಸಿಟಿ ಯೋಜನೆಗಾಗಿ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 2.04 ಲಕ್ಷ ಕೋಟಿ ಅನುದಾನವನ್ನು ನೀಡಿದೆ. ಮುದ್ರಾ ಯೋಜನೆಯಡಿ ಮೂರು ಲಕ್ಷ ಕೋಟಿ ಸಾಲ ನೀಡಲಿದ್ದು , ಇದರಿಂದ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇಟ್ಟುಕೊಂಡಿದೆ.  ದೇಶಾದ್ಯಂತ 3,600 ಕಿ.ಮೀ ರೈಲ್ವೆ ಹಳಿ ನವೀಕರಣಗೊಳಿಸುವ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಎಲ್ಲ ಹಳಿಗಳನ್ನು ಬ್ರಾಡ್‍ಗೇಜ್‍ಗಳಾಗಿ ಪರಿವರ್ತಿಸಿ, ಪ್ರತಿಯೊಂದು ರೈಲಿನಲ್ಲಿ ಸಿಸಿಟಿವಿ ಹಾಗೂ ವೈಫೈ ಸೌಲಭ್ಯಗಳನ್ನು ಕಲ್ಪಿಸಲಿದೆ.   ಆರೋಗ್ಯ ಹಾಗೂ ಶಿಕ್ಷಣಕ್ಕೆ ಈ ಬಾರಿ ಒಟ್ಟು 1.3 ಲಕ್ಷ ಕೋಟಿ ಅನುದಾನವನ್ನು ನಿಗದಿಪಡಿಸಿರುವ ಜೇಟ್ಲಿ , ಜವಳಿ ಯೋಜನೆಗಳಿಗಾಗಿ 7,148 ಕೋಟಿ ಅನುದಾನ ನೀಡಿದೆ.

ಇನ್ನು ಮುಂದೆ ಬ್ಲಾಕ್ ಬೋರ್ಡ್ ಬದಲಿಗೆ ಡಿಜಿಟಲ್ ಬೋರ್ಡ್ ಜಾರಿಗೆ ಬರಲಿದೆ. ದೇಶದಲ್ಲಿ 124 ವಿಮಾನ ನಿಲ್ದಾಣಗಳಿದ್ದು ಇವುಗಳನ್ನು ಐದು ಪಟ್ಟು ಹೆಚ್ಚಳ ಹಾಗೂ ವರ್ಷದಲ್ಲಿ ಒಂದು ಕೋಟಿ ಜನರು ಪ್ರಯಾಣ ಮಾಡಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ.  ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನವನ್ನು ದುಪ್ಪಟ್ಟು ಮಾಡಲಾಗಿದ್ದು , ಪ್ರತಿ ಐದು ವರ್ಷಕ್ಕೊಮ್ಮೆ ಸಂಸದರ ವೇತನ ಪರಿಷ್ಕರಣೆ ಮಾಡುವುದಾಗಿ ಜೇಟ್ಲಿ ಭರವಸೆ ನೀಡಿದ್ದಾರೆ.   ಹಲವು ಏಳುಬೀಳುಗಳ ನಡುವೆಯೇ ನಮ್ಮ ಸರ್ಕಾರ ದೇಶದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇವೆ.ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠರ ನಾಯಕತ್ವದಡಿ ಭಾರತ ಇಂದು ವಿಶ್ವದ 6ನೇ ಬೃಹತ್ ರಾಷ್ಟ್ರವಾಗಿ ಹೊರಹೊಮ್ಮಿದೆ.  ಮುಂದಿನ ದಿನಗಳಲ್ಲೂ ಇದೇ ರೀತಿ ನಮ್ಮ ಸರ್ಕಾರ ದೇಶದ ಬೆಳವಣಿಗೆಗೆ ಕಟಿಬದ್ಧವಾಗಿದೆ ಎಂದು ಅರುಣ್ ಜೇಟ್ಲಿ ಜನತೆಗೆ ಭರವಸೆ ನೀಡಿದರು.

> ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ 4ನೆ ಬಜೆಟ್
> ಕೇಂದ್ರ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಮುಂಗಡ ಪತ್ರ
> ಈ ವರ್ಷ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಬಜೆಟ್
> ಬಜೆಟ್ ಮಂಡನೆಗೂ ಮುನ್ನ ಪ್ರಧಾನಿ ನೇತೃತ್ವದ ಸಂಪುಟ ಸಭೆ, ಮುಂಗಡಪತ್ರಕ್ಕೆ ಅನುಮೋದನೆ
> ಮುಂಗಡ ಪತ್ರ ಮಂಡನೆಗೂ ಮುನ್ನ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ
> ಕೇಂದ್ರ ಸರ್ಕಾರದಿಂದ 8,000 ಬಜೆಟ್ ಪ್ರತಿಗಳ ಮುದ್ರಣ, ಸಂಸತ್ ಭವನದಲ್ಲಿ 2,500 ಕಾಪಿಗಳ ವಿತರಣೆ
> ಬಜೆಟ್‍ಗೆ ಮುನ್ನ ಷೇರುಪೇಟೆಯಲ್ಲಿ ಸಕಾರಾತ್ಮಕ ಚಟುವಟಿಕೆ : 36,127.20ರಿಂದ ಸೆನ್‍ಸೆಕ್ಸ್, 11,067.25ರಿಂದ ನಿಫ್ಟಿ ಆರಂಭ
> ಮೊದಲ ಬಾರಿಗೆ ಬಹುತೇಕ ಬಜೆಟ್ ಭಾಷಣ ಹಿಂದಿಯಲ್ಲಿ
> ಸಾಮಾನ್ಯ ಬಜೆಟ್‍ನೊಂದಿಗೆ ರೈಲ್ವೆ ಮುಂಗಡಪತ್ರ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ

ಇಳಿಕೆ : ಪಾದರಕ್ಷೆ, ಲೆದರ್ ಉತ್ಪನ್ನಗಳು, ಗೋಡಂಬಿ, ಉಪ ಉತ್ಪನ್ನಗಳು, ಐಟಿ ಹೊಸ ಉದ್ಯೋಗಿಗಳಿಗೆ ತೆರಿಗೆ ವಿನಾಯ್ತಿಯಲ್ಲಿ

ಏರಿಕೆ : ಮೊಬೈಲ್, ಟಿವಿ, ಕಂಪ್ಯೂಟರ್, ಪವರ್‍ಬ್ಯಾಂಕ್, ಅಬಕಾರಿ ಸುಂಕ, ಹೋಟೆಲ್, ಸಿನಿಮಾ, ಆಮದು ವಸ್ತುಗಳ ಮೇಲೆ ಸುಂಕ ಏರಿಕೆ.

ಕೇಂದ್ರ ಬಜೆಟ್ ನಲ್ಲಿ ಯಾವ ವಲಯಕ್ಕೆ ಏನೇನು.. ಎಷ್ಟೆಷ್ಟು ಸಿಕ್ತು..?
ಶೈಕ್ಷಣಿಕ ವಲಯ : 
> ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಪ್ರಸ್ತಾವ
> ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ
> ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ
> ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆ
ಕೃಷಿ ವಲಯ :
> ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ 100ರ ತೆರಿಗೆ ವಿನಾಯಿತಿ
>2018-19ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು 11 ಲಕ್ಷ ಕೋಟಿಗೆ ಹೆಚ್ಚಿಸಲು ಪ್ರಸ್ತಾವ
>500 ಕೋಟಿ ಅನುದಾನದಲ್ಲಿ ಆಪರೇಷನ್ ಗ್ರೀನï¿ ಯೋಜನೆಗೆ ಪ್ರಸ್ತಾವ
>ಬಿದಿರು ಕೃಷಿಗಾಗಿ 1,290 ಮೊತ್ತದ ನಿಧಿ
>ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2,000 ಕೋಟಿ ಮೊತ್ತದಲ್ಲಿ ಕೃಷಿ ಮಾರುಕಟ್ಟೆ ನಿಧಿ¿ ಘೋಷಣೆ
>2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ
>2018-19ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು 11 ಲಕ್ಷ ಕೋಟಿಗೆ ಹೆಚ್ಚಿಸಲು ಪ್ರಸ್ತಾವ
ಆರೋಗ್ಯ ವಲಯ : 
>ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ 40,000ಕ್ಕೆ ಹೆಚ್ಚಳ
>10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ವಿಮೆ
>ಕ್ಷಯ ರೋಗಿಗಳಿಗಾಗಿ ಆಯುಷ್ಮಾನ್ ಭಾರತï¿ ಯೋಜನೆ, 600 ಕೋಟಿ ಅನುದಾನ
>ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ 12,00 ಕೋಟಿ ಅನುದಾನ ಬಿಡುಗಡೆ, 10 ಕೋಟಿ ಬಡ ಕುಟುಂಬಗಳಿಗೆ ನೆರವು
>ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜತೆ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ
>ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ
>ಸ್ವಚ್ಛ ಭಾರತ ಯೋಜನೆಯಡಿ ಈವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ
>ಸ್ವಚ್ಛ ಭಾರತ ಯೋಜನೆ ಅಡಿ ಇನ್ನೂ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ

> 40,000ರೂ.ವರೆಗೆ ಚಿಕಿತ್ಸೆ ವೆಚ್ಚಕ್ಕೆ ವಿನಾಯಿತಿ
ನವದೆಹಲಿ, ಫೆ.1- ಬಡವರು ಮತ್ತು ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವ ಅರುಣ್ ಜೇಟ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಲ್ಲಿ ಕೆಲವು ವಿನಾಯಿತಿ ಪ್ರಕಟಿಸಿದ್ದಾರೆ.40 ,000ರೂ.ಗಳವರೆಗೆ ಚಿಕಿತ್ಸಾ ವೆಚ್ಚಕ್ಕೆ ವಿನಾಯಿತಿ ನೀಡಲಾಗಿದೆ. ಈ ಹಿಂದೆ ಈ ತೆರಿಗೆ ಮಿತಿ 15,000ರೂ.ಗಳಿಗೆ ನಿಗದಿಗೊಳಿಸಲಾಗಿತ್ತು. ವೈದ್ಯಕೀಯ ವಿಮೆಯನ್ನು 30,000ರೂ.ಗಳಿಂದ 50,000ರೂ.ಗಳಿಗೆ ಹೆಚ್ಚಿಸಲಾಗಿದೆ.

> ನಗದು ವಹಿವಾಟು 10 ಸಾವಿರಕ್ಕೆ ಸೀಮಿತ
ನವದೆಹಲಿ, ಫೆ.1- ನಗದು ವಹಿವಾಟಿನಲ್ಲಿ ನಡೆಯುವ ಅಕ್ರಮ ಮತ್ತು ಅವ್ಯವಹಾರಗಳಿಗೆ ಕಡಿವಾಣ ಹಾಕಲು ಹಣಕಾಸು ಸಚಿವ ಅರುಣ್ ಜೇಟ್ಲಿ 2018-19ನೆ ಸಾಲಿನ ಬಜೆಟ್‍ನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಟ್ರಸ್ಟ್‍ಗಳು ಮತ್ತು ಸಂಸ್ಥೆಗಳಿಂದ 10,000 ರೂ.ಗಳಿಗೂ ಮೇಲ್ಪಟ್ಟ ನಗದು ಪಾವತಿಗೆ ಅವಕಾಶ ಇಲ್ಲ. ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡುವ ಹಾಗೂ ನಗದು ವ್ಯವಹಾರವನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.  ಬಿಟ್ ಕಾಯಿನ್‍ಗಳೂ ಸೇರಿದಂತೆ ಕ್ರಿಫ್ಟೋ ಕರೆನ್ಸಿಗಳು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಘೋಷಿಸಿರುವ ಅರುಣ್ ಜಟ್ಲಿ, ಅವುಗಳ ಬಳಕೆಯನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ.  ಇವುಗಳನ್ನು ಸರ್ಕಾರ ಅಧಿಕೃತ ಎಂದು ಪರಿಗಣಿಸಿಲ್ಲ. ಇಂಥ ಅಕ್ರಮ ವಹಿವಾಟುಗಳ ನಿರ್ಮೂಲನೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಹೇಳಿದ್ದಾರೆ.

> ವಿತ್ತೀಯ ಕೊರತೆ ಇಳಿಸಲು ಸರ್ಕಾರ ಬದ್ಧ : ಜೇಟ್ಲಿ

ನವದೆಹಲಿ, ಫೆ.1- 2018-19ನೆ ಸಾಲಿನ ವಿತ್ತೀಯ ಕೊರತೆ ಶೇ.3.5ಕ್ಕೆ ಏರಿಕೆಯಾಗಿದ್ದು, ಅದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿಂದು ತಮ್ಮ ಬಜೆಟ್ ಭಾಷಣದಲ್ಲಿ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇ.3.2ರಷ್ಟು ಇರುತ್ತದೆ ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಆದರೆ, ಅದು ಶೇ.3.5ರಷ್ಟು ಏರಿಕೆಯಾಗಿದೆ. ಇದನ್ನು ಕಡಿಮೆ ಮಾಡಲು ಅಗತ್ಯವಾದ ಆರ್ಥಿಕ ಸುಧಾರಣಾ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.  ವಿತ್ತೀಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣಾ ಕಾಯ್ದೆಯು 2018-19ನೆ ಸಾಲಿಗೆ ಶೇ.3ರಷ್ಟು ಗುರಿಯನ್ನು ನಿಗದಿಗೊಳಿಸಿತ್ತು.ಇದು ಈಗ ಶೇ.3.3ರಷ್ಟು ನಿಗದಿಗೊಂಡಿದೆ ಎಂದು ಅವರು ತಿಳಿಸಿದರು.

> ಬಜೆಟ್‍ನಲ್ಲಿ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆ ಘೋಷಣೆ
ನವದೆಹಲಿ, ಫೆ.1- ಇದೇ ಮೊದಲ ಬಾರಿಗೆ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯನ್ನುಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ವಿಶ್ವದಲ್ಲೇ ಇದು ಅತಿ ದೊಡ್ಡ ವಿಮಾ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸರ್ಕಾರ ಪ್ರಾಯೋಜಿತ ಸಾರ್ವತ್ರಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವನ್ನು ಪ್ರಕಟಿಸಿದ್ದು, ದೇಶದ 10 ಕೋಟಿ ಬಡವರಿಗೆ ಮತ್ತು ಅವರ ಕುಟುಂಬದವರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಆರಂಭದಲ್ಲಿ ಸುಮಾರು 50 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ವೈದ್ಯಕೀಯ ವೆಚ್ಚ ಮರುಪಾವತಿಗೆ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯಲ್ಲಿ ರೂಪಿಸಲಾಗಿದೆ. ಕೇಂದ್ರ ಸರ್ಕಾರ ನಿಧಾನವಾಗಿಯಾದರೂ ನಿಖರವಾದ ಮತ್ತು ಖಚಿತವಾದ ಆರೋಗ್ಯ ಸೇವೆ ಒದಗಿಸಲು ನಿರ್ಧರಿಸಿದೆ ಎಂದು ಬಜೆಟ್‍ನಲ್ಲಿ ಹೇಳಿದ್ದಾರೆ. ಈ ಯೋಜನೆಗಾಗಿ 1100 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಕ್ಷಯ ರೋಗಿಗಳಿಗಾಗಿ ಪ್ರತ್ಯೇಕವಾಗಿ 600 ಕೋಟಿ ರೂ. ಆವರ್ತ ನಿಧಿಯನ್ನು ಕಾಯ್ದಿರಿಸಲಾಗಿದೆ.

ಆರೋಗ್ಯ ಮತ್ತು ಚಿಕಿತ್ಸಾ ಕೇಂದ್ರಗಳು ಜನಸಾಮಾನ್ಯರ ಕೈಗೆಟಕಬೇಕು ಎಂಬ ನಿಟ್ಟಿನಲ್ಲಿ ಜೇಟ್ಲಿ ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅರುಣ್ ಜೇಟ್ಲಿ ತಮ್ಮ ಬಜೆಟ್‍ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, ಕಳೆದ ವರ್ಷ ಒದಗಿಸಿದ್ದ 1.22 ಲಕ್ಷ ಕೋಟಿ ಬದಲಾಗಿ ಈ ವರ್ಷ 1.38 ಲಕ್ಷ ಕೋಟಿ ಬಜೆಟ್‍ಅನ್ನು ಮೀಸಲಿರಿಸಿದ್ದಾರೆ. ಆಯುಷ್ಮಾನ್ ಭಾರತ್ ಪ್ರೊಗ್ರಾಂಗೆ 1200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿದೆ.  24 ಜಿಲ್ಲಾ ಮಟ್ಟದ ಕಾಲೇಜುಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಪೌಷ್ಠಿಕಾಂಶ ಯೋಜನೆಗೆ 600 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

>  ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಜೇಟ್ಲಿ
ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್‍ನಲ್ಲಿ ರೈತರಿಗೆ ಸಿಹಿಸುದ್ದಿ ನೀಡಿದ್ದು, ಕನಿಷ್ಠ ಬೆಂಬಲ ಬೆಲೆ ನಿಗದಿ ವೇಳೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ದರ ನಿಗದಿ ಮಾಡಲು ನಿರ್ಧರಿಸಿದ್ದಾರೆ. ಆಹಾರ ಸಂಸ್ಕರಣಾ ಕ್ಷೇತ್ರ ಶೇ.8ರ ದರದಲ್ಲಿ ವೃದ್ಧಿಗೊಂಡಿದ್ದು, 1400 ಕೋಟಿ ರೂ.ಗಳನ್ನು ಆಹಾರ ಸಂಸ್ಕರಣಾ ಇಲಾಖೆಗೆ ಒದಗಿಸಲಾಗಿದೆ.   ದೇಶದ ಕೃಷಿ ಉತ್ಪನ್ನಗಳ ರಫ್ತು ಸಾಮಥ್ರ್ಯ 100 ಬಿಲಿಯನ್‍ಗಳಾಗಿದ್ದು, ಕಳೆದ ವರ್ಷ 30 ಬಿಲಿಯನ್ ಡಾಲರ್‍ನಷ್ಟು ರಫ್ತಾಗಿದೆ. ಕಿಸಾನ್ ಕ್ರೆಡಿಟ್ ಸೌಲಭ್ಯವನ್ನು ಮೀನುಗಾರರು ಮತ್ತು ಪಶು ಸಂಗೋಪನಾ ಕ್ಷೇತ್ರಕ್ಕೆ ವಿಸ್ತರಿಸುವುದಾಗಿ ಜೇಟ್ಲಿ ಘೋಷಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚುವರಿಯಾಗಿ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ.
ಗ್ರಾಮೀಣ ಭಾಗದ ಕೃಷಿ ಆರ್ಥಿಕತೆಯನ್ನು ಬಲಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಕೃಷಿ ಸಾಲದ ಚಟುವಟಿಕೆಗೆ ಕಳೆದ ವರ್ಷ ಒದಗಿಸಿದ 10 ಲಕ್ಷ ಕೋಟಿಗೆ ಬದಲಾಗಿ ಈ ವರ್ಷ 11 ಲಕ್ಷ ಕೋಟಿ ಒದಗಿಸಲು ನಿರ್ಧರಿಸಲಾಗಿದೆ. ಕೃಷಿ ಸರಕು ರಫ್ತು ನಿಯಮಾವಳಿಗಳನ್ನು ಸರಳೀಕರಣಗೊಳಿಸಲು ನಿರ್ಧರಿಸಲಾಗಿದೆ.

> ವಿಮಾನಯಾನ ಸಾಮರ್ಥ್ಯ ಐದು ಪಟ್ಟು ಹೆಚ್ಚಿಸಲು ನಿರ್ಧಾರ

ನವದೆಹಲಿ, ಫೆ.1- ಪ್ರತಿ ವರ್ಷ ಒಂದು ಬಿಲಿಯನ್ ಟ್ರಿಪ್‍ಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ವಿಮಾನಯಾನದ ಸೌಲಭ್ಯ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈಗಿರುವ ವಿಮಾನಯಾನ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧರಿಸುವುದಾಗಿ ಘೋಷಿಸಿದರು.

ಯುಡಿಎಎನ್ 56 ವಿಮಾನ ನಿಲ್ದಾಣಗಳು 36 ಎಲಿಪೋರ್ಟ್‍ಗಳನ್ನು ಹೊಂದಿದ್ದು, ಇವುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೊಸ ಪ್ರಸ್ತಾವನೆಯಲ್ಲಿ ಇಷ್ಟು ವಿಮಾನ ನಿಲ್ದಾಣಗಳು ಮತ್ತು ಎಲಿಪೋರ್ಟ್‍ಗಳನ್ನು ಸಂಪರ್ಕಿಸಲು ನಿರ್ಧರಿಸಲಾಗಿದೆ.  ಹವಾಯ್ ಚಪ್ಪಲಿ ಧರಿಸುವವರು ಕೂಡ ವಿಮಾನದಲ್ಲಿ ಪ್ರಯಾಣಿಸುವಂತಹ ಸರಳತೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹವಾಯ್ ಚಪ್ಪಲ್ ಕೆನ್ ಫ್ಲೈ ಇನ್ ಹವಾಯ್ ಜಹಾಜ್ (ಏರೋಪ್ಲೇನ್) ಎಂದು ಹೇಳುವ ಮೂಲಕ ಅರುಣ್ ಜೇಟ್ಲಿ ವಿಮಾನಯಾನದ ಪ್ರಯಾಣ ದರ ಕಡಿಮೆಗೊಳಿಸುವ ಮುನ್ಸೂಚನೆ ನೀಡಿದ್ದಾರೆ. ಹೊಸ ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, 60 ಕೋಟಿ ರೂ.ಗಳನ್ನು ಶೀಘ್ರ ಸೇವೆಗಾಗಿ ಮೀಸಲಿರಿಸಲಾಗಿದೆ.
>  ಆದಾಯ ತೆರಿಗೆ ಮಿತಿ ಯಥಾಸ್ಥಿತಿ

Income-Tax
ನವದೆಹಲಿ, ಫೆ.1- ವೈಯಕ್ತಿಕ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಯಥಾ ಸ್ಥಿತಿ ಮುಂದುವರೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಎರಡೂವರೆ ಲಕ್ಷದವರೆಗೂ ಯಾವುದೇ ತೆರಿಗೆ ಪಾವತಿಸುವಂತಿಲ್ಲ. ಎರಡೂವರೆ ಲಕ್ಷದಿಂದ 5 ಲಕ್ಷದವರೆಗೂ ಶೇ.5, ಐದರಿಂದ ಹತ್ತು ಲಕ್ಷದವರೆಗೂ ಶೇ.20, ಹತ್ತರಿಂದ ಇಪ್ಪತ್ತೈದು ಲಕ್ಷದವರೆಗೂ ಶೇ.30ರಷ್ಟು ತೆರಿಗೆ ಪಾವತಿಯ ಸ್ಲ್ಯಾಬ್ ಯಥಾ ಸ್ಥಿತಿ ಮುಂದುವರೆಯಲಿದೆ.

ಈ ಬಾರಿ 19.25 ಲಕ್ಷದಷ್ಟು ತೆರಿಗೆದಾರರು ಹೆಚ್ಚಳಗೊಂಡಿರುವುದರಿಂದ 9 ಸಾವಿರ ಕೋಟಿ ರೂ.ಗಳಷ್ಟು ಆದಾಯ ತೆರಿಗೆ ಸಂಗ್ರಹ ಮಾಡಲಾಗಿದೆ. ನೇರ ತೆರಿಗೆ ಪಾವತಿಯಲ್ಲಿ 12.6 ಲಕ್ಷದಷ್ಟು ತೆರಿಗೆದಾರರು ಹೆಚ್ಚಳವಾಗಿದ್ದಾರೆ. ಈ ವರ್ಷ ಜಿಎಸ್‍ಟಿಯನ್ನು 12 ತಿಂಗಳ ಬದಲಿಗೆ 11 ತಿಂಗಳಿಗೆ ನಿಗದಿಪಡಿಸಲಾಗಿದೆ ಎಂದು ಜೇಟ್ಲಿ ಬಜೆಟ್ ಭಾಷಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವೇತನದಾರರಿಗೆ ಟ್ಯಾಕ್ಸ್ ರಿಲೀಫ್ ಘೋಷಣೆ ಮಾಡಿರುವ ಜೇಟ್ಲಿ ಅವರು 40,000 ರೂ.ವರೆಗಿನ ವೈದ್ಯಕೀಯ ಶುಲ್ಕಕ್ಕೆ ವಿನಾಯ್ತಿ ನೀಡಿದ್ದಾರೆ. ಆದಾಯ ತೆರಿಗೆ ಪಾವತಿ ಸಂದರ್ಭದಲ್ಲಿ 40,000 ರೂ. ವರೆಗಿನ ವೈದ್ಯಕೀಯ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

> ರಾಷ್ಟ್ರಪತಿ-ಉಪರಾಷ್ಟ್ರಪತಿ-ರಾಜ್ಯಪಾಲರ ವೇತನ ಹೆಚ್ಚಳ

Kovind--02
ನವದೆಹಲಿ,ಫೆ.1-ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ತಿಂಗಳ ವೇತನವನ್ನು ದುಪಟ್ಟು ಮಾಡಲಾಗಿದೆ. ರಾಷ್ಟ್ರಪತಿಗಳಿಗೆ ತಿಂಗಳ ವೇತನ 5 ಲಕ್ಷ , ಉಪರಾಷ್ಟ್ರಪತಿಗೆ 4 ಲಕ್ಷ ಹಾಗೂ ರಾಜ್ಯಪಾಲರಿಗೆ ಮೂರುವರೆ ಲಕ್ಷ ರೂ. ವೇತನ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ, ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದೆ.  ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಮಂಡಿಸಿದ 2018-19ನೇ ಸಾಲಿನ ಬಜೆಟ್‍ನಲ್ಲಿ ಇದನ್ನು ಘೋಷಿಸಿದರು. ಪ್ರಸ್ತುತ ರಾಷ್ಟ್ರಪತಿಗಳು ಪ್ರತಿ ತಿಂಗಳು ಎರಡೂವರೆ ಲಕ್ಷ , ಉಪರಾಷ್ಟ್ರಪತಿ ಒಂದೂವರೆ ಲಕ್ಷ ಹಾಗೂ ರಾಜ್ಯಪಾಲರು ಒಂದು ಲಕ್ಷ ವೇತನವನ್ನು ಪಡೆಯುತ್ತಿದ್ದಾರೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ವೇತನವನ್ನು ಪರಿಷ್ಕರಣೆ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿತ್ತು.

ಇನ್ನು ಮುಂದೆ ರಾಷ್ಟ್ರಪತಿ 5 ಲಕ್ಷ ವೇತನ ಪಡೆದರೆ, ಉಪರಾಷ್ಟ್ರಪತಿ 4 ಲಕ್ಷ ಹಾಗೂ ರಾಜ್ಯಪಾಲರು ಮೂರುವರೆಗೆ ಲಕ್ಷ ವೇತನ ಪಡೆಯಲಿದ್ದಾರೆ. ಹಾಗೆಯೇ ಸಂಸದರ ವೇತನವನ್ನು ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡುವುದಾಗಿ ಜೇಟ್ಲಿ ತಿಳಿಸಿದ್ದಾರೆ.  ಹಣದುಬ್ಬರದ ಪರಿಸ್ಥಿತಿಗನುಗುಣವಾಗಿ ಸಂಸದರ ವೇತನವನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಜನಪ್ರತಿನಿಧಿಗಳ ಮೂಗಿಗೂ ತುಪ್ಪ ಸವರಿದ್ದಾರೆ.  ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಹಲವು ಸದಸ್ಯರು ಕೇಂದ್ರದ ಮುಂದಿಟ್ಟಿದ್ದರು. ಇದೀಗ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದರಿಂದ ಜನಪ್ರತಿನಿಧಿಗಳ ವೇತನ ಮತ್ತೆ ಹೆಚ್ಚಾಗುವ ಸಂಭವವಿದೆ.

> ರೈಲ್ವೆ ಅಭಿವೃದ್ಧಿಗೆ 1.49 ಲಕ್ಷ ಕೋಟಿ
ನವದೆಹಲಿ, ಫೆ.1- ರೈಲ್ವೆ ಅಭಿವೃದ್ಧಿಗೆ 1.49 ಲಕ್ಷ ಕೋಟಿ ರೂ. ಮೀಸಲು. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಟಿವಿ, ವೈಫ್ ಅಳವಡಿಕೆ. ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ. ಸಬ್‍ಹರ್ಬನ್ ರೈಲ್ವೆ 40ಸಾವಿರ ಕೋಟಿ, ಬೆಂಗಳೂರು ಸಬ್‍ಹರ್ಬನ್ ಗೆ 17 ಸಾವಿರ ಕೋಟಿ. ರೈಲ್ವೆ ಜಾಲ ಮತ್ತಷ್ಟು ವೃದ್ಧಿಗೆ ನಿರ್ಧಾರ. 700 ಲೋಕೋ ಮೆಟ್ಯೂಗಳ ನಿರ್ಮಾಣ. ಬುಲೆಟ್ ಟ್ರೈನ್, 600 ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೆ ಕ್ರಮ,  ಮುಂಬೈ ಲೋಕಲ್ ರೈಲ್ವೆ ಅಭಿವೃದ್ಧಿಗೆ 11 ಸಾವಿರ ಕೋಟಿ ಅನುದಾನ, ಲೋಕಲ್ ಟ್ರೈನ್‍ಗಳ ಸಂಚಾರಕ್ಕೆ ನಿರ್ಧಾರ. 30 ಸಾವಿರ ಕಿ.ಮೀ., 400 ಸಾವಿರ ಕಿ.ಮೀ. ರೈಲು ಹಳಿಗಳ ನಿರ್ಮಾಣ, ಭಾರತ್ ಮಾಲಾ ಯೋಜನೆಯಡಿ 35ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿ. ದೇಶದೆಲ್ಲೆಡೆ ರೈಲ್ವೆ ಮಾರ್ಗ ಬ್ರಾಡ್‍ಗೇಜ್ ಮಾರ್ಗ ಉನ್ನತ್ತೀಕರಣ,
600 ರೈಲ್ವೆ ನಿಲ್ದಾಣಗಳಲ್ಲಿ ಎಕ್ಸಲೇಟರ್ ಅಳವಡಿಕೆ.

> ಕರ್ನಾಟಕಕ್ಕೆ ಮೋದಿ ಗಿಫ್ಟ್ : ಸಬ್‍ಅರ್ಬನ್ ರೈಲಿಗೆ 17 ಸಾವಿರ ಕೋಟಿ ಅನುದಾನ

Sub-Urban--011
ನವದೆಹಲಿ,ಫೆ.1-ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಬ್‍ಅರ್ಬನ್(ಉಪನಗರ ರೈಲು ಯೋಜನೆ)ಗೆ 17 ಸಾವಿರ ಕೋಟಿ ಅನುದಾನವನ್ನು ಘೋಷಣೆ ಮಾಡಿದೆ. ಲೋಕಸಭೆಯಲ್ಲಿ ಇಂದು 2018-19ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ದೇಶದ ಪ್ರಮುಖ ನಗರಗಳಲ್ಲಿ ಸಬರ್ಬನ್ ರೈಲು ಯೋಜನೆಗಳಿಗೆ 40 ಸಾವಿರ ಕೋಟಿ ಹಣ ನೀಡುವುದಾಗಿ ಪ್ರಕಟಿಸಿದರು.  ವಿಶೇಷವೆಂದರೆ ಬೆಂಗಳೂರಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ಬಂಪರ್ ಕೊಡುಗೆ ನೀಡುವ ಮೂಲಕ ಕರ್ನಾಟಕ ಮತದಾರರ ಓಲೈಕೆಗೆ ಮುಂದಾಗಿರುವುದು ಕಂಡುಬಂದಿದೆ. ನಗರದಲ್ಲಿ ಒಟ್ಟು 160 ಕಿ.ಮೀ ಸಬರ್ಬನ್ ರೈಲು ಪ್ರಾರಂಭಿಸುವ ಗುರಿ ಹೊಂದಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರಿ ಸಮಸ್ಯೆಯನ್ನು ನಿವಾರಿಸಲು ಮುಂಬೈ ಮಾದರಿಯಲ್ಲಿ ಸಬರ್ಬನ್ ರೈಲು ಪ್ರಾರಂಭಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಕೇಳಿಬಂದಿತ್ತು. ನಗರದಲ್ಲಿ ಮೆಟ್ರೊ ರೈಲು ಆರಂಭವಾಗಿದ್ದರೂ ಸಂಚಾರಿ ದಟ್ಟಣೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಈ ಬಗ್ಗೆ ಈ ಹಿಂದೆ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು.  ದೇಶದಲ್ಲೇ ಪ್ರಮುಖ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಬರ್ಬನ್ ರೈಲು ಪ್ರಾರಂಭಿಸದಿದ್ದರೆ ಸಂಚಾರಿ ದಟ್ಟಣೆಯನ್ನು ನಿವಾರಿಸುವುದು ಭವಿಷ್ಯದಲ್ಲಿ ದುಸ್ತರವಾಗಲಿದೆ ಎಂಬ ಆತಂಕ ಎದುರಾಗಿತ್ತು.

ದೆಹಲಿ ಬಿಟ್ಟರೆ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುವ ನಗರವೆಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿಗೆ ಸಬರ್ಬನ್ ರೈಲು ಅನುಷ್ಠಾನವಾದರೆ ಸಂಚಾರಿ ಸಮಸ್ಯೆ ಒಂದಿಷ್ಟು ನಿವಾರಣೆಯಾಗಬಹುದೆಂಬುದು ಇಲ್ಲಿನ ನಾಗರಿಕರ ಬೇಡಿಕೆಯಾಗಿತ್ತು.  ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ ಸಚಿವ ಪಿಯೂಷ್ ಗೋಯಲ್ ನಗರಕ್ಕೆ ಸಬರ್ಬನ್ ರೈಲು ಒದಗಿಸುವುದಾಗಿ ತಿಳಿಸಿದ್ದರು. ಇಂದು ಅರುಣ್ ಜೇಟ್ಲಿ ಅವರು ಬಜೆಟ್‍ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿರುವುದರಿಂದ ಬೆಂಗಳೂರು ಜನತೆಯ ದಶಕಗಳ ಕನಸು ಸದ್ಯದಲ್ಲೇ ನನಸಾಗುವ ಸಮಯ ಒದಗಿದೆ.

> ಪ್ರತಿ ರಾಜ್ಯಕ್ಕೂ ಒಂದೊಂದು ವೈದ್ಯಕೀಯ ಕಾಲೇಜು, ‘ಆಯುಷ್ಮಾನ್ ಭಾರತ್’ ಆರಂಭ
ನವದೆಹಲಿ,ಫೆ.1-ಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ‘ಆಯುಷ್ಮಾನ್ ಭಾರತ್’ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ. ಹಣಕಾಸು ಖಾತೆ ಹೊಂದಿರುವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಎನ್‍ಡಿಎ ಸರ್ಕಾರದ ಕೊನೆಯ ಹಾಗೂ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ವೇಳೆ ಇದನ್ನು ಪ್ರಕಟಿಸಿದರು.

ಪ್ರತಿಯೊಂದು ಪ್ರಜೆಗೂ ಉತ್ತಮ ಆರೋಗ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ದೇಶದ ಪ್ರತಿಯೊಂದು ರಾಜ್ಯಕ್ಕೂ ಹೊಸದಾಗಿ ಒಂದೊಂದು ವೈದ್ಯಕೀಯ ಕಾಲೇಜು ಸ್ಥಾಪಿಸಲು ಅನುಮತಿ ನೀಡುವುದಾಗಿ ಘೋಷಿಸಿದರು. ಆಯುಷ್ಮಾನ್ ಭಾರತ್ ಎಂಬ ಹೊಸ ಆರೋಗ್ಯ ಯೋಜನೆಯನ್ನು ಪ್ರಕಟಿಸಿರುವ ಜೇಟ್ಲಿ ಇದಕ್ಕಾಗಿ 50 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಕ್ಷಯ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು 600 ಕೋಟಿ ಅನುದಾನದಲ್ಲಿ ಪ್ರತಿ ತಿಂಗಳು 500 ರೂ. ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

>  ಈರುಳ್ಳಿ, ಆಲೂಗಡ್ಡೆ , ಟೊಮ್ಯಾಟೊ ಬೆಳೆಗಳಿಗೆ 500 ಕೋಟಿ ಬೆಂಬಲ ಬೆಲೆ

Tomato--01
ನವದೆಹಲಿ,ಫೆ.1-ಸಂಕಷ್ಟದಲ್ಲಿರುವ ರೈತರ ಈರುಳ್ಳಿ , ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗಳಿಗೆ 500 ಕೋಟಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.  ಸರ್ಕಾರದ ಈ ಕ್ರಮದಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಮತ್ತಿತರರ ರಾಜ್ಯಗಳಲ್ಲಿ ಆಲೂಗಡ್ಡೆ ,ಈರುಳ್ಳಿ ಮತ್ತು ಟೊಮ್ಯಾಟೊ ಬೆಳೆಯುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಲೋಕಸಭೆಯಲ್ಲಿಂದು ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ , 500 ಕೋಟಿ ಬೆಂಬಲ ಬೆಲೆ ಘೋಷಣೆ ಮಾಡಿದರು. ಆಪರೇಷನ್ ಫ್ಲಡ್ ಬದಲಿಗೆ ಆಪರೇಷನ್ ಗ್ರೀನ್‍ಗೆ ಒತ್ತು ನೀಡಿರುವ ಅವರು, ಎಪಿಎಂಸಿಗಳನ್ನು ಉನ್ನತೀಕರಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ರೈತರು ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಬಲೆಗೆ ಬೀಳದೆ ನೇರವಾಗಿ ಎಪಿಎಂಸಿಗಳಿಗೆ ಮಾರಾಟ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಅದಕ್ಕಾಗಿ ಎಪಿಎಂಸಿಗಳನ್ನು ಉನ್ನತೀಕರಿಸಲು 2000 ಕೋಟಿ ವಿಶೇಷ ಅನುದಾನ ನೀಡುವ ಭರವಸೆಯನ್ನು ನೀಡಿದ್ದಾರೆ. ರೈತರು ಇನ್ನು ತಮ್ಮ ಬೆಳೆಗಳನ್ನು ಎಪಿಎಂಸಿ ಜೊತೆ ಗ್ರಾಮ ಬಜಾರ್ ಮೂಲಕವೂ ಮಾರಾಟ ಮಾಡಬಹುದು. ನಮ್ಮ ಸರ್ಕಾರ ಕನಿಷ್ಟ ಬೆಂಬಲ ಬೆಲೆಗೆ ವಿಶೇಷ ಆದ್ಯತೆ ನೀಡಲಿದೆ ಎಂದು ಹೇಳಿದರು.

>  ನವದೆಹಲಿ-ಪಂಜಾಬ್-ಹರಿಯಾಣಕ್ಕೆ ವಿಶೇಷ ಪ್ಯಾಕೇಜ್
ನವದೆಹಲಿ,ಫೆ.1-ಅತಿಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿ, ಪಂಜಾಬ್, ಹರಿಯಾಣ ರಾಜ್ಯಗಳಿಗೆ ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಮೂರು ರಾಜ್ಯಗಳಲ್ಲಿ ಮಾಲಿನ್ಯ ನಿಯಂತ್ರಣ ಕೈ ಮೀರುತ್ತಿರುವುದರಿಂದ ಇದನ್ನು ತಡೆಗಟ್ಟಲು ವಿಶೇಷ ಆರ್ಥಿಕ ನೆರವು ನೀಡುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಪ್ರಕಟಿಸಿದರು.  ಈ ಮೂರು ರಾಜ್ಯಗಳಲ್ಲಿ ಮಾಲಿನ್ಯ ನಿಯಂತ್ರಣ ಮಾಡುವುದೇ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸ್ಥಳೀಯ ಸರ್ಕಾರದೊಂದಿಗೆ ಹೊಸ ಯೋಜನೆಯನ್ನು ರೂಪಿಸಲು ಹಣಕಾಸು ನೆರವು ನೀಡುವುದಾಗಿ ತಿಳಿಸಿದರು. ದೆಹಲಿ-ಎನ್‍ಸಿಆರ್, ಪಂಜಾಬ್, ಹರಿಯಾಣದಲ್ಲಿ ಮಿತಿ ಮೀರಿದ ಮಾಲಿನ್ಯ ನಿಯಂತ್ರಿಸಲು ಹಸಿರು ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಕೂಡ ಅನೇಕ ಬಾರಿ ಸರ್ಕಾರಗಳಿಗೆ ಸಲಹೆ ಮಾಡಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮಾಲಿನ್ಯ ನಿಯಂತ್ರಿಸಲು ಸರ್ಕಾರ ಮುಂದಾಗಿದೆ ಎಂದರು.

>  33 ಲಕ್ಷ ಮನೆ ನಿರ್ಮಾಣ
ನವದೆಹಲಿ,ಫೆ.1-ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ 2022ರ ವೇಳೆಗೆ ದೇಶದಲ್ಲಿ 33 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.   2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ 75 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ಸೂರು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂರು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಹಣಕಾಸು ಖಾತೆ ಹೊಂದಿರುವ ಅರುಣ್ ಜೇಟ್ಲಿ ತಿಳಿಸಿದರು.   ಗ್ರಾಮೀಣ ಭಾಗದಲ್ಲಿ 2018-19ನೇ ಸಾಲಿನಲ್ಲಿ ಈ ಯೋಜನೆ ಕಾರ್ಯಕರ್ತಗೊಳ್ಳಲಿದ್ದು , ಬಡವರು ಮತ್ತು ಮಧ್ಯಮ ವರ್ಗದವರ ಜೀವನದತ್ತ ಹೆಚ್ಚು ಗಮನಹರಿಸಲಾಗುತ್ತಿದೆ ಎಂದರು. ಪ್ರತಿಯೊಬ್ಬರಿಗೂ ಒಂದು ಸೂರು, ಕನಿಷ್ಟ ಮೂಲಭೂತ ಸೌಕರ್ಯ, ಕುಡಿಯುವ ನೀರು, ರಸ್ತೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ದವಾಗಿದೆ ಎಂದು ಹೇಳಿದರು.

>  ಎರಡು ಕೋಟಿ ಶೌಚಾಲಯ ನಿರ್ಮಾಣ:
ಸ್ವಚ್ಚತೆಗೆ ಆದ್ಯತೆ ನೀಡಿರುವ ಸರ್ಕಾರ ಗ್ರಾಮೀಣ ಭಾಗವೂ ಸೇರಿದಂತೆ ಅಗತ್ಯವಿರುವೆಡೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಿದ್ದು, ಪ್ರಸಕ್ತ ವರ್ಷ ಎರಡು ಕೋಟಿ ಶೌಚಾಲಯ ನಿರ್ಮಾಣದ ಗುರಿ ಹೊಂದಿದೆ.

> 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್
ನವದೆಹಲಿ, ಫೆ.1- ಉಜ್ವಲ ಯೋಜನೆಯಡಿ ಎಂಟು ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಿಸುವ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಹಣಕಾಸು ಸಚಿವ ಅರುಣ್‍ಜೇಟ್ಲಿ ಅವರು ಇಂದು ಮಂಡಿಸಿದ ಬಜೆಟ್‍ನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದು, ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಉಚಿತ ಗ್ಯಾಸ್ ವ್ಯವಸ್ಥೆ ಒದಗಿಸುವ ಯೋಜನೆಯನ್ನು ಪ್ರಕಟಿಸಿದರು.  ದೇಶಾದ್ಯಂತ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಸಿಲಿಂಡರ್ ಗ್ಯಾಸ್ ವ್ಯವಸ್ಥೆ ಒದಗಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

> ರೈತರ ಸಾಲಕ್ಕಾಗಿ 11ಲಕ್ಷ ಕೋಟಿ ರೂ. ನಿಗದಿ
ನವದೆಹಲಿ, ಫೆ.1- ರೈತರಿಗೆ ಸಾಂಸ್ಥಿಕ ಸಾಲ ನೀಡಲು 11ಲಕ್ಷ ಕೋಟಿ ರೂ. ಅನುದಾನವನ್ನು ಮೀಸಲಿರಿಸಿರುವುದಾಗಿ ವಿತ್ತ ಸಚಿವ ಅರುಣ್‍ಜೇಟ್ಲಿ ತಿಳಿಸಿದರು.
ಇಂದು ಮಂಡಿಸಿದ ಆಯವ್ಯಯದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರೈತರಿಗೆ ವಿವಿಧ ಸಾಲಗಳನ್ನು ವಿತರಿಸಲು 11 ಲಕ್ಷ ಕೋಟಿ ಅನುದಾನವನ್ನು ಮೀಸಲಿರಿಸಿರುವುದಾಗಿ ಹೇಳಿದರು.  ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

> 2 ಕೋಟಿ ಶೌಚಾಲಯ ನಿರ್ಮಾಣ
ನವದೆಹಲಿ, ಫೆ.1- ಸ್ವಚ್ಛಭಾರತ ನಿರ್ಮಾಣದ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ವರ್ಷ ಎರಡು ಕೋಟಿ ಶೌಚಾಲಯ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎಂದು ಹಣಕಾಸು ಸಚಿವ ಅರುಣ್‍ಜೇಟ್ಲಿ ತಿಳಿಸಿದರು.  ತಮ್ಮ ಬಜೆಟ್ ಪ್ರಸ್ತಾಪದಲ್ಲಿ ಈ ವಿಷಯ ತಿಳಿಸಿದ ಅವರು, ಈ ವರ್ಷದಲ್ಲಿ ದೇಶಾದ್ಯಂತ 2 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗವುದು ಎಂದು ಹೇಳಿದರು.

ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ
> ನವದೆಹಲಿ, ಫೆ.1- ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವ ಅರುಣ್‍ಜೇಟ್ಲಿ ತಿಳಿಸಿದರು.
ತಮ್ಮ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನವೋದಯ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಲಾಗುವುದು.   ಪ್ರೀನರ್ಸರಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು ಎಂದು ಅವರು ತಿಳಿಸಿದರು.

> ಮೀನುಗಾರಿಕೆ 10 ಸಾವಿರ ಕೋಟಿ
ನವದೆಹಲಿ, ಫೆ.1- ಮೀನುಗಾರಿಕೆಗೆ 10 ಸಾವಿರ ಕೋಟಿ ರೂ. ಅನುದಾನ ಒದಗಿಸಲು ಉದ್ದೇಶಿಸಲಾಗಿದೆ. ಬಿದಿರು ಕೃಷಿಗೆ 1290ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದರು. ತಮ್ಮ ಬಜೆಟ್ ಭಾಷಣದಲ್ಲಿ ಈ ವಿಷಯ ತಿಳಿಸಿದ ಅವರು ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಅಭಿವೃದ್ಧಿಪಡಿಸುವ ಸಂಬಂಧ 10 ಸಾವಿರ ಕೋಟಿ ಅನುದಾನ ಹಾಗೂ ಬಿದಿರು ಕೃಷಿ ಅಭಿವೃದ್ಧಿಗೊಳಿಸುವ ಸಂಬಂಧ 1290 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

>  ರೈತರು ಅಧಿಕ ಉತ್ಪಾದನೆಗೆ ಒತ್ತು ನೀಡಲಾಗುವುದು. ಭಾರತೀಯ ಆರ್ಥಿಕತೆ 2018-19ನೇ ಸಾಲಿನ ದ್ವಿತಿಯಾರ್ಧದಲ್ಲಿ ಶೇ 7.2-7.5 ಬೆಳವಣಿಗೆ ಕಾಣಲಿದೆ ಎಂದರು.

 

Arun-Jaitly--01

> 2018-2019ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ
>  ಕೇಂದ್ರ ಸರಕಾರ ಮಂಡಿಸುತ್ತಿರುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಇದಾಗಿದೆ
>  ಸಂಸತ್ ಭವನ ತಲುಪಿದ 2018-19ನೇ ಸಾಲಿನ ಬಜೆಟ್ ಪ್ರತಿಗಳು
>  ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ

ಈ ಬಾರಿ ಹಿಂದಿಯಲ್ಲಿ ಆಯವ್ಯಯ ಮಂಡನೆ : 
ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರ ಈ ಬಾರಿಯ ಆಯವ್ಯಯ ಮಂಡನೆಯಲ್ಲಿ ಹಲವು ಸಂಪ್ರದಾಯಗಳನ್ನು ಮುರಿಯುತ್ತಿದೆ. ಇದೇ ಮೊದಲ ಬಾರಿಗೆ ಆಯವ್ಯಯ ಭಾಷಣವನ್ನು ಹಿಂದಿಯಲ್ಲಿ ಮಂಡಿಸಲಾಗುತ್ತದೆ. ಸ್ವತಂತ್ರ ನಂತರದಲ್ಲಿ ಪಟ್ಟು 37 ಮಂದಿ ಬಜೆಟ್ ಮಂಡಿಸಿದ್ದು ಇಲ್ಲಿಯವರೆಗೂ ಎಲ್ಲ ಅರ್ಥ ಸಚಿವರು ಆಂಗ್ಲ ಭಾಷೆಯಲ್ಲಿ ಆಯವ್ಯಯ ಮಂಡಿಸುತ್ತಿದ್ದರು. 2014ರಲ್ಲಿ ಅಸ್ತಿತ್ವಕ್ಕೆ ಬಂದ ಎನ್’ಡಿಎ ಸರ್ಕಾರದ ಅರ್ಥ ಸಚಿವ ಅರುಣ್ ಜೇಟ್ಲಿ ಕಳೆದ 4 ಬಜೆಟ್’ಗಳನ್ನು ಇಂಗ್ಲಿಷ್’ನಲ್ಲಿ ಮಂಡಿಸಿದ್ದಾರೆ.

ಈ ಬಾರಿ ಹಿಂದಿಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯರಿಗೆ ಅರ್ಥವಾಗುವ ಭಾಷೆ ಹಿಂದಿಯಾದ ಕಾರಣ ಹಿಂದಿಯಲ್ಲಿ ಭಾಷಣ ಮಂಡಿಸಿಲಿದ್ದಾರಂತೆ. ಆದರೆ ದಕ್ಷಿಣ ಭಾರತದ ಮಂದಿಗೆ ಹಿಂದಿ ಇಂದಿಗೂ ಕಬ್ಬಿಣದ ಕಡಲೆಕಾಯಿ. ಇದರ ಜೊತೆ ಫೆಬ್ರವರಿ 1ರಂದು ಮಂಡನೆಯಾಗುತ್ತಿರುವುದು ಕೂಡ ನೂತನ ಸಂಪ್ರದಾಯ. ಹಲವು ವರ್ಷಗಳಿಂದ ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತಿತ್ತು. ಕಳೆದ ವರ್ಷ ರೈಲ್ವೆ ಬಜೆಟ್ ಅನ್ನು ಹಣಕಾಸು ಆಯವ್ಯಯಕ್ಕೆ ಸೇರಿಸಲಾಗಿತ್ತು. ಜಿಎಸ್’ಟಿ ಜಾರಿಯ ನಂತರ ಮಂಡನೆಯಾಗುತ್ತಿರುವ ಮೊದಲ ಆಯವ್ಯಯ ಕೂಡ ಇದಾಗಿದೆ.

ಸಂಸತ್ ಭವನಕ್ಕೆ ತಲುಪಿದ ವಿತ್ತ ಸಚಿವ ಜೇಟ್ಲಿ : 

DU6-gAGUMAELFPm

ಲೋಕಸಭೆಯಲ್ಲಿ 2018-19ನೇ ಸಾಲಿನ ಕೇಂದ್ರ ಸರಕಾರದ ಸಾಮಾನ್ಯ ಬಜೆಟ್ ಮಂಡನೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ತಂಡ ಸಜ್ಜಾಗಿದೆ. ಬಜೆಟ್ ನ ಸೂಟ್ ಕೇಸ್ ನೊಂದಿಗೆ ಸಚಿವ ಅರುಣ್ ಜೇಟ್ಲಿ ಸಂಸತ್ ಭವನ ತಲುಪಿದ್ದಾರೆ. ಕೇಂದ್ರ ಸಚಿವ ಸಂಪುಟದ ವಿಶೇಷ ಸಭೆಯ ಅನುಮೋದನೆ ಬಳಿಕ ಸಚಿವ ಜೇಟ್ಲಿ ಬೆಳಗ್ಗೆ 11:00 ಗಂಟೆಗೆ ಬಜೆಟ್ ಮಂಡಿಸಲಿರುವರು.

ಬಜೆಟ್ ಮಂಡನೆಗೆ ಲೋಕಸಭೆಗೆ ಆಗಮಿಸುವ ಮೊದಲು ಸಚಿವ ಜೇಟ್ಲಿ ಅವರು ತಮ್ಮ ತಂಡದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಬಜೆಟ್ ನ ಬಗ್ಗೆ ಚರ್ಚಿಸಿದರು. ಜೇಟ್ಲಿ ಅವರೊಂದಿಗೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ , ಹಣಕಾಸು ಸಚಿವಾಲಯದ ಅಧಿಕಾರಿಗಳು ಸಾಥ್ ನೀಡಿದರು. ಕಳೆದ ಆರು ತಿಂಗಳ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದ ಬಳಿಕ ಕೇಂದ್ರ ಸರಕಾರ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದೆ.ವಿತ್ತ ಸಚಿವ ಜೇಟ್ಲಿ ಐದನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ.

 

Facebook Comments

Sri Raghav

Admin