ಕೇಂದ್ರ ಸರ್ಕಾರದ ವಿರುದ್ಧ ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

TBJ

ಬೆಂಗಳೂರು, ಡಿ.14- ಈರುಳ್ಳಿ, ಕೊಬ್ಬರಿ, ತೊಗರಿ, ಉದ್ದು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳು ಏಳು ದಿನಗಳಿಂದಲೂ ಈರುಳ್ಳಿ ಖರೀದಿ ಕೇಂದ್ರಗಳನ್ನು ನಡೆಸಲಾಗಿದ್ದು, 11,452 ರೈತರಿಂದ 7.37 ಲಕ್ಷ ಟನ್ ಈರುಳ್ಳಿಯನ್ನು 58 ಕೋಟಿ ರೂ. ಖರ್ಚು ಮಾಡಿ ಖರೀದಿ ಮಾಡಲಾಗಿದೆ. ಸರ್ಕಾರಕ್ಕೆ ಇದರಿಂದ 49 ಕೋಟಿ ರೂ. ನಷ್ಟವಾಗಿದೆ. ಪ್ರತಿ ಕೆಜಿಗೆ 6.40ಪೈಸೆಯಂತೆ ಖರೀದಿ ಮಾಡಲಾಗಿದೆ.

ಅದನ್ನು ಮರು ಮಾರಾಟ ಮಾಡಲು 6 ಪೈಸೆಗೂ ಕೇಳುತ್ತಿಲ್ಲ. ಜನರು ಹೆಚ್ಚಾಗಿ ಈರುಳ್ಳಿ ಬಳಸುತ್ತಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ. ಆದರೂ ರೈತರ ನೆರವಿಗೆ ಧಾವಿಸುವ ಸಲುವಾಗಿ ಈರುಳ್ಳಿ ಖರೀದಿಸಿರುವುದಾಗಿ ಹೇಳಿದರು. ಕೊಬ್ಬರಿ ಬೆಲೆ ಕಳೆದ ಮೂರು ತಿಂಗಳಿಂದ ಕುಸಿತ ಕಂಡಿದೆ. ಕ್ವಿಂಟಾಲ್‍ಗೆ 6ಸಾವಿರ ರೂ. ಆಗಿದೆ. ಕೇಂದ್ರ ಸರ್ಕಾರ 6240ರೂ.ಗಳನ್ನು ಪ್ರತಿ ಕ್ವಿಂಟಾಲ್‍ಗೆ ನಿಗದಿ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ 8 ಕಡೆ ನಫೆಡ್ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಎಲ್ಲಿಯೂ ಖರೀದಿ ಆರಂಭಿಸಲಾಗಿಲ್ಲ. ರಾಜ್ಯ ಸರ್ಕಾರ ಒಂದು ಸಾವಿರ ರೂ. ಬೆಂಬಲ ಬೆಲೆ ನೀಡಲು ಸಿದ್ಧವಿದೆ. ಇದರಿಂದ ರೈತರಿಗೆ 7240ರೂ. ಸಿಗಲಿದೆ. ಆದರೂ ಕೇಂದ್ರ ಸರ್ಕಾರದ ಅಧಿಕಾರಿಗಳು ಖರೀದಿಗೆ ಮುಂದಾಗುತ್ತಿಲ್ಲ ಎಂದರು.

ತಾಲ್ಲೂಕು ಕೇಂದ್ರಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ನಿರಂತರವಾಗಿ ಕೇಂದ್ರ ಸಚಿವರ ಜತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ತೊಗರಿ ಮತ್ತು ಉದ್ದು ಬೆಳೆ ಕೈಗೆ ಬಂದಿದ್ದು, ಡಿ.15ರಿಂದ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ 5050ರೂ. ದರ ನಿಗದಿ ಪಡಿಸಿದೆ. ರಾಜ್ಯ ಸರ್ಕಾರ ಎಲ್ಲೆಡೆ ಖರೀದಿ ಕೇಂದ್ರಗಳನ್ನು ಆರಂಭಿಸಿ ತೊಗರಿ ಮತ್ತು ಉದ್ದು ಬೆಳೆಗಳನ್ನು ಖರೀದಿಸಲಿದೆ ಎಂದು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin