‘ಕೈ’ಬಿಟ್ಟು ಕಮಲ ಹಿಡಿದ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad-Join-BJP

ಬೆಂಗಳೂರು,ಜ.2– ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿರುವ ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಇಂದು ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಆಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು.  ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತ್‍ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಶ್ರೀನಿವಾಸ್ ಪ್ರಸಾದ್ ಅವರನ್ನು ಬರಮಾಡಿಕೊಂಡರು.

ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್, ಬಿಜೆಪಿಗೆ ಬಂದಿರುವುದರಿಂದ ವಿಶೇಷವಾಗಿ ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಅವರು ಪ್ರತಿನಿಧಿಸುತ್ತಿದ್ದ ನಂಜನಗೂಡು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಕಳೆದ ಡಿ.24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶ್ರೀನಿವಾಸ್‍ಪ್ರಸಾದ್ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದರು. ಇದೀಗ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಭೀಮ ಬಲ ಬಂದಂತಾಗಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್‍ನ ಬಣ್ಣ ಬಯಲಾಗಲಿದೆ ಅಂತ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಲ್ಲಿ ಬಿಜೆಪಿಯ ಲೆಕ್ಕಚಾರ ಅಡಗಿದೆ. ಪ್ರಸಾದ್ ಸೇರ್ಪಡೆಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಇಪ್ಪತ್ತೆಂಟು ಸಾವಿರ ಮುನ್ನೂರ ಹನ್ನೆರಡು ಮತಗಳ ಪಡೆದಿದ್ದರು.

ಆಗ ಇಲ್ಲಿ ಬಿಜೆಪಿಗೆ ಬಿದ್ದದ್ದು ಏಳು ಸಾವಿರದ ಎಪ್ಪತ್ನಾಲ್ಕು ಮತಗಳು. ಈಗ ಶ್ರೀನಿವಾಸ ಪ್ರಸಾದರಿಗೆ ಹೆಚ್ಚು ಮತ ಲಭ್ಯವಾಗುವುದರಲ್ಲಿ ಅನುಮಾನಗಳಿಲ್ಲ. ಈ ಎಲ್ಲ ಲೆಕ್ಕಾಚಾರಗಳೊಂದಿಗೇ ಪ್ರಸಾದ್ ಕಮಲದ ತೆಕ್ಕೆ ಸೇರುತ್ತಿದ್ದಾರೆ. ಒಟ್ಟಿನಲ್ಲಿ ನಂಜನಗೂಡಿನ ರಾಜಕೀಯ ಕೆಸರಿನಲ್ಲಿ ಕಮಲ ಅರಳಿಸುವ ಸೂರ್ಯನಾಗಿ ಶ್ರೀನಿವಾಸ ಪ್ರಸಾದ್ ಹೊರಹೊಮ್ಮುತ್ತಾರಾ ಅನ್ನೋದಕ್ಕೆ ಉತ್ತರ ಸಿಗಲು ಹೆಚ್ಚು ಕಾಲ ದೂರವಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin