ಕೊನೆಗೂ ಕರ್ನಾಟಕದ ಪ್ರತ್ಯೇಕ ನಾಡಧ್ವಜ ಅನಾವರಣ, ಹೇಗಿದೆ ನೋಡಿ ನಮ್ಮ ಹೊಸ ಕನ್ನಡ ದ್ವಜ

ಈ ಸುದ್ದಿಯನ್ನು ಶೇರ್ ಮಾಡಿ

Karnataka-Flag--Kannada-Fla

ಬೆಂಗಳೂರು, ಮಾ.8- ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ತನ್ನದೇ ಸ್ವಂತ ಧ್ವಜ ರೂಪಿಸಿಕೊಳ್ಳುವ ಪ್ರಕ್ರಿಯೆಗೆ ರಾಜ್ಯಸರ್ಕಾರದಿಂದ ಅಂತಿಮ ಮುದ್ರೆ ಬಿದ್ದಿದೆ. ತಜ್ಞರ ಸಮಿತಿ ವರದಿ ಆಧರಿಸಿ ಕೆಂಪು, ಹಳದಿ ಮತ್ತು ಬಿಳಿ ಬಣ್ಣ ಮಿಶ್ರಿತ ಧ್ವಜದ ಮಧ್ಯ ಭಾಗದಲ್ಲಿ ರಾಜ್ಯ ಸರ್ಕಾರದ ಚಿಹ್ನೆ ಇರುವ ಬಾವುಟವನ್ನು ಅಧಿಕೃತ ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ತಜ್ಞರ ಸಮಿತಿ ಇತ್ತೀಚಿಗೆ ನೀಡಿದ ವರದಿ ಆಧರಿಸಿ ರೂಪಿಸಲಾದ ಕನ್ನಡದ ಧ್ವಜವನ್ನು ಅಂಗೀಕರಿಸುವ ಕುರಿತು ಇತ್ತೀಚೆಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿತ್ತು.

ಉದ್ದೇಶಿತ ಧ್ವಜಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಾದರೂ ಕನ್ನಡ ಸಂಘಟನೆಗಳ ಜತೆ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಅದರಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಸಾಹಿತಿಗಳು, ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರೊಂದಿಗೆ ಸಭೆ ನಡೆಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನಪರಿಷತ್ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ್, ಹಂಪಾ ನಾಗರಾಜಯ್ಯ, ಕೆ.ಮರಳುಸಿದ್ದಪ್ಪ, ಕಮಲಾ ಹಂಪನ, ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್‍ಶೆಟ್ಟಿ, ಮುಖಂಡರಾದ ಶಿವರಾಮೇಗೌಡ, ಕನ್ನಡ ಪಕ್ಷದ ಅಧ್ಯಕ್ಷ ಪುರುಷೋತ್ತಮ್ ಮತ್ತಿತರರು ಭಾಗವಹಿದ್ದರು.

ಸಭೆಯಲ್ಲಿ ಕೆಲವರು ಧ್ವಜದ ಸ್ವರೂಪದ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದರಾದರೂ ಅಂತಿಮವಾಗಿ ರಾಜ್ಯ ಸರ್ಕಾರ ಕನ್ನಡ ಅಸ್ಮಿತೆಯನ್ನು ಗೌರವಿಸಿ ಸ್ವಂತ ಧ್ವಜ ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಜ್ಞರ ಸಮಿತಿ ವರದಿ ಆಧರಿಸಿ ಸಿದ್ಧಗೊಳಿಸುವ ಈ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳುವುದಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಶಿಫಾರಸು:

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ನಾಡಿಗಾಗಿ ಪ್ರತ್ಯೇಕ ಧ್ವಜ ಬೇಕೆಂದು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು ಈ ಕುರಿತು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಅದನ್ನು ಆಧರಿಸಿ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳು ಸದಸ್ಯರಾಗಿದ್ದವು. ಸಮಿತಿ ನೀಡಿದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿತ್ತು.
ಅಧಿಕೃತವಾದ ಧ್ವಜಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ, ಈ ಧ್ವಜದ ಅಸ್ಥಿತ್ವಕ್ಕಾಗಿ ಹೋರಾಟ ಮಾಡಿದ ಸಾಹಿತಿಗಳು ಮತ್ತು ಸಂಘಟನೆಗಳ ಜತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಬೇಕೆಂಬ ನಿಲುವು ಹೊಂದಿದ್ದ ನಾವು ಇಂದು ಸಭೆ ನಡೆಸಿದ್ದೇವೆ ಎಂದರು.

ಸಭೆಯಲ್ಲಿ ನವ ವಿನ್ಯಾಸದ ಧ್ವಜಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಈ ಹಿಂದೆ ಇದ್ದ ಧ್ವಜದ ಹಳದಿ, ಕೆಂಪು ಬಣ್ಣವನ್ನು ಉಳಿಸಿಕೊಂಡು ಬಿಳಿ ಬಣ್ಣವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ರಾಜ್ಯ ಸರ್ಕಾರದ ಚಿಹ್ನೆಯನ್ನು ಮಧ್ಯ ಭಾಗದಲ್ಲಿ ಅಳವಡಿಸಲಾಗಿದೆ. ವಿಶ್ವದ ಯಾವುದೇ ದೇಶದ ಧ್ವಜವಾದರೂ ಮೂರು ಬಣ್ಣವನ್ನು ಹೊಂದಿವೆ. ಹಾಗಾಗಿ ನಮ್ಮ ಕನ್ನಡ ಭಾವುಟಕ್ಕೂ ಮೂರು ಬಣ್ಣವನ್ನು ಜೋಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಧ್ವಜದಲ್ಲಿ ಯಾವುದೇ ಬರಹಗಳಿಲ್ಲ. ಹೀಗಾಗಿ ಅದು ತಿರುಗು ಮುರುಗು ಆಗುವ ಆತಂಕವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕನ್ನಡದ ಧ್ವಜವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಲು ಅವಕಾಶವಿಲ್ಲ. ಹೀಗಾಗಿ ಕೂಡಲೇ ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಸಂವಿಧಾನದಲ್ಲಿ ರಾಜ್ಯ ಸರ್ಕಾರಗಳು ಪ್ರತ್ಯೇಕ ಧ್ವಜ ರೂಪಿಸಿಕೊಳ್ಳುವುದಕ್ಕೆ ವಿರೋಧ ವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವೇ ಮಾನ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಮಾನ್ಯತೆ ನೀಡುವಂತೆ ಒತ್ತಾಯಿಸಲಾಗುವುದು. ದೇಶದಲ್ಲೇ ಕರ್ನಾಟಕ ಸ್ವಂತ ಧ್ವಜವನ್ನು ರೂಪಿಸಿಕೊಳ್ಳುತ್ತಿರುವುದು ಪ್ರಥಮವಾಗಿದೆ. ಇದು ಐತಿಹಾಸಿಕ ನಿರ್ಣಯ.

ರಾಜ್ಯದ ಧ್ವಜ ಯಾವಾಗಲೂ ರಾಷ್ಟ್ರ ಧ್ವಜಕ್ಕಿಂತಲೂ ಸ್ವಲ್ಪ ಕೆಳ ಭಾಗದಲ್ಲೇ ಹಾರೋಹಣಗೊಳ್ಳುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ರಾಷ್ಟ್ರಧ್ವಜಕ್ಕೂ ಅಗೌರವವಾದಂತಾಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು. ವಾಟಾಳ್ ನಾಗರಾಜ್ ಅವರು, ನವವಿನ್ಯಾಸ ಧ್ವಜಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬುದು ತಪ್ಪು ಮಾಹಿತಿ. ಇಂದಿನ ಸಭೆಗೆ ಅವರನ್ನೂ ಆಹ್ವಾನಿಸಲಾಗಿತ್ತು. ಕೋರ್ಟ್‍ನಲ್ಲಿ ಪ್ರಕರಣವೊಂದರ ವಿಚಾರಣೆ ಇರುವುದರಿಂದ ಅವರು ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸಿಎಂ ತಿಳಿಸಿದರು. ಸದಾ ಅವರ ಜತೆ ಹೋರಾಟ ಮಾಡುವ ಸಾ.ರಾ.ಗೋವಿಂದು, ಪ್ರವೀಣ್‍ಶೆಟ್ಟಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಸರ್ಕಾರದ ನಿರ್ಧಾರಕ್ಕೆ ಸ್ವಾಗತ:
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಾ.ರಾ.ಗೋವಿಂದು ಅವರು, ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಹೇಳಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.  ಮತ್ತೊಂದೆಡೆ ಮಾತನಾಡಿದ ಪ್ರವೀಣ್‍ಶೆಟ್ಟಿ ಅವರು, ಈವರೆಗೂ ಹಳದಿ ಮತ್ತು ಕೆಂಪು ಬಣ್ಣವನ್ನು ನಾವು ಒಪ್ಪಿಕೊಂಡಿದ್ದೆವೆ. ಆದರೆ ಅದನ್ನು ಮುಂದುವರೆಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಸರ್ಕಾರ ವಿವರಣೆ ನೀಡಿದೆ. ಅನಿವಾರ್ಯವಾಗಿ ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಇಷ್ಟು ದಿನ ಹಳದಿ ಮತ್ತು ಕೆಂಪು ಬಣ್ಣದ ಬಾವುಟದ ಜತೆ ನಮಗೆ ಭಾವನಾತ್ಮಕ ಸಂಬಂಧವಿತ್ತು. ಅದನ್ನು ಕಳೆದುಕೊಂಡ ವಿಷಾದ ಕಾಡುತ್ತಿದೆ ಎಂದು ಹೇಳಿದರು.

Facebook Comments

Sri Raghav

Admin