ಕೊತ್ತಂಬರಿ ಸೊಪ್ಪು ಬೆಳೆದು, ಬೀದಿಗೆ ಬಿದ್ದ ಈ ರೈತನ ಕಥೆ ಮನ ಕಲುಕುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

vijayapura
ವಿಜಯಪುರ, ಫೆ.5- ಭೀಕರ ಬರಗಾಲದಲ್ಲಿಯೂ ಎಲ್ಲೂ ಒಂದು ಹನಿ ನೀರು ಸಿಗದಿರುವ ಸಂದರ್ಭದಲ್ಲಿ ಮನೆ ಮಾರಿ ದೊರೆತ ಹಣದಲ್ಲಿ ಕೊಳವೆ ಬಾವಿ ಕೊರೆದು, ಕೊತ್ತಂಬರಿ ಸೊಪ್ಪನ್ನು ಬೆಳೆದ ರೈತ ಕೆ.ಜಿ. ಸೊಪ್ಪಿಗೆ 10 ರೂ ಸಹ ದೊರಕದೇ, ಬೀದಿ ಪಾಲಾಗಿರುವ ರೈತನ ವ್ಯಥೆ ಹೇಳತೀರದಾಗಿದೆ.ಶಿಡ್ಲಘಟ್ಟ ಬಳಿಯ ರೈತ ನಾಗರಾಜು ತನ್ನ ಒಂದು ಎಕರೆ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು, ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಮಾರಾಟ ಮಾಡಲು ಸಾಗಾಣಿಕೆ ವಾಹನಕ್ಕೆ 2500 ರೂ ಬಾಡಿಗೆ ಕೊಟ್ಟು, ಕೊಂಡೊಯ್ದು, ಅಲ್ಲಿನ ವ್ಯಾಪಾರಸ್ಥರು ಅರ್ಧ ಕೆ.ಜಿ ತೂಗುವ ಒಂದು ಕಟ್ಟಿಗೆ ಒಂದು ರೂ ಐವತ್ತು ಪೈಸೆಯಂತೆ ಕೇಳಿದಾಗ ಹೊಟ್ಟೆಯ ಉರಿ ತಾಳಲಾಗದೇ, ವಾಪಸ್ಸು ಬಂದು, ವಿಜಯಪುರ ಬಸ್ ನಿಲ್ದಾಣದ ಬಳಿ 5 ರೂಗೆ ಒಂದು ಕಟ್ಟಿನಂತೆ ಮಾರಾಟ ಮಾಡಲು ಹೊರಟರೆ ಶುಕ್ರವಾರ ಸಂತೆಯಾದ ಕಾರಣ ಇಲ್ಲಿಯೂ ಸಹ ಕೊತ್ತಂಬರಿ ಸೊಪ್ಪಿಗೆ ಕೊಂಚವೂ ಬೇಡಿಕೆ ಇಲ್ಲದೇ, ತಲೆಯ ಮೇಲೆ ಕೈ ಹೊತ್ತು, ಕುಳಿತಿದ್ದ.

ಪತ್ರಕರ್ತ ರೈತನನ್ನು ಮಾತನಾಡಿಸಿದಾಗ ಕಳೆದ ಎರಡು ಬಾರಿ ಮೆಂತ್ಯ ಸೊಪ್ಪು ಹಾಕಿ, ಆಗಲೂ ಸಹ ಬೆಳೆಗೆ ಹಾಕಿದ ಗೊಬ್ಬರದ ಕಾಸಿರಲಿ, ಕೀಳಿಸಿದ ಕೂಲಿ ಸಹ ಬಾರದೇ, ನಷ್ಟವಾಗಿದ್ದ ಕಾರಣ ಈ ಬಾರಿ ಬದಲಿ ಬೆಳೆಯಾಗಿ ಕೊತ್ತಂಬರಿ ಸೊಪ್ಪು ಹಾಕಿದ್ದೇ ಆದರೆ, ಬಾಡಿಗೆ ವಾಹನದ ಬಾಡಿಗೆಯೂ ಬಾರದಂತಾಗಿದೆ. ಅದಕ್ಕೂ ಸಾಲ ಹೇಳಲಾಗಿದೆ ಎಂದು ತಿಳಿಸಿ, ಮಾರುಕಟ್ಟೆಯಲ್ಲಿ ಈ ತೆರನಾದರೆ, ರೈತ ನಿರಂತರವಾಗಿ ಬೆಳೆದ ಬೆಳೆಗೆ ಬೆಲೆಯಿಲ್ಲದೇ, ವಿಷ ಕುಡಿದು, ಸಾಯದೇ, ಹೇಗೆ ತಾನೆ ಬದುಕಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದಿಂದ ದೊರೆಯುವ ವೈಜ್ಞಾನಿಕ  ಸಲಹೆಗಳಾಗಲೀ, ಸಹಾಯ ಧನವಾಗಲೀ, ಬೆಂಬಲ ಬೆಲೆಯಾಗಲೀ, ಬಡ್ಡಿ ರಹಿತ ಸಾಲವಾಗಲೀ, ಗಂಗಾ ಕಲ್ಯಾಣ ಯೋಜನೆಯಾಗಲೀ, ಇನ್ನಿತರೆ ರೈತರಿಗೋಸ್ಕರವೇ ಹಮ್ಮಿಕೊಂಡ ಹತ್ತು-ಹಲವಾರು ಯೋಜನೆಗಳ್ಯಾವುವೂ ಇಂತಹ ಬಡ ಬೋರೇಗೌಡನ ಕಷ್ಟಕ್ಕೆ ಆಗುವುದಿಲ್ಲವೆಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಗಿದ್ದು, ಎಲ್ಲಾ ಮಧ್ಯವರ್ತಿಗಳ ಪಾಲಿಗೆ ಹೋಗುತ್ತಿವೆ ಎಂಬುದಕ್ಕೆ ನಿದರ್ಶನವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin