ಕೈ ಕೊಟ್ಟ ಹಿಂಗಾರು : ಬರ ಪೀಡಿತ ಪಟ್ಟಿಗೆ ಮತ್ತೆ 60 ತಾಲ್ಲೂಕುಗಳ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

baragala-3

ಬೆಂಗಳೂರು, ಡಿ.26- ಮುಂಗಾರಿನಂತೆ ಹಿಂಗಾರು ಮಳೆಯೂ ರಾಜ್ಯದಲ್ಲಿ ವಿಫಲವಾಗಿದ್ದು, ಬರದ ತೀವ್ರತೆ ಹೆಚ್ಚಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯ ಸರ್ಕಾರ ಮತ್ತೆ ಹಿಂಗಾರು ಬೆಳೆ ಬೆಳೆಯುವ ಪ್ರದೇಶಗಳ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಸಿದ್ಧತೆ ನಡೆಸಿದೆ. ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗೂ ಸುರಿದಿರುವ ಮಳೆ ಪ್ರಮಾಣವನ್ನು ಆಧರಿಸಿ ಬರಪೀಡಿತ ಪ್ರದೇಶಗಳ ಆಯ್ಕೆ ಮಾಡಲಾಗುತ್ತದೆ. ಕಳೆದ ವರ್ಷದಂತೆ ಈ ಬಾರಿಯೂ ಹಿಂಗಾರು ಮಳೆ ಬಹುತೇಕ ವಿಫಲವಾಗಿದೆ.ಇದರಿಂದಾಗಿ ರಾಜ್ಯದ 60ಕ್ಕೂ ಹೆಚ್ಚು ತಾಲ್ಲೂಕುಗಳು ಮತ್ತೆ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಯಾಗಲಿವೆ.

ರಾಜ್ಯ ಸರ್ಕಾರ ಈಗಾಗಲೇ ಹಿಂಗಾರು ಹಂಗಾಮಿನ ಬೆಳೆ ವಿಫಲವಾಗಿರುವ ತಾಲ್ಲೂಕುಗಳನ್ನು ಆಯ್ಕೆ ಮಾಡಿದ್ದು ಜನವರಿ ಮೊದಲ ವಾರದಲ್ಲಿ ಅಧಿಕೃತವಾಗಿ ಬರಪೀಡಿತ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.  ನೈರುತ್ಯ ಮುಂಗಾರು ವಿಫಲವಾಗಿದ್ದರಿಂದ ರಾಜ್ಯ 139 ತಾಲ್ಲೂಕುಗಳನ್ನು ಬರಪೀಡತ ಎಂದು ಘೋಷಣೆ ಮಾಡಿ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದ ಅಧ್ಯಯನ ತಂಡ ಬರ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ಕೇಂದ್ರಕ್ಕೆ ಸಲ್ಲಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಾರ ಬರಬೇಕಾಗಿರುವ 4700 ಕೋಟಿ ರೂ. ಹಣ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ 60ಕ್ಕೂ ತಾಲ್ಲೂಕುಗಳು ಬರಪೀಡಿತವಾಗಿವೆ.

ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ರಾಜ್ಯ ಸರ್ಕಾರ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೀದರ್ ಜಿಲ್ಲೆ ಹೊರತು ಪಡಿಸಿದರೆ ಉಳಿದ ಹಿಂಗಾರು ಬೆಳೆ ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಒಟ್ಟಾರೆ ಶೇ.30ಕ್ಕಿಂತಲೂ ಕಡಿಮೆ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದೆ.  ಆದರೂ ಕೂಡ ಬಹುತೇಕ ಬೆಳೆಗಳು ಬಿತ್ತನೆಯ ಹಂತದಲ್ಲೇ ಒಣಗಿವೆ. ಮತ್ತೆ ಹಿಂಗಾರು ಮಳೆ ಬರುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಬಿತ್ತ ಬೆಳೆಯೂ ಕೂಡ ಫಸಲು ಬರುವವರೆಗೂ ಉಳಿಯುವುದು ಕಷ್ಟ ಎಂದು ರೈತರ ಅಭಿಪ್ರಾಯ.

Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin