ಕೇಂದ್ರ ಸಚಿವ ಸಂಪುಟದಲ್ಲಿ ಪ್ರಭಾಕರ್ ಕೋರೆಗೆ ಚಾನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Prabhakar--01

ಬೆಂಗಳೂರು, ಜು.27-ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಪ್ರಭಾಕರ್ ಕೋರೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆಗಳಿವೆ. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಕೋರೆ ಅವರು ಹೈದರಾಬಾದ್ ಕರ್ನಾಟಕ ಹಾಗೂ ರಾಜ್ಯದ ಉದ್ದಗಲಕ್ಕೂ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದ್ದು ಸಾಕಷ್ಟು ಪ್ರಭಾವ ಬೀರಿದ್ದಾರೆ.  ಬಿಜೆಪಿಯ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ಕೋರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಒಲವು ಹೊಂದಿದ್ದಾರೆ. ಈಗಾಗಲೇ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಕೋರೆ ಅವರು ಕೇಂದ್ರ ಸಚಿವರಾದರೆ ಈ ಭಾಗದಲ್ಲಿ ಬಿಜೆಪಿ ಮತ್ತಷ್ಟು ಸಂಘಟಿತವಾಗಿ ವರ್ಚಸ್ಸು ಹೆಚ್ಚುತ್ತದೆ ಎಂಬ ಬಲವಾದ ನಂಬಿಕೆ ಇದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದಲೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿರುವ ಬಿಜೆಪಿ ಈಗ ಪ್ರಮುಖ ದಾಳವನ್ನು ಪ್ರಯೋಗಿಸಿದೆ. ಈಗಾಗಲೇ ರಾಜ್ಯವನ್ನು ಪ್ರತಿನಿಧಿಸಿ ಕೇಂದ್ರದಲ್ಲಿ ಸಚಿವರಾಗಿರುವ ಅನಂತಕುಮಾರ್, ಡಿ.ವಿ.ಸದಾನಂದಗೌಡ ಹಾಗೂ ರಮೇಶ್ ಜಿಗಜಿಣಗಿ ಒಂದೊಂದು ಸಮುದಾಯವನ್ನು ಪ್ರತಿನಿಧಿಸಿದರೆ ಸಿದ್ದೇಶ್ವರ ಅವರ ರಾಜೀನಾಮೆ ನಂತರ ಲಿಂಗಾಯತ ಸಮುದಾಯಕ್ಕೆ ಸ್ಥಾನ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದನ್ನು ಹೋಗಲಾಡಿಸಿ ಪ್ರಭಾವಿ ನಾಯಕರಾಗಿರುವ ಪ್ರಭಾಕರ್ ಕೋರೆ ಅವರನ್ನು ಕೇಂದ್ರ ಸಚಿವರನ್ನಾಗಿ ತೆಗೆದುಕೊಂಡರೆ ಅದು ಮುಂದಿನ ಚುನಾವಣೆಗೆ ಸಹಕಾರಿ ಆಗಲಿದೆ. ಸದ್ಯದಲ್ಲಿಯೇ ಸಂಪುಟ ವಿಸ್ತರಣೆಯಾಗಲಿದ್ದು, ಕೇಂದ್ರ ನಾಯಕರು ಕರ್ನಾಟಕ ರಾಜ್ಯದಲ್ಲಿಯೂ ಆಧಿಪತ್ಯ ಸ್ಥಾಪಿಸಲು ಬಿಜೆಪಿ ಕೇಂದ್ರ ನಾಯಕರು ಸಾಕಷ್ಟು ತಂತ್ರಗಾರಿಕೆ ಬಳಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin