ಕೇವಲ 500 ರೂ.ನಲ್ಲಿ 2 ಬಾರಿ ಗೋವಾಗೆ ಬಂದು ಹೋದ ಕೇಜ್ರಿವಾಲ್..!
ನವದೆಹಲಿ, ಆ.9- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂಬರುವ ಗೋವಾ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. 2017ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 40 ಸ್ಥಾನಗಳಿಗೂ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಈಗಾಗಲೇ ಗೋವಾಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಶಿಷ್ಟಾಚಾರದಂತೆ ಗಣ್ಯರು ಭೇಟಿ ಮಾಡಿದ ವೇಳೆ ಆಯಾ ರಾಜ್ಯ ಸರ್ಕಾರಗಳು ಸಕಲ ವ್ಯವಸ್ಥೆ ಮಾಡಬೇಕಿದ್ದು, ಹಾಗೆಯೇ ಅರವಿಂದ್ ಕೇಜ್ರಿವಾಲ್ ಗೋವಾಕ್ಕೆ ಭೇಟಿ ನೀಡಿದ ವೇಳೆ ಗೋವಾ ಸರ್ಕಾರ ಮಾಡಿರುವ ವೆಚ್ಚ ಅಚ್ಚರಿಯನ್ನುಂಟು ಮಾಡುತ್ತದೆ.
ಅರವಿಂದ್ ಕೇಜ್ರಿವಾಲ್ ಅವರ ಎರಡು ಬಾರಿ ಗೋವಾ ಭೇಟಿ ವೇಳೆ ಸರ್ಕಾರ ಮಾಡಿರುವ ವೆಚ್ಚ ಕೇವಲ 500 ರೂ.. ಈ ಮಾಹಿತಿಯನ್ನು ಸ್ವತಃ ಸಚಿವ ದಿಲೀಪ್ ಪರುಲೇಕರ್ ಬಹಿರಂಗಪಡಿಸಿದ್ದಾರೆ. ಕೇಜ್ರಿವಾಲ್ ಮೇ 22 ಹಾಗೂ ಜೂನ್ 28ರಂದು ಗೋವಾಕ್ಕೆ ಭೇಟಿ ನೀಡಿದ್ದು, ಶಿಷ್ಟಾಚಾರದಂತೆ ಅವರಿಗೆ ತಂಗಲು ಸರ್ಕಾರಿ ಅತಿಥಿ ಗೃಹದಲ್ಲಿ ವ್ಯವಸ್ಥೆ ಹಾಗೂ ಓಡಾಟಕ್ಕೆ ವಾಹನ ನೀಡಲಾಗಿತ್ತು. ಆದರೆ, ಅರವಿಂದ್ ಕೇಜ್ರಿವಾಲ್ ಈ ಸೌಲಭ್ಯಗಳನ್ನು ನಿರಾಕರಿಸಿದ ಕಾರಣ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದ ವೇಳೆ ಹೂವಿನ ಬೊಕ್ಕೆ ನೀಡಲಾಗಿತ್ತು. ಇದಕ್ಕಾಗಿ ಸರ್ಕಾರ 500 ರೂ. ವೆಚ್ಚ ಮಾಡಿದೆ ಎಂಬ ಮಾಹಿತಿ ನೀಡಿದ್ದಾರೆ.