‘ಕೇವಲ ಭಾಷಣವೇ ಮೋದಿ ಸಾಧನೆ’ : ಖರ್ಗೆ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

kharge

ಬೆಂಗಳೂರು, ಆ.15-ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಮಾತಿನಲ್ಲೇ ಮನೆ ಕಟ್ಟಿದ್ದಾರೆ. ಸಾಧನೆ ಶೂನ್ಯ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಆಡಳಿತದಲ್ಲಿ ಅವರ ಮಾತೇ ಸಾಧನೆಯಾಗಿದೆ. ಯಾವುದೇ ಜನಪರ ಕೆಲಸಗಳು ಆಗಿಲ್ಲ. ಇಂದು ಮಾಡಿದ ಭಾಷಣದಲ್ಲಿ ಯಾವುದೇ ರೀತಿಯ ಹೊಸ ಅಂಶಗಳಿಲ್ಲ. ಸಣ್ಣಪುಟ್ಟ ವಿಷಯಗಳನ್ನು ಕೆಂಪುಕೋಟೆ ಮೇಲೆ ನಿಂತು ಹೇಳುತ್ತಾರೆ ಎಂದು ಟೀಕಿಸಿದರು.  ಅವರು ಹೇಳಿರುವ ಹೇಳಿಕೆಯಲ್ಲಿ ಬಹುತೇಕ ಎಲ್ಲಾ ಅಂಶಗಳು ಸುಳ್ಳು. ಕುಗ್ರಾಮಗಳಿಗೆ ವಿದ್ಯುತ್, ರಸ್ತೆ ಸಂಪರ್ಕ ಕಲ್ಪಿಸಿದ್ದು, ಯುಪಿಎ ಸರ್ಕಾರ. ಅದನ್ನು ನಮ್ಮ ಸರ್ಕಾರದ ಸಾಧನೆ ಎಂದು ಮೋದಿ ಹೇಳಿಕೊಂಡಿದ್ದಾರೆ.

ಅಡುಗೆ ಅನಿಲ ಸಬ್ಸಿಡಿಯಲ್ಲಿ 10 ಸಾವಿರ ಕೋಟಿ ಲಾಭ ಬಂದಿದೆ ಎಂದು ಹೇಳಿದ್ದಾರೆ. ಸಿಎನ್‍ಜಿಯಿಂದ ವಾಸ್ತವಾಂಶ ಅರಿಯಬೇಕು. ಇದರ ಲಾಭಾಂಶ ಯಾರಿಗೆ ದಕ್ಕಿದೆ ಎಂಬುದು ಗೊತ್ತಾಗುತ್ತದೆ ಎಂದು ಖರ್ಗೆ ಹೇಳಿದರು. ರೈಲ್ವೆ ಬಜೆಟ್‍ನ್ನು ಸಾಮಾನ್ಯ ಬಜೆಟ್‍ನೊಂದಿಗೆ ಸೇರ್ಪಡೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವಿವಿಧ ಇಲಾಖೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಿಗಮ ಮಂಡಳಿಗಳನ್ನು ರಚಿಸಿ ಹೆಚ್ಚಿನ ಅನುದಾನ, ಸ್ವಾಯತ್ತತೆ ನೀಡಿ ಅಭಿವೃದ್ಧಿ ಮಾಡಲಾಗುತ್ತಿತ್ತು. ಆದರೆ ಈಗ ಸೇರ್ಪಡೆ ಮಾಡುವ ಮೂಲಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇದು ಅವರ ಸಾಧನೆ ಎಂದು ಖರ್ಗೆ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin