ಕೈಕೊಟ್ಟ ಮೊಬೈಲ್ ಅಪ್ಲಿಕೇಷನ್, ಪರದಾಡಿದ ಮತದಾರರು

ಈ ಸುದ್ದಿಯನ್ನು ಶೇರ್ ಮಾಡಿ

Mobile--02

ಬೆಂಗಳೂರು, ಮೇ 12- ವಿಧಾನಸಭೆ ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷÀನ್ ಕೈಕೊಟ್ಟು ಮತದಾರರು ಪರದಾಡಿದ ಪ್ರಸಂಗ ಜರುಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ಮತ್ತು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ನೀಡಲು ಹಲವಾರು ಮೊಬೈಲ್ ಅಪ್ಲಿಕೇಷನ್‍ಗಳನ್ನು ರೂಪಿಸಲಾಗಿದೆ. ಅದರಲ್ಲಿ ಕೆಲವು ಚುನಾವಣಾ ಆಯೋಗದ ಅಧಿಕೃತ ಅಪ್ಲಿಕೇಷನ್‍ಗಳು ಕೂಡ ಇವೆ. ಕರ್ನಾಟಕದಲ್ಲಿ ಚುನಾವಣೆ ಎಂಬ ಮೊಬೈಲ್ ಅಪ್ಲಿಕೇಷನ್ ಬಳಸಲಾಗಿದೆ. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

ಈ ಅಪ್ಲಿಕೇಷನ್‍ನಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಗುರುತಿನ ಸಂಖ್ಯೆ ಮತ್ತು ಹೆಸರಿನ ಮೂಲಕ ಹುಡುಕುವುದು, ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ, ಚುನಾವಣಾ ವೇಳಾ ಪಟ್ಟಿ, ಅಧಿಕಾರಿಗಳ ಪಟ್ಟಿ, ಕ್ಷೇತ್ರದ ವಿವರಗಳು, ಮತದಾನದ ಕೇಂದ್ರ, ಆರಕ್ಷಕ ಠಾಣೆ, ಆರೋಗ್ಯ ಸೌಲಭ್ಯಗಳು, ವಿಕಲಚೇತನರ ನೋಂದಣಿ, ಗಾಲಿ ಕುರ್ಚಿಗಾಗಿ ನೋಂದಣಿ, ಜಿಎಸ್‍ಐ ಮಾರ್ಕಿಂಗ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಆದರೆ, ಮತದಾನದ ವೇಳೆ ಚುನಾವಣಾ ಅಪ್ಲಿಕೇಷನ್ ಜಾಮ್ ಆಗಿ ಸಾರ್ವಜನಿಕರಿಗೆ ಅಲಭ್ಯವಾಯಿತು.

ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿದರೆ ಪ್ಲೀಸ್ ಎಂಟರ್ ವ್ಯಾಲಿಡ್ ನಂಬರ್ ಎಂಬ ಸಂದೇಶ ಪದೇ ಪದೇ ಬರುತ್ತಿತ್ತು. ಇನ್ನು ಹೆಸರಿನ ಮೂಲಕ ಹುಡುಕುವ ಸೌಲಭ್ಯದಲ್ಲಿ ನೋ ರೆಕಾಡ್ಸ್ ಮ್ಯಾಚ್ಡ್ ಎಂಬ ಸಂದೇಶ ಬರುತ್ತಿತ್ತು. ಬಹಳಷ್ಟು ಬಾರಿ ಇದನ್ನು ಪ್ರಯತ್ನಿಸಿದರೂ ಸಾರ್ವಜನಿಕರಿಗೆ ಉತ್ತಮ ಫಲಿತಾಂಶ ಸಿಗಲಿಲ್ಲ. ಇನ್ನು ಮತಗಟ್ಟೆ ಬಳಿ ಇರುವ ಪಕ್ಷಗಳ ಸಹಾಯ ಕೇಂದ್ರಗಳಲ್ಲೂ ಚುನಾವಣೆ ಅಪ್ಲಿಕೇಷನ್ ಮೂಲಕ ಮತದಾರರು ಕ್ರಮ ಸಂಖ್ಯೆ ಹುಡುಕಿಕೊಡಲು ಕಾರ್ಯಕರ್ತರು ಪ್ರಯತ್ನಿಸಿ ವಿಫಲರಾಗಿ ಕೊನೆಗೆ ಮುದ್ರಿತ ಮತದಾರರ ಪಟ್ಟಿಯ ಮೊರೆ ಹೋಗಬೇಕಾಯಿತು. ಚುನಾವಣಾ ಆಯೋಗ ಎಷ್ಟೆಲ್ಲಾ ಪೂರ್ವ ಸಿದ್ದತೆ ಕೈಗೊಂಡರೂ ಮತದಾರರ ಕ್ರಮ ಸಂಖ್ಯೆ ಹುಡುಕಿ ಕೊಡಲು ಹಳೆ ಪದ್ದತಿಗೆ ಮೊರೆ ಹೋಗಬೇಕಾದದ್ದು ವಿಪರ್ಯಾಸ.

ಎಸ್‍ಎಂಎಸ್ ಮೂಲಕ ಮಾಹಿತಿ ಪಡೆಯುವ ಸೇವೆ ಲಭ್ಯವಿದ್ದು, ಇದರ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಹೀಗಾಗಿ ಬಹುತೇಕರು ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ಕ್ರಮ ಸಂಖ್ಯೆ ಹುಡುಕಲು ಪ್ರಯತ್ನಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.   ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಸೂಕ್ತ ಪೂರ್ವ ತಯಾರಿ ಮಾಡಿಕೊಂಡಿದ್ದರೆ ಚುನಾವಣೆ ವೇಳೆ ಮತದಾರರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬಹುದಾಗಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin