ಕೈಕೊಟ್ಟ ಈಶಾನ್ಯ ಮಾರುತಗಳು : ತಣ್ಣಗಾಗಿದ್ದ ಕಾವೇರಿ ಕಿಚ್ಚು ಮತ್ತೆ ಮತ್ತೆ ಹೆಚ್ಚಾಗಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

Cauvery-Portest

ಬೆಂಗಳೂರು, ನ.12– ಸ್ವಲ್ಪ ದಿನಗಳಿಂದ ತಣ್ಣಗಿದ್ದ ಕಾವೇರಿ ಹೋರಾಟ ಮತ್ತೆ ಜೋರಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಶಾನ್ಯ ಮಾರುತ ಮಳೆ ತರಿಸದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗುತ್ತಿದೆ. ಚೆನ್ನಾಗಿ ಮಳೆ ತರಿಸುತ್ತೆ ಅಂತಾ ಅಂದ್ಕೊಂಡಿದ್ದ ಈಶಾನ್ಯ ಮಾರುತ ಶುರುವಾಗಿ ಒಂದೂವರೆ ತಿಂಗಳಾದರೂ ತೃಪ್ತಿಕರವಾಗಿಲ್ಲ. ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್ನಿಂದ ಇಲ್ಲಿಯವರೆಗೆ ಶೇ.81ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಮೂಲಕ ವರ್ಷದ ಕೊನೆಯ ಮೂರು ತಿಂಗಳು ಒಳ್ಳೆ ಮಳೆಯಾಗುತ್ತದೆ ಎಂದುಕೊಂಡಿದ್ದ ನಮ್ಮ ರಾಜ್ಯ ಸರ್ಕಾರ ಈಗ ಮತ್ತೊಂದು ಕಾವೇರಿ ಕಾನೂನು ಹೋರಾಟಕ್ಕೆ ಅಣಿಯಾಗ್ತಿದೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಕೋರಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಯೋಚಿಸುತ್ತಿದೆ. ಈ ಹಿಂದಿನ ಆದೇಶದಂತೆ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡಲು ಅಸಾಧ್ಯ ಎಂಬ ವಾದವನ್ನು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿರುವ ನಮ್ಮ ಕಾನೂನು ತಂಡದೊಂದಿಗೆ ಸಮಾಲೋಚಿಸಿದ್ದಾರೆ. ಅಕ್ಟೋಬರ್‍ನಿಂದ ಆರಂಭವಾಗುವ ಈಶಾನ್ಯ ಮಾರುತ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಉತ್ತಮ ಮಳೆ ತರಿಸಲಿದೆ ಎಂದು ಅಂದಾಜಿಸಲಾಗಿತ್ತು. ಡಿಸೆಂಬರ್‍ಗೆ ಮಾರುತ ಕೊನೆಗೊಳ್ಳಲಿದೆ. ಮಳೆ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಯುತ್ತಿರುವ ಕಾರಣ ಕಾವೇರಿಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.

ಒಂದು ವೇಳೆ ಈಗಲೂ ತಮಿಳುನಾಡಿಗೆ ದಿನಕ್ಕೆ 2 ಸಾವಿರ ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸಿದರೆ ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನೇ ನಂಬಿರುವ ಕಡೆಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 18ರಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೀಡಿದ್ದ ಆದೇಶವನ್ನು ಪಾಲಿಸುವುದು ಕಷ್ಟ ಎಂದು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕುಸಿದ ಮಳೆಯ ಪ್ರಮಾಣ

ರಾಜ್ಯದ ರಾಜಧಾನಿ ಕಳೆದ ಆರು ವರ್ಷದಲ್ಲಿಯೇ ಅತ್ಯಂತ ಕಡಿಮೆ ಮಳೆಯನ್ನು ಈ ವರ್ಷ ಕಂಡಿದೆ. ನಿರೀಕ್ಷೆಗೆ ತಕ್ಕಂತೆ ಮುಂಗಾರು ಸುರಿಯದಿರುವುದು, ಕೈಕೊಟ್ಟ ಹಿಂಗಾರಿನ ಪರಿಣಾಮ ನಗರದಲ್ಲಿ ಮಳೆ ಪ್ರಮಾಣ ದಾಖಲೆ ಮಟ್ಟದಲ್ಲಿ ಕುಸಿದಿದೆ. ಕಳೆದ ಅ.1ರಿಂದ ನ.10ರ ನಡುವೆ ಸಾಮಾನ್ಯವಾಗಿ ವಾಡಿಕೆ ಪ್ರಕಾರ ಹಿಂಗಾರು ಮಳೆ ಸುರಿಯಬೇಕಿತ್ತು. ಸರಾಸರಿ184 ಮಿ.ಮೀ. ಮಳೆ ಆಗಬೇಕಿತ್ತು. ದುರಾದೃಷ್ಟವೆಂದರೆ ಮುಂಗಾರು ಕೈಕೊಟ್ಟ ಜತೆಗೆ ಹಿಂಗಾರು ಕೂಡ ಕೈ ಹಿಡಿದಿಲ್ಲ. ಈ ಅವಧಿಯಲ್ಲಿ ನಗರದಲ್ಲಿ ಕೇವಲ 35 ಮಿ.ಮೀ. ಮಳೆಯಾಗಿದೆ.

2009ರಲ್ಲಿ ಕನಿಷ್ಠ ಮಳೆ:

2009ರ ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಕನಿಷ್ಠ ಮಳೆ ದಾಖಲಾಗಿತ್ತು. ಆ ವರ್ಷ ತಿಂಗಳಲ್ಲಿ ಕೇವಲ 25.4ಮಿ.ಮೀ. ಮಳೆ ದಾಖಲಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಮಳೆ ಆಗಿದೆ. ಹಳೆ ಇತಿಹಾಸ ಗಮನಿಸಿದಾಗ 2005ರ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಳೆ ಆಗಿದ್ದು ಗಮನಕ್ಕೆ ಬರುತ್ತದೆ. 605.6 ಮಿ.ಮೀ. ಮಳೆ ಆಗಿತ್ತು. ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಆಗಿದ್ದನ್ನು ಗಮನಿಸುವುದಾದರೆ 1997ರ ಜ.1ರಂದು178.1ಮಿ.ಮೀ. ಮಳೆ ಆಗಿದ್ದು ದಾಖಲೆ. ಇದು ಒಂದೇ ದಿನ ಅತಿ ಹೆಚ್ಚು ಸುರಿದ ಮಳೆಯ ಪ್ರಮಾಣ ಆಗಿದೆ.
ಕಳೆದ ಐದು ವರ್ಷದಲ್ಲಿ ಅಕ್ಟೋಬರ್‍ನಲ್ಲಿ ಸುರಿದ ಮಳೆಯ ಪ್ರಮಾಣ ಗಮನಿಸುವುದಾದರೆ 2009ರಲ್ಲಿ 25.4 ಮಿ.ಮೀ. ಮಳೆಯಾಗಿತ್ತು. 2010ರಲ್ಲಿ 141.3, 2011ರಲ್ಲಿ 170 ಮಿ.ಮೀ., 2012ರಲ್ಲಿ 83.2 ಮಿ.ಮೀ., 2013ರಲ್ಲಿ 100.2 ಮಿ.ಮೀ., 2014ರಲ್ಲಿ 343.8 ಮಿ.ಮೀ., 2015ರಲ್ಲಿ 47 ಮಿ.ಮೀ. ಹಾಗೂ ಈ ವರ್ಷ 35 ಮಿ.ಮೀ. ಮಳೆಯಾಗಿದೆ.

ರಾಜ್ಯದಲ್ಲೂ ಕೊರತೆ:

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ ಸರಾಸರಿ 155 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಶೇ.47ರಷ್ಟು ಕೊರತೆಯಲ್ಲಿ 34 ಮಿ.ಮೀ. ಮಾತ್ರ ಮಳೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin